ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ: ಆಕ್ರೋಶ
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಸಾಹಿತಿಗಳಾದ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಮಾಜಿ ಸಚಿವೆ ಡಾ. ಬಿ.ಟಿ.ಲಲಿತಾ ನಾಯ್ಕ್ , ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ ಹಾಗೂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರ ಹೆಸರು, ಫೋಟೋ ಉಲ್ಲೇಖಿಸಿ ದುಷ್ಕರ್ಮಿಗಳು ಮೂರನೇ ಬಾರಿಗೆ ಕೊಲೆ ಬೆದರಿಕೆ ಪತ್ರ ರವಾನಿಸಿದ್ದಾರೆ.
ಲಲತಾ ನಾಯ್ಕ್ ಅವರ ಸಂಜಯನಗರ ನಿವಾಸದ ವಿಳಾಸಕ್ಕೆ ಪತ್ರ ಬರೆದಿರುವ ದುಷ್ಕರ್ಮಿಗಳು, ನೀವು ನಿಜವಾದ ದೇಶ ದ್ರೋಹಿಗಳು ಎಂದಿದ್ದಾರೆ. ಪಠ್ಯದಲ್ಲಿ ದೇಶ ಪ್ರೇಮ, ದೇಶ ಭಕ್ತಿ, ದೇಶ ರಕ್ಷಣೆ ಪಾಠ ಸೇರಿಸಿದಕ್ಕೆ ನಿಮಗೆ ಭಯವಾಗುತ್ತಿದೆ.
ಭಯೋತ್ಪಾದಕರು, ನಕ್ಸಲೈಟ್ ಗಳು, ಮಾವೋವಾದಿಗಳು, ದೇಶ ದ್ರೋಹಿ ಮುಸ್ಲಿಮರಿಗೆ ಬೆಂಬಲವಾಗಿ ನಿಂತಿದ್ದೀರಿ. ಕಾರ್ಯಕ್ರಮದಲ್ಲಿ ನಮ್ಮ ವೀರ ಸೈನಿಕರ ಬಗ್ಗೆ ಅಗೌರವವಾಗಿ ಮಾತನಾಡಿದ್ದೀರಿ. ನಿಮ್ಮನ್ನೆಲ್ಲಾ ದೇಶ ಬಿಟ್ಟು ಓಡಿಸಬೇಕು. ಇಷ್ಟೇ ಸಾಲದು ಗುಂಡಿಟ್ಟು ಸಾಯಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಜೈ ಶ್ರೀರಾಮ್, ಭಾರತ ಮಾತೆ, ಕರ್ನಾಟಕ ಮಾತೆ ಎಂದು ಬರೆದಿದ್ದಾರೆ. ಯಾರು ಮುಸ್ಲಿಮರ ಪರವಾಗಿ ಮಾತನಾಡುತ್ತಾರೋ ಅಂತವರು ರಕ್ತ ಹೀರುವವರು ಎಂದು ಉಲ್ಲೇಖಿಸಲಾಗಿದೆ.
ಒಟ್ಟಿನಲ್ಲಿ ಒಂದೇ ತಿಂಗಳಲ್ಲಿ ಮೂರು ಬೆದರಿಕೆ ಪತ್ರಗಳು ಬಂದಿದ್ದರೂ, ಪೊಲೀಸರು ಸೂಕ್ತ ತನಿಖೆ ನಡೆಸುವಲ್ಲಿ ವಿಫಲರಾಗಿದ್ದು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




