ರಕುತದ ಭಾಷೆಯ ಯಡಿಯೂರಪ್ಪ ಕೋಲೆ ಬಸವಣ್ಣನಾದ ಕಥೆ

3 years ago

ನಿನ್ನೆ ಹುಬ್ಬಳ್ಳಿಯ ಗೋಕುಲ ರಸ್ತೆ ಅಂದರೆ ವಿಮಾನ ನಿಲ್ದಾಣದ ರಸ್ತೆಯ ಹೋಟೆಲ್ ಒಂದರಲ್ಲಿ ಕುಳಿತು ಬಿ.ಎಸ್. ಯಡಿಯೂರಪ್ಪ ಈಬಾರಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಗೆಲ್ಲುವುದಿಲ್ಲ ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೀನಿ ಎಂದು ಹೇಳಿದ್ದಾರೆ.

ಎಂಬತ್ತು ವರ್ಷದ ಯಡಿಯೂರಪ್ಪನವರ ದೇಹದಲ್ಲಿ ಒಂದು ಪಾವು ಅಂದರೆ 250 ಎಂ.ಎಲ್. ರಕ್ತ ಇಲ್ಲದೆ ಇರುವಾಗ ಇದನ್ನು ನಂಬಲು ಸಾಧ್ಯವಿಲ್ಲ. ಇದನ್ನು ಅವರು ಹುಬ್ಬಳ್ಳಿಯ ಗಣೇಶ ಪೇಟೆಯ ಹೋಟೆಲ್ ನಲ್ಲಿ ಕುಳಿತು ಹೇಳಿದ್ದರೆ ನಂಬಬಹುದಿತ್ತು. ಏಕೆಂದರೆ ಗಣೇಶ್ ಪೇಟೆಯಲ್ಲಿ ‌ಪ್ರಸಿದ್ದ ಮಾಂಸ ಮತ್ತು ಮೀನಿನ ಮಾರುಕಟ್ಟೆ ಇದೆ. ಅಲ್ಲಿ ಸದಾ ಕುರಿ, ಮೇಕೆಗಳನ್ನು ಕುಯ್ಯುವುದರಿಂದ ಅಲ್ಲಿಂದ ರಕ್ತ ತಂದು ಅವರು ಬರೆದು ಕೊಡಬಹುದಿತ್ತು.

ಯಡಿಯೂರಪ್ಪನವರ ಈ ಮಾತನ್ನು ರಕುತದ  ಭಾಷೆ ಎಂದು ನಮ್ಮ ಮಂಡ್ಯ ಜಿಲ್ಲೆಯಲ್ಲಿ ಕರೆಯಲಾಗುತ್ತದೆ. ಅವರು ಕೂಡಾ ಮಂಡ್ಯ ನೆಲದ ಕೂಸು. ಸಂಜೆ ಆರು ಗಂಟೆಯ ನಂತರ ಮಂಡ್ಯ ಜಿಲ್ಲೆಯ ಯಾವುದಾದರೂ ಸಾರಾಯಿ ಅಂಗಡಿ ಬಳಿ ