ಚಿತ್ರದುರ್ಗ: ಬದುಕು ಕಟ್ಟಿಕೊಳ್ಳಲು ಊರಿಂದೂರಿಗೆ ಅಲೆಯುತ್ತಿದ್ದ, ಅಲೆಮಾರಿ ಜನಾಂಗ ನೆಲೆ ಕಂಡುಕೊಳ್ಳಲು ಕಳೆದ ಹತ್ತು, ಹದಿನೃೆದು ವರ್ಷಗಳ ಹಿಂದಷ್ಟೇ ಚಿತ್ರದುರ್ಗ ನಗರದ ಮೆದೇಹಳ್ಳಿ ಗ್ರಾಮದ ಸಮೀಪ ಟೆಂಟ್ ಕಟ್ಟಿಕೊಂಡು ಒಂದು ಕಡೆ ನೆಲೆ ನಿಂತು ಜೀವಿಸುವಂತಹ ಪದ್ಧತಿಯನ್ನು ರೂಡಿಸಿಕೊಂಡರು.
ಕೆಲವರ್ಷಗಳ ನಂತರ ಸಹಜವಾಗಿ ಅಲೆಮಾರಿಗಳು ತಮಗೂ ಜಾಗ, ನಿವೇಶನ ಮನೆ ನಿರ್ಮಿಸಿಕೊಳ್ಳಲು ನಿರ್ಧರಿಸಿ ಜಿಲ್ಲಾಡಳಿತದ ಬಳಿ ಮನವಿ ಮಾಡಿಕೊಂಡ ಹಿನ್ನೆಲೆ ಕಳೆದ ಸರ್ಕಾರದ ಅವಧಿಯಲ್ಲಿ ಅಲೆಮಾರಿ ಸುಡುಗಾಡ ಸಿದ್ಧರಿಗೂ ಒಂದಿಷ್ಟು ಭೂಮಿಯನ್ನು ಸರ್ಕಾರ ನೀಡಿತ್ತು. ಆದರೆ ಎಂಟು ಹತ್ತು ವರ್ಷವಾದರೂ ಯಾವುದೇ ಅಭಿವೃದ್ಧಿ ಕಾರ್ಯ ನಡೆಯಲಿಲ್ಲ.
ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಸಕರು, ಸಚಿವರು ಹೀಗೆ ಸಾಲುಸಾಲು ಜನರ ಬಳಿಗೆ ಮನವಿ ಪತ್ರ ಹಿಡಿದು ಅಲೆದರೂ ಏನು ಪ್ರಯೋಜನವಾಗಲಿಲ್ಲ.
ಹೋರಾಟ, ಚಳುವಳಿ, ಧರಣಿ ಸತ್ಯಾಗ್ರಹ, ಮೆರವಣಿಗೆಗಳು ನಡೆದವು. ಇವೆಲ್ಲವೂಗಳಿಂದಲೂ ಕೆಲಸವಾಗದೆ ಇರಬಹುದು. ಆದರೆ ಜನರು ಹೋರಾಟ ಮಾಡಲು ಗಟ್ಟಿ ಆದರೂ ದೊಡ್ಡವರ ಮುಂದೆ ನಿಂತು ತಮ್ಮ ಮನವಿ ಹೇಳುವ ಮಟ್ಟಕ್ಕೆ ಬೆಳೆದು ನಿಂತರು. ಇವರ ಹಿಂದೆ ನಿಂತು ಚಾಲನಾ ಶಕ್ತಿಯಾದವರು ಧಮ್ಮ ಕೇಂದ್ರ ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕ ಆರ್.ವಿಶ್ವ ಸಾಗರ್ ಮತ್ತು ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್.
