ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ: ಕಲಾಪ ನಾಳೆಗೆ ಮುಂದೂಡಿಕೆ

3 years ago

ಬೆಳಗಾವಿ: ಇತ್ತೀಚೆಗೆ ಅಗಲಿದ ವಿಧಾನಸಭೆ ಉಪಸಭಾದ್ಯಕ್ಷ ಆನಂದ್ ಮಾಮನಿ,‌ ಉತ್ತರ ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್, ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸಮದ್ ಸಿದ್ದಿಕಿ,‌ ಸೇರಿದಂತೆ ಹಲವು ಗಣ್ಯರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ವಿಧಾನಸಭೆ ಕಲಾಪ ನಾಳೆಗೆ‌ ಮುಂದೂಡಲಾಯಿತು.

ಸುವರ್ಣ ಸೌಧದಲ್ಲಿ ಇಂದಿನಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿದೆ ವಂದೇ ಮಾತರಂನೊಂದಿಗೆ ವಿಧಾನಸಭೆ ಕಲಾಪ ಆರಂಭವಾಯಿತು. ಕಾರ್ಯಕಲಾಪ ಪಟ್ಟಿಯಂತೆ ಸಂತಾಪ ಸೂಚನೆ ಕೈಗೆತ್ತಿಕೊಂಡ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪಸಭಾಧ್ಯಕ್ಷ ಆನಂದ್ ಮಾಮನಿ, ಮುಲಾಯಂ ಸಿಂಗ್ ಯಾದವ್, ರಾಜ್ಯಸಭಾ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ದಿಕಿ, ಮಾಜಿ ಶಾಸಕರಾದ ಜಬ್ಬಾರ್ ಖಾನ್ ಹೊನ್ನಳ್ಳಿ, ಶ್ರೀಶೈಲಪ್ಪ ಬಿದರೂರು, ಯಕ್ಷಗಾನ ಕಲಾವಿದ ಕುಂಬ್ಲೆ ಸುಂದರರಾವ್, ಎಸ್.ಎನ್.ಪಾಟೀಲ್ ಇವರ ನಿಧನವನ್ನು ಸದನದ ಗಮನಕ್ಕೆ ತಂದು ಸಂತಾಪ ಸೂಚಕ ನಿರ್ಣಯ ಮಂಡಿಸಿದರು.

ಈ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಪ ಸಭಾದ್ಯಕ್ಷ, ಆನಂದ್ ಮಾಮನಿ ಹಾಗೂ ನಮ್ಮ ಕುಟುಂಬದ ನಡುವೆ ಹಲವು ವರ್ಷಗಳ ಸಂಬಂಧ ಹಾಗೂ ಒಡನಾಟ ಇದೆ. ನಾನು‌ ಹಾಗೂ ಮಾಮನಿ ಜೊತೆಗೆ ಬಿಜೆಪಿ ಸೇರ್ಪಡೆ ಆಗಿದ್ದೆವು. ಅವರು ಶಾಸಕರಾಗಿ ಎರಡು ಮೂರು ತಿಂಗಳಲ್ಲಿ‌ ಸರ್ಕಾರದ ವ್ಯವಸ್ಥೆಯನ್ನು ತಿಳಿದುಕೊಂಡಿದ್ದರು. ಅವರು ಮಾದರಿ ಶಾಸಕಾಗಿದ್ದರು ಎಂದು ನಾನೇ ಶ್ಲಾಘನೆ ಮಾಡಿದ್ದೆ ಎಂದರು.

ಮಾಮನಿ ಅವರಿಗೆ ಅನಾರೋಗ್ಯ ಇದ್ದಾಗಲೂ ಅದನ್ನು ಅವರು ಯಾರಲ್ಲೂ ಹೇಳಿಕೊಂಡಿರಲಿಲ್ಲ. ಅವರು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಸೂಕ್ತ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೆವು ಎಂದು ಸ್ಮರಿಸಿದ ಅವರು, ಮಾಮನಿಯವರೊಬ್ಬ ಜನಪ್ರಿಯ ಮತ್ತು ಜನೋಪಯೋಗಿ ವ್ಯಕ್ತಿಯಾಗಿದ್ದರು ಅವರ ನಿಧನ ತುಂಬಲಾಗದ ನಷ್ಟ ಎಂದು ಹೇಳಿದರು.

