ಇಂದು ರಾಜ್ಯದ ವಿವಿದೆಡೆ ದಾಖಲೆ ಇಲ್ಲದ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಹಾಗೂ ನಗದು ವಶ

3 years ago

ಬೆಂಗಳೂರು: ರಾಜ್ಯ  ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡ ಕೂಡಲೇ ಅಕ್ರಮಗಳ ಮೇಲೆ ಹದ್ದಿನ‌ ಕಣ್ಣಿಟ್ಟಿರುವ ಚುನಾವಣಾಧಿಕಾರಿಗಳು‌ ತಪಾಸಣೆ ತೀವ್ರಗೊಳಿಸಿದ್ದು  ಅಪಾರ ಪ್ರಮಾಣದ ಚಿನ್ನಾಭರಣ,ಹಣ,ಮದ್ಯ ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಎಂಸಿಹಳ್ಳಿ ಚೆಕ್‍ಪೋಸ್ಟ್ ಹಾಗೂ ಧಾರವಾಡ ತಾಲೂಕಿನ ತೇಗೂರು ಚೆಕ್‍ಪೋಸ್ಟ್‍ನಲ್ಲಿ  28 ಕೋಟಿ ಮೌಲ್ಯದ 47 ಕೆಜಿ ಚಿನ್ನಾಭರಣಗಳನ್ನು  ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಎಂದಿನಂತೆ ನಿನ್ನೆ ಸಂಜೆ ತರೀಕೆರೆ ತಾಲೂಕಿನ ಎಂಸಿಹಳ್ಳಿ ಚೆಕ್‍ ಪೋಸ್ಟ್‍ನಲ್ಲಿ ಪೋಲೀಸರು ಹಾಗೂ ಚುನಾವಣಾ ಸಿಬ್ಬಂದಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಈ ಮಾರ್ಗವಾಗಿ ಬಂದ ಮಿನಿ ಕಂಟೈನರ್ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ.

ಈ ವೇಳೆ ವಾಹನದಲ್ಲಿ ಸುಮಾರು 23 ಕೋಟಿ ರೂ. ಬೆಲೆ ಬಾಳುವ 40 ಕೆಜಿ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಈ ಆಭರಣಕ್ಕೆ ದಾಖಲೆ ಕೇಳಿದಾಗ ಯಾವುದೇ ದಾಖಲೆ ಒದಗಿಸಿಲ್ಲ. ಆಭರಣವನ್ನು ಜಪ್ತಿ ಮಾಡಿದ ಚುನಾವಣಾ ಅಧಿಕಾರಿಗಳು ವಾಣಿಜ್ಯ ತೆರಿಗೆ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಬೆಂಗಳೂರಿನ ವಿವೇಕ ನಗರದಲ್ಲಿ ಇಂದು ಬೆಳಿಗ್ಗೆ ಕಾರ್ಯಾಚರಣೆ ಕೈಗೊಂಡು 8 ಕೆಜಿ ಚಿನ್ನ,46 ಕೆಜಿ 700 ಗ್ರಾಂ ಬೆಳ್ಳಿ ಸೇರಿ 5 ಕೋಟಿಗೂ ಹೆಚ್ಚು ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.

ವಿವೇಕನಗರದ ಬಳಿ‌ ಅನುಮಾಸ್ಪದವಾಗಿ ಬಂದ ಈಚರ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ದಾಖಲೆ ಇಲ್ಲದ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಕಂಡುಬಂದಿದೆ. ಕೂಡಲೇ ಪೊಲೀಸರು ವಾಹನದಲ್ಲಿದ್ದ 7 ಕೆಜಿ 999 ಗ್ರಾಂ ಚಿನ್ನ, 46 ಕೆಜಿ 700 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ ಈ ಬಗ್ಗೆ ಕೇಸ್ ದಾಖಲಾಗಿದ್ದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ.

ಅಪಾರ ಪ್ರಮಾಣದ ಚಿನ್ನ ಬೆಳ್ಳಿ ಆಭರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮೂವರನ್ನೂ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಮೂವರನ್ನು ವಿಚಾರಣೆಗೆ ಒಳಪಡಿಸಿ ಇಷ್ಟು ಪ್ರಮಾಣದ ಚಿನ್ನ ಹಾಗೂ ಬೆಳ್ಳಿಯ ಮೂಲವೇನು, ಯಾರು ಮಾರಾಟ ಮಾಡಿದ್ದು ಮುಂತಾದ ಮಾಹಿತಿಗಾಗಿ ವಿವೇಕನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸ್ಪೆಷಲ್ ಜೆಟ್ ವಿಮಾನದಲ್ಲಿ ಅಕ್ರಮವಾಗಿ ತಂದಿದ್ದ 8 ಕೋಟಿ ರೂಗಳನ್ನು ಏರ್ರ್ಪೋರ್ಟ್ನಲ್ಲಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ನೀತಿ ಸಂಹಿತೆ ಜಾರಿಯಿದ್ದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಹೆಲಿಕಾಫ್ಟರ್ ಹಾಗೂ ಜೆಟ್ಗಳ ಮೇಲೆ ಕಣ್ಣಿಟ್ಟಿದ್ದರು. ಹೀಗಾಗಿ ಹೆಚ್ ಎಎಲ್ ವಿಮಾನನಿಲ್ದಾಣದಲ್ಲಿ ಐಟಿ ಸಿಬ್ಬಂದಿ ತಡರಾತ್ರಿ ಬಂದ ಸ್ಪೆಷಲ್ ಜೆಟ್ ವಿಮಾನವನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಎಂಟು ಕೋಟಿ ಹಣ ಪತ್ತೆಯಾಗಿದೆ. ಆದರೆ ಹಣದ ಮೂಲ ಯಾವುದು? ಯಾರಿಗೆ ತಲುಪಿಸಲು ತಂದಿದ್ದರು ಅನ್ನೋದ್ರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಹಣ ಹಾಗೂ ಹಣ ತಂದಿದ್ದ ವ್ಯಕ್ತಿಗಳನ್ನ ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಗರದ ಯಲಹಂಕ ರಸ್ತೆಯಲ್ಲಿರುವ ಜಕ್ಕೂರು ಏರೋಡ್ರಮ್ನಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲ ಹೆಲಿಕಾಫ್ಟರ್, ಸ್ಪೆಷಲ್ ಜೆಟ್ಗಳನ್ನು ಹೆಚ್ ಎಎಲ್ ಏರ್ರ್ಪೋರ್ಟ್ಗೆ ಡೈವರ್ಟ್ ಮಾಡಲಾಗಿತ್ತು. ಹೀಗಾಗಿ ಹೆಚ್ ಎಎಲ್ ನಿಲ್ದಾಣಕ್ಕೆ ಬಂದ ಜೆಟ್ನಲ್ಲಿ ಹಣ ಪತ್ತೆ ಹಚ್ಚಲಾಗಿದೆ ಎನ್ನಲಾಗಿದೆ.

Leave a Reply