ಮೆದೇಹಳ್ಳಿ ಜಾಗದಿಂದ ಅಲೆಮಾರಿ ಸುಡುಗಾಡ ಸಿದ್ಧರನ್ನು ತೆರವುಗೊಳಿಸುವ ಕಾರ್ಯವೂ ನಡೆದುಹೋಯಿತು. ನೆಲೆ ಕಳೆದುಕೊಂಡು ಅತಂತ್ರರಾದ ಅಲೆಮಾರಿಗಳು ಟೆಂಟ್ ಕಟ್ಟಿಕೊಳ್ಳಲು ಕಂಡಕಂಡ ಜಾಗಗಳಿಗೂ ಅಲೆದರೂ ಯಾರು ಸಹ ನೆಲೆಕಲ್ಪಿಸಲು ಮುಂದೆ ಬಾರದೆ ಹೋದಾಗ ಸ್ವತಃ ವಿಶ್ವಸಾಗರ್ ಅವರು ಮುಂದೆ ಬಂದು ತಮ್ಮ ಧಮ್ಮ ಕೇಂದ್ರದ ಬಳಿ ಅಲೆಮಾರಿಗಳಿಗೆ ಖಾಸಗಿಯವರಿಂದ ಜಾಗ ಕೊಡಿಸಿ ಟೆಂಟ್ ಕಟ್ಟಿಕೊಳ್ಳಲು ನೆರವು ನೀಡಿದರು.
ಹತ್ತು, ಹದಿನೈದು ವರ್ಷಗಳ ಹೋರಾಟ, ನೂರಾರು ದಿನಗಳ ಚಳುವಳಿಗಳಿಗೆ ಆಗದ ಕೆಲಸ ಕೇವಲ ಹದಿನೈದು ಇಪ್ಪತ್ತು ದಿನಗಳಲ್ಲಿ ಆಗುತ್ತಿದೆ ಅಂದರೆ ಅಲೆಮಾರಿಗಳ ಸೌಭಾಗ್ಯ ಎನ್ನಬೇಕು.
ಸೆಪ್ಟೆಂಬರ್ 13 ಸುವರ್ಣದಿನವೆಂದು ಭಾವಿಸಬಹುದು
ಧಮ್ಮ ಕೇಂದ್ರ ವಿಮುಕ್ತಿ ವಿದ್ಯಾ ಸಂಸ್ಥೆ, ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ, ಭಾರತ ಸೇವಾದಳ, ಅಲೆಮಾರಿ ಸಂಘಟನೆಯ ಸಹಯೋಗದೊಂದಿಗೆ ಆರೋಗ್ಯ ಶಿಬಿರ ಆಯೋಜನೆ ಮಾಡಿ ಕಾರ್ಯಕ್ರಮದ ಉದ್ಘಾಟನೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಿರೀಶ್ ಬಿ.ಕೆ ಅವರನ್ನು ಆಹ್ವಾನಿಸಲಾಗಿತ್ತು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಅಲೆಮಾರಿಗಳ ಕಷ್ಟ, ನೋವು, ಸಂಕಟ ಮತ್ತು ಅವರು ಇತ್ತೀಚಿಗೆ ಅನುಭವಿಸುತ್ತಿರುವ ಸಮಸ್ಯೆಗಳನ್ನು ನ್ಯಾಯಾಧೀಶರ ಗಮನಕ್ಕೆ ತರಲಾಯಿತು. ಅಲೆಮಾರಿಗಳ ಸಮಸ್ಯೆಗಳನ್ನು ಕೇಳಿಸಿಕೊಂಡ ನ್ಯಾಯಾಧೀಶ ಗಿರೀಶ್ ಬಿ.ಕೆ.ಅವರು ಗಂಭೀರವಾಗಿ ಪರಿಗಣಿಸಿ ಗಟ್ಟಿಯಾದ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಮೂಲಕ ಹಲವು ವರ್ಷಗಳ ಅಲೆಮಾರಿಗಳ ಕನಸು ಸಕಾರಗೊಳಿಸುವ ನಿಟ್ಟಿನಲ್ಲಿ ಕೆಲಸವಾಗುತ್ತಿದೆ.
