ದೆಹಲಿಯಲ್ಲಿ ಧರಣಿ ಕೂತ ಈ ದೇಶದ ‘ಬೇಟೀ’ಗಳ ಮೇಲೆ ದೆಹಲಿ ಪೊಲೀಸರು ಲಾಠಿ ಬೀಸಿದ್ದಾರೆ. ದೇಶದ ಕೀರ್ತಿ ಪತಾಕೆಯನ್ನು ಜಗದೆತ್ತರಕ್ಕೆ ಹಿಡಿದು ನಿಂತಿದ್ದ ಹೆಣ್ಣು ಮಕ್ಕಳವರು. ಒಲಿಂಪಿಕ್ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಗೌರವ ತಂದುಕೊಟ್ಟವರು. ಕೆಲವಾರು ದಿನಗಳಿಂದ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಅಂಗಲಾಚಿ ಕೂತಿದ್ದಾರೆ.
ಈ ದೇಶದಲ್ಲಿ ಸಂವೇದನಾ ಶೀಲರಾದ ಘನತೆವೆತ್ತ ಕವಿ, ಸಾಹಿತಿ, ಕಲಾವಿದರೂ, ಪರಮ ಪಂಡಿತರೂ, ಮಠಮಾನ್ಯಗಳ ಪರಮಪೂಜ್ಯರುಗಳಿದ್ದಾರೆ. ಆಯ್ದವರ ಅಹವಾಲುಗಳನ್ನು ಮಧ್ಯರಾತ್ರಿ ಯಾದರೂ ಆಲಿಸುವ ನ್ಯಾಯಮಂದಿರಗಳಿವೆ. ಹಾಲಿ ಹಾಗೂ ನಿವೃತ್ತ ನ್ಯಾಯಪಂಡಿತರುಗಳಿದ್ದಾರೆ. ಪತ್ರಿಕೆಗಳಿವೆ. ಪ್ರಧಾನಿ ಸುಮ್ಮನೇ ಮುಲುಗುಟ್ಟಿದರೂ ಪರಮಪವಿತ್ರ ಸಂದೇಶವೆಂದು ಸುದ್ದಿ ಬಿತ್ತರಿಸುವ ಎಲೆಕ್ಟ್ರಾನಿಕ್ ಮಾಧ್ಯಮಗಳಿವೆ. ವಿವಿಧ ಹಂತದ ಸಾಕ್ಷಿ ಪ್ರಜ್ಞೆಗಳಿವೆ. ಯಾರಿಗೂ ಬಾಯಿ ಬರುತ್ತಿಲ್ಲವೇ!!!!!!
ಮಳೆಬಿದ್ದು ಹಸಿಯಾದ ನೆಲದ ಮೇಲೆ ಕೂರುವುದು ಮಲಗುವುದು ಕಷ್ಟವೆಂಬ ಕಾರಣಕ್ಕೆ ಈ ಹೆಣ್ಣುಮಕ್ಕಳು ಫೋಲ್ಡಿಂಗ್ ಮಂಚ ತರಿಸಿಕೊಂಡದ್ದೇ ಅಪರಾಧವಾಗಿಹೋಯ್ತು ಪೊಲೀಸರಿಗೆ! “ಇಂಥ ದಿನ ನೋಡೋದಿಕ್ಕೆ ಒಲಿಂಪಿಕ್ನಲ್ಲಿ ಪದಕ ಗೆದ್ದು ತರಬೇಕಿತ್ತಾ?” ಎನ್ನುತ್ತ ನಡುರಾತ್ರಿ ಸುರಿವ ಮಳೆಯಲ್ಲಿ ಹಿಪ್ಪೆಯಾಗುತ್ತ, ಅಳುತ್ತ ನುಡಿಯುತ್ತಿದ್ದರು ವಿನಿಶಾ ಪೊಗಟ್. ಅಬ್ಬ! ಆ ದಿಲ್ಲಿ ಪೊಲೀಸರ ಮರ್ಜಿಯೋ! ಈಹಿಂದೆಯೂ ಅನೇಕ ಸಂದರ್ಭಗಳಲ್ಲಿ ನೋಡಿದ್ದಿದೆ- ಬಹುಶಃ ಇಡೀ ದೇಶದಲ್ಲಿ ಅಷ್ಟೊಂದು ದೌರ್ಜನ್ಯ ನಡೆಸುವ ಪರಮದುಷ್ಟರ ಸಂತೆಯೇ ಅಲ್ಲಿನ ಪೊಲೀಸ್ ವ್ಯವಸ್ಥೆ!
