ಬೇರೆ ಕಡೆ ಕೂಡ ಆಹ್ವಾನವಿದೆ, ಕೋಲಾರದಿಂದಲೇ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ

3 years ago

ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಕುರಿತು ಉಂಟಾಗಿದ್ದ ಎಲ್ಲಾ ಗೊಂದಲಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.

ನಾನು ಕೋಲಾರದಿಂದಲೇ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ. ಹೈಕಮಾಂಡ್ ಅನುಮೋದನೆ ಪಡೆದು ಇಲ್ಲಿಂದ ಕಣಕ್ಕಿಳಿಯುತ್ತೇನೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ನಗರದ ಕುರುಬರ ಪೇಟೆಯಲ್ಲಿರುವ ಮಿನಿ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಕೆಲವರು ಅಪ ಪ್ರಚಾರ ಮಾಡಿದರು. ಸಿದ್ದರಾಮಯ್ಯರಿಗೆ ಕ್ಷೇತ್ರ ಇಲ್ಲ ಎಂದು ಟೀಕಿಸಿದರು. ಆದರೆ, ನನಗೆ ವರುಣ, ಬಾದಾಮಿ, ಕೋಲಾರ ಜನರು ಕರೆಯುತ್ತಿದ್ದರು. ಈಗ ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ. ನಿಮ್ಮ ಪ್ರೀತಿ, ಅಭಿಮಾನವನ್ನು ನಾನು ತಿರಸ್ಕರಿಸಲು ಸಾಧ್ಯ ಇಲ್ಲ ಎಂದರು.

ರಾಜಕೀಯದಲ್ಲಿ ಉಳಿಯುಲು ಮತದಾರರ ಆಶೀರ್ವಾದವಿದ್ದರೆ ಮಾತ್ರ ಸಾಧ್ಯ. ಕೆಲ ದಿನಗಳ ಹಿಂದೆ ನಾನು ಇಲ್ಲಿಗೆ ಬಂದು ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳಿಗೆ ಹೋಗಿದ್ದೆ. ಎಲ್ಲರೂ ಇಲ್ಲಿಂದ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಈಗಾಗಲೇ ನಾನು ವರುಣಾ, ಚಾಮುಂಡೇಶ್ವರಿ, ಬಾದಾಮಿಕ್ಷೇತ್ರಗಳಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದರು.

ನನಗೆ ಕ್ಷೇತ್ರವಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಹಳೆಯ ಕ್ಷೇತ್ರ ವರುಣಾದಿಂದ ಕಣಕ್ಕಿಳಿಯಲು ಒತ್ತಾಯಿಸುತ್ತಿದ್ದಾರೆ. ಬಾದಾಮಿ ಜನರು ದೂರ ಅನ್ನುವುದಾದರೆ ಒಂದು ಹೆಲಿಕ್ಯಾಪ್ಟರ್ ಅನ್ನೇ ಕೊಡಿಸುವುದಾಗಿ ಹೇಳಿದ್ದಾರೆ. ಆದರೂ ನಾನು ಕೋಲಾರದ ಜನರ ಪ್ರೀತಿಗೆ ಕಟ್ಟುಬಿದ್ದಿದ್ದೇನೆ ಎಂದು ಬೆಂಬಲಿಗರ ಹರ್ಷೋದ್ಘಾರಗಳ ನಡುವೆ ನಿರ್ಧಾರ ಪ್ರಕಟಿಸಿದರು.

ಸಂಧಾನ ಮಾತುಕತೆ: ಕೋಲಾರಕ್ಕೆ ಆಗಮಿಸುವ ಮುನ್ನ ಸಿದ್ಧರಾಮಯ್ಯ ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಕೋಲಾರದಲ್ಲಿ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ಅವರ ಬಣ ರಾಜಕೀಯಿಂದ ಮುನಿಸಿಕೊಂಡಿರುವ ಮುನಿಯಪ್ಪ ಅವರನ್ನು ಸಮಾಧಾನಪಡಿಸಲು ಸಿದ್ಧರಾಮಯ್ಯ ಅವರು, ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿದ್ದರು. ಮುನಿಯಪ್ಪ ಅವರು ತಮ್ಮ ಮುನಿಸು ಮರೆತು ಸಿದ್ಧರಾಮಯ್ಯ ಅವರಿಗೆ ಬೆಂಬಲ ನೀಡುವ ವಾಗ್ದಾನ ನೀಡುತ್ತಿದ್ದಂತೆಯೇ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಆಗಮಿಸಿದರು.

ಬೆಂಗಳೂರಿನಿಂದ ಕೋಲಾರಕ್ಕೆ ಇಂದು ಬೆಳಗ್ಗೆ ಆಗಮಿಸಿದ ಸಿದ್ಧರಾಮಯ್ಯ ಅವರಿಗೆ ಕೋಲಾರ ಗಡಿ ಗ್ರಾಮವಾದ ರಾಮಸಂದ್ರ ಬಳಿ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು. ಗಡಿಯಿಂದಲೇ ಸಿದ್ದರಾಮಯ್ಯನವರನ್ನು ಮೆರವಣಿಗೆ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶದ ಸ್ಥಳಕ್ಕೆ ಕರೆತಂದರು.

Leave a Reply