ಮುದ್ರಾಂಕ ಶುಲ್ಕ ಹೆಚ್ಚಿಗೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಕೃಷ್ಣ ಭೈರೇಗೌಡ

3 years ago

#Government #proposal #increase #stamp #duty #KrishnaBairegowda

ಬೆಂಗಳೂರು: ರಾಜ್ಯದಲ್ಲಿ ಮುದ್ರಾಂಕ ಶುಲ್ಕವನ್ನು ಹೆಚ್ಚಿಗೆ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಮೀನಿನ ಮೌಲ್ಯವನ್ನು ಪರಿಷ್ಕರಿಸಲಾಗುವುದು ಎಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಹಲವಾರು ಕಾರಣಗಳಿಂದ ಜಮೀನಿನ ಬೆಲೆ ಪರಿಷ್ಕರಣೆಯಾಗಿಲ್ಲ. ಇದರಿಂದಾಗಿ ಭೂಮಿ ಮಾರುವ ರೈತರಿಗೆ ತೊಂದರೆಯಾಗಿರುವುದನ್ನು ಮನಗಂಡು ಜಮೀನಿನ ದರ ಪರಿಷ್ಕರಣೆ ಮಾಡಲು ಮುಂದಾಗಿರುವುದಾಗಿ ಹೇಳಿದರು.

ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಮಾರುಕಟ್ಟೆಯ ಬೆಲೆ ಒಂದು ರೀತಿಯಿದ್ದು, ಮಾರ್ಗಸೂಚಿಯ ಬೆಲೆಯೇ ಒಂದು ರೀತಿಯಿದೆ. ಇದನ್ನು ಪರಿಷ್ಕರಿಸುವ ಮೂಲಕ ಜಮೀನು ಮಾರುವ ರೈತರಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಿರುವುದಾಗಿ ಹೇಳಿದರು.

ಮಾರುಕಟ್ಟೆಯ ಬೆಲೆ ಹೆಚ್ಚಿಸಲು ೩೫ ಲಕ್ಷ ರೂಪಾಯಿಯಿಂದ ೪೫ ಲಕ್ಷ ರೂಪಾಯಿವರೆಗಿನ ಅಪಾರ್ಟ್‌ಮೆಂಟ್ ಅಥವಾ ಪ್ಲಾಟ್‌ಗಳ ಮೊದಲ ಕ್ರಯದ ಮುದ್ರಾಂಕ ಶುಲ್ಕವನ್ನು ಶೇ. ೫ ರಿಂದ ೩ಕ್ಕೆ ಇಳಿಸಲಾಗಿದೆ ಎಂದು ಹೇಳಿದರು.

ರಾಜ್ಯಾದ್ಯಂತ ಉಪನೋಂದಣಾಧಿಕಾರಿಗಳ ಕಚೇರಿಗಳಿಗೆ ಕಾಯಕಲ್ಪ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಕೆಲವು ಕಡೆ ಬಾಡಿಗೆ ಕಚೇರಿಗಳಿದ್ದು, ಸ್ವಂತ ಕಚೇರಿ ಕಟ್ಟಡಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಕಚೇರಿಗಳನ್ನು ಪಾಸ್‌ಪೋರ್ಟ್ ಕಚೇರಿಯ ಸೌಲಭ್ಯದ ಗುರಿಗಳನ್ನು ಇಟ್ಟುಕೊಂಡು ಅಭಿವೃದ್ಧಿಪಡಿಸಲು ಮುಂದಾಗಿರುವುದಾಗಿ ಅವರು ತಿಳಿಸಿದರು.

ನೋಂದಣಿ ಮತ್ತು ಮುದ್ರಾಂಕ ಕಚೇರಿಯ ಲೋಪದೋಷಗಳನ್ನು ಸರಿಪಡಿಸಲು ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.

ರಾಜ್ಯಾದ್ಯಂತ ಉಪನೋಂದಣಾಧಿಕಾರಿಗಳು ಸಿಂಡಿಕೇಟ್ ಮಾಡಿಕೊಂಡಿದ್ದಾರೆ ಎನ್ನುವ ವಿಷಯದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಸಿಂಡಿಕೇಟ್‌ಗೆ ಅವಕಾಶ ಮಾಡಿಕೊಡುವುದಿಲ್ಲ. ಕಚೇರಿಗಳನ್ನು ಸರ್ಕಾರದ ಅಧೀನದಲ್ಲಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Leave a Reply