ತಾತ್ಕಾಲಿಕವಾಗಿ ಅಲೆಮಾರಿಗಳ ಕಾಲೋನಿಗೆ ಕರೆಂಟ್ ಬಂತು, ರೇಷನ್ ಕಾರ್ಡ್, ಗರ್ಭೀಣಿಯರಿಗೆ ಪೌಷ್ಟಿಕ ಆಹಾರದ ವ್ಯವಸ್ಥೆ, ಎಂದೂ ಕಂಡರಿಯದ ಕೆಲಸವೆಂದರೆ ಅಲೆಮಾರಿ ಮಹಿಳೆಯರು, ಪುರುಷರಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಿ ಬಳಕೆಗೆ ಸಿದ್ಧಗೊಳಿಸಲಾಯಿತು. ಜೊತೆಗೆ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸಲು ಮುಂದಾಗಿರುವ ಗಿರೀಶ್ ಬಿ.ಕೆ.ಅವರು ಪ್ರತಿಹಂತದ ಕೆಲಸವನ್ನು ತಾವೇ ಖುದ್ದಾಗಿ ವೀಕ್ಷಣೆ ಮಾಡುವ ಮೂಲಕ ಎಲ್ಲೂ ಲೋಪವಾಗದಂತೆ ಎಚ್ಚರಿಸುವ ಕಾರ್ಯ ನಡೆದಿದೆ.
ಇನ್ನೊಂದು ತಿಂಗಗಳ ಒಳಗಾಗಿ ನಿವೇಶನದ ಹಕ್ಕು ಪತ್ರ ಮತ್ತು ಮನೆಗಳನ್ನು ತಂದು ನಿರ್ಮಿಸುವ ಮೂಲಕ ಶಾಶ್ವತವಾದ ನೆರವು ಕಲ್ಪಿಸಲು ಹಗಲು ರಾತ್ರಿ ಎನ್ನದೆ ಚಿಂತಿಸಿ ಕಾರ್ಯರೂಪಕ್ಕೆ ತರುತ್ತಿರುವ ನ್ಯಾಯಾಧೀಶರು ಅಲೆಮಾರಿ ಜನರ ಪಾಲಿಗೆ ದೇವರ ಸ್ವರೂಪವಾಗಿ ಕಾಣುತ್ತಿದ್ದಾರೆ.
ಒಟ್ಟಾರೆಯಾಗಿ ಅಲೆಮಾರಿ ಸುಡುಗಾಡ ಸಿದ್ಧರಿಗೂ ಬದುಕು, ಭವಿಷ್ಯವಿದೆ ಎಂಬುದನ್ನು ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಿರೀಶ್ ಬಿ.ಕೆ. ಈಗಾಗಲೇ ಸಾಬೀತುಪಡಿಸಿದ್ದಾರೆ.
ಹಾಗೆಯೇ ಅಲೆಮಾರಿಗಳಿಗೆ ಎಲ್ಲಾ ಹಂತಗಳಲ್ಲಿ ನೆರವು ನೀಡುತ್ತಾ ಬಂದವರು ಧಮ್ಮ ಕೇಂದ್ರದ ನಿರ್ದೇಶಕ ಆರ್.ವಿಶ್ವ ಸಾಗರ್ ಮತ್ತು ಶಾಂತಿ & ಸೌಹಾರ್ದ ವೇದಿಕೆಯ ನರೇನಹಳ್ಳಿ ಅರುಣ್ ಕುಮಾರ್.
ಇವರ ಜೊತೆಗೆ ಅಲೆಮಾರಿ ಸಂಘಟನೆಯ ಅಧ್ಯಕ್ಷ ನಾಗರಾಜ್, ಹಿರಿಯೂರು ಕೃಷ್ಣಪ್ಪ, ಜಗಳೂರು ಜಯಣ್ಣ, ಅಲೆಮಾರಿ ಕಾಲೋನಿ ಬಾಬು ಅರಣ್ಯ ಸಾಗರ್, ಅನ್ನಪೂರ್ಣ ಮುಂತಾದವರ ಸಹಕಾರವಂತು ಹೇಳ ತೀರದು ಎಂಬುದು ಸ್ಥಳೀಯರ ಮಾತು.




