ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಕ್ಷಣಗಣನೆ

3 years ago

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಾಳೆಯಿಂದ ಆರಂಭವಾಗಲಿದೆ. ಇದಕ್ಕಾಗಿ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

ನಾಳೆಯಿಂದ ಏಪ್ರಿಲ್ 15ರವರೆಗೆ ರಾಜ್ಯದ 3,305 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 15,498 ಶಾಲೆಗಳಿಂದ 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ.

ನಾಳೆ ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಷಯಗಳ ಪರೀಕ್ಷೆ ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 1.45ಕ್ಕೆ ಮುಕ್ತಾಯವಾಗಲಿದೆ.

ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಈಗಾಗಲೇ ಸಿದ್ಧತಾ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಮೊಬೈಲ್ ಫೋನ್, ಸ್ಮಾರ್ಟ್ ಫೋನ್, ಸ್ಮಾಟ್‍ವಾಚ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ನಿಷೇಧಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಸಹ ಮೊಬೈಲ್ ಪೋನ್‍ಗಳನ್ನು ಬಳಸುವಂತಿಲ್ಲ. ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

Leave a Reply