ಬೆಂಗಳೂರು: ಶಿಕ್ಷಣ ಇಲಾಖೆಯ ಮಾದರಿಯಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರು ಮತ್ತು ವೈದ್ಯರ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಕೌನ್ಸಿಲ್ ಮೂಲಕ ವರ್ಗಾವಣೆ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.
ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ಕುಮಾರ್ ಆದೇಶ ಹೊರಡಿಸಿದ್ದು, ಎ, ಬಿ, ಸಿ ಮತ್ತು ಡಿ ವೃಂದದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಾವಣೆಯನ್ನು ಕೌನ್ಸಿಲಿಂಗ್ ಕಾಯ್ದೆಯ ಅನ್ವಯ ನಿರ್ವಹಿಸಲಾಗುವುದು ಎಂದಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಮತ್ತು ತುರ್ತು ಸೇವೆಗೆ ಹೆಸರಾಗಿದೆ. ಆದರೆ, ಇಲ್ಲಿ ಗ್ರಾಮೀಣ ಭಾಗದಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಅದರಲ್ಲೂ ವೈದ್ಯರ ವರ್ಗಾವಣೆಗೆ ಭಾರೀ ಲಾಬಿಗಳು ನಡೆಯುತ್ತಿವೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ಕೌನ್ಸಿಲಿಂಗ್ ಪದ್ಧತಿ ಜಾರಿಗೆ ತರುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.