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಲಾಯಂ ಸಿಂಗ್ ಯಾದವ್ ಕರ್ನಾಟಕ ರಾಜ್ಯದಲ್ಲೂ ಸಮಾಜವಾದಿ ಪಕ್ಷ ಕಟ್ಟುವ ಪ್ರಯತ್ನ ನಡೆಸಿದ್ದರು. ಬಂಗಾರಪ್ಪರ ಮೂಲಕ ಈ ಪ್ರಯತ್ನ ನಡೆದಿತ್ತು. ತಮ್ಮ ವಿರೋಧಿ ಸಿದ್ಧಾಂತದವರನ್ನು ಅತ್ಯಂತ ಗೌರವದದಿಂದ ಕಾಣುತ್ತಿದ್ದ ಅಪರೂಪದ ವ್ಯಕ್ತಿ ಎಂದು ಗುಣಗಾನ ಮಾಡಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಉಪಸಭಾಧ್ಯಕ್ಷ ಆನಂದ ಮಾಮನಿ, ಹತ್ತಿ ವ್ಯಾಪಾರದಿಂದ ವಿಧಾನಸಭೆವರಗೆ ಬಂದ ಹಾದಿಯನ್ನು ವಿವರಿಸಿದರು. ಅವರು ನಡೆದ ಬಂದ ಹಾದಿ ಸ್ಪೂರ್ತಿದಾಯಕ. ಅವರು ಕ್ಷೇತ್ರದ ಜನರೊಂದಿಗೆ ಭಾವನಾತ್ಮಕ ಕಾಳಜಿ ಹೊಂದಿದ್ದರು. ಹಾಗೆ, ಜಬ್ಬಾರ್‌ ಖಾನ್ ಹೊನ್ನಳ್ಳಿ ಅವರು ಶಾಂತಿಪ್ರಿಯರು ಮತ್ತು ಸಜ್ಜನರಾಗಿದ್ದರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದನೂರು ಕಾಂಗ್ರೆಸ್ ಟಿಕೆಟ್ ಕೋರಿ 2 ಲಕ್ಷ ರೂ. ಹಣವನ್ನು ನೀಡಿ ಅರ್ಜಿ ಸಲ್ಲಿಸಿ ಅಕಾಲಿಕ ನಿಧನರಾಗಿದ್ದು, ವಿಧಿಯ ಆಟ ಹೀಗೆ ಎಂದು ಹೇಳಲು ಸಾಧ್ಯವಿಲ್ಲ. ಅವರು ಸಾಯುವ ಎರಡು ದಿನ ಮೊದಲು ನನ್ನನ್ನು ಭೇಟಿ ಮಾಡಿದ್ದರು. ರಾಜಕಾರಣವನ್ನು ನಾವು ಬಿಟ್ಟರು, ಅದು ನಮ್ಮನ್ನು ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿ ಎಂದರು.

ಮಾಜಿ ಸಿಎಂ ಯಡಿಯೂರಪ್ಪ, ವಿಧಾನಸಭೆ ಉಪನಾಯಕ ಯು.ಟಿ.ಖಾದರ್, ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್, ಸಚಿವೆ ಶಶಿಕಲಾ ಜೊಲ್ಲೆ, ಸೋಮಶೇಖರ್ ರೆಡ್ಡಿ ಸೇರಿದಂತೆ ಇನ್ನಿತರ ಸದಸ್ಯರು ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದರು. ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನಚರಣೆ ಮಾಡಲಾಯಿತು. ಬಳಿಕ ಕಲಾಪವನ್ನು ನಾಳೆಗೆ ಮುಂದೂಡಲಾಯಿತು

.

Leave a Reply