ಒಂದೆಡೆ ಪತ್ರಿಕಾ ಸ್ವಾತಂತ್ರ್ಯ ಜಾಗತಿಕ ಮಟ್ಟದಲ್ಲಿ ಅತ್ಯಂತ ತಳಹಿಡಿದಿರುವ ಸುದ್ದಿ ಬರುತ್ತಿದೆ. ಇನ್ನೊಂದೆಡೆ ಈ ರೀತಿ ದೌರ್ಜನ್ಯ ಎಸಗಲು ಮೌನ ಸಮ್ಮತಿ ನೀಡುತ್ತಲೇ “ಬೇಟೀ ಬಚಾವೋ” ಅಂತ ಊರಿಡೀ ಮನದ ಮಾತಿಗೆ ಬಾಯ್ದೆರೆಯುವ ಅರಸ! ಸಾಲದ್ದಕ್ಕೆ ಮನ್ ಕೀ ಬಾತಿನ ಅದ್ದೂರಿ ನೂರನೇ ಕಂತಿನ ಅನಾವರಣ ಬೇರೆ! ಅಂತಾರಾಷ್ಟ್ರೀಯ ಸಮುದಾಯ ಮುಸಿಮುಸಿ ನಗುತ್ತಿರುವ ಪರಿವೆಯೇ ಯಾರಿಗೂ ಇದ್ದಂತಿಲ್ಲ. ಯಾಕೆಂದರೆ ಯಾವ ಮೀಡಿಯಾ ವೂ ಅದನ್ನು ತೋರಿಸುತ್ತಿಲ್ಲ. ಪ್ರಭುತ್ವದ ವಿರುದ್ಧ ಧ್ವನಿಯೆತ್ತಿದವರೆಲ್ಲ ಬೀದಿ ಹೆಣವಾಗುತ್ತಿದ್ದಾರೆ! ಇದೇನು, ಪ್ರಜಾಪ್ರಭುತ್ವದ ಹೀನಾತಿಹೀನ ಅಣಕವೋ?
ಅದಿರಲಿ, ಈ ಹೆಣ್ಣು ಮಕ್ಕಳ ಕತೆ ಏನು? ಆಳರಸರ ಪಕ್ಷದ ಸಣ್ಣಪುಟ್ಟ ಹೆಣ್ಣು ಹೈಕಳೇ ಈ ಮಕ್ಕಳ ಮೇಲೆ ಕಿಡಿ ಕಾರುತ್ತಿದ್ದರೆ ಸಂವೇದನೆ, ವಿಚಾರಶೀಲತೆ ಇವುಗಳಿಗೆಲ್ಲ ಯಾವ ಬೆಲೆ? ಒಬ್ಬ ಬ್ರಿಜ್ಭೂಷಣ್ ಎಂಬ ಮಹಾಪಾತಕಿಯನ್ನು ರಕ್ಷಿಸಲು ಹೊರಟ ಪ್ರಭುತ್ವದ ಈ ಕ್ರೌರ್ಯಕ್ಕೆ ನಮ್ಮ ಅಮೂಲ್ಯ ಜೀವಗಳು ಇಷ್ಟೊಂದು ಅನಾಥವಾಗಿ ಬಲಿಯಾಗಬೇಕಾ? ದೇಶದಲ್ಲಿ ಹೆಣ್ಣು ಹೆತ್ತ, ಹೆಂಗರುಳಿನ, ತಾಯಿ ಹೃದಯದ ಜೀವಗಳೇ ಇಲ್ಲವೋ? ಏನಿದೆಲ್ಲ! ನಮ್ಮ ಮನೆಯಲ್ಲೂ ಹೆಣ್ಣು ಕುಡಿಗಳಿವೆ. ಭಯ ಆಗ್ತಿದೆ!
ಗೊತ್ತಿದೆ- ಈ ಪೋಸ್ಟ್ ಅನ್ನು fb ನಿಯಂತ್ರಿಸುತ್ತದೆ. ಇಷ್ಟಾದ ಮೇಲೆ ಇದೂ ಅಂಥ ಅಚ್ಚರಿಯೇನಲ್ಲ.
– ದಿನೇಶ್ ಕುಕ್ಕುಜಡ್ಕ



