ಬೆಂಗಳೂರು: ಜನರ ಸಮಸ್ಯೆ ಆಲಿಸಲು, ನಮ್ಮ ಕ್ಷೇತ್ರ ಅಭಿವೃದ್ಧಿಪಡಿಸಲು ಮನೆಮನೆ ಭೇಟಿ ಸಹಕಾರಿಯಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಮಮಂದಿರ ವಾರ್ಡ್ ನಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿಯ ಗುದ್ದಲಿಪೂಜೆ ನೇರವೆರಿಸಿ ಮಾತಾಡಿದ ಅವರು, ಜನರ ಆಶಯದಂತೆ ಯೋಜನೆ ರೂಪಿಸಿ, ಆನುಷ್ಠಾನಕ್ಕೆ ತರುವುದು ಜನಪ್ರತಿನಿಧಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಕಳೆದ 200 ದಿನಗಳಲ್ಲಿ 10000 ಮನೆಗಳಿಗೆ ಭೇಟಿ ನೀಡಲಾಗಿದೆ. ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಟುಂಬದವರ ಜೊತೆಯಲ್ಲಿ ಆತ್ಮೀಯ ಸಮಾಲೋಚನೆಯಿಂದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗಿದೆ ಎಂದರು.
ಸ್ಲಂ ಪ್ರದೇಶ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಭೇಟಿ ನೀಡಿದಾಗ ಅವರ ಅವಶ್ಯಕತೆಗೆ ತಕ್ಕಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ನೇರವಾಗಿ ತಲುಪಿಸುವ, ಅರ್ಹ ಫಲಾನುಭವಿಗಳಿಗೆ ಗುರುತಿಸುವ ಕಾರ್ಯ ಯಶ್ವಸಿಯಾಗಿ ನಡೆದಿದೆ ಎಂದರು.
ಒಂಟಿ ಮನೆ ಯೋಜನೆ, ವಿಧವಾ ವೇತನ, ಹಿರಿಯ ನಾಗರಿಕರ ಪಿಂಚಣಿ, ಕಾರ್ಮಿಕರ ಕಾರ್ಡ್ ಸಾವಿರಾರು ಜನರಿಗೆ ಸೌಲಭ್ಯ ಸೌವಲತ್ತು ನೇರವಾಗಿ ತಲುಪಿಸಲಾಗಿದೆ. 10000 ಮನೆಗಳಿಗೆ ಭೇಟಿ ಕಾರ್ಯಕ್ರಮಕ್ಕೆ ಉತ್ತಮ ಜನಸ್ಪಂದನೆ ಸಿಕ್ಕಿದೆ .ಜನರ ಆಶೀರ್ವಾದ ಸಿಕ್ಕಿರುವುದು ಪುಣ್ಯದ ಫಲ ಎಂದು ಹೇಳಿದರು.
ರಾಜಾಜಿನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ರಾಘವೇಂದ್ರರಾವ್,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ದೀಪಾ ನಾಗೇಶ್, ಉಪಾಧ್ಯಕ್ಷ ಬಿ.ಎನ್.ಶ್ರೀನಿವಾಸ್, ಬಿ.ಜೆ.ಪಿ.ಮುಖಂಡರಾದ ಸತೀಶ್ ಭಗವಾನ್, ಮುನ್ನಭಾಯಿ, ಕಿರಣ್, ಕೃಷ್ಣಮೂರ್ತಿ, ಅಮಿತ್ ಜೈನ್ ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪರಿಸರ ಜಾಗೃತಿ ಮೂಡಿಸಲು ಸಸಿಗಳನ್ನು ವಿತರಿಸಲಾಯಿತು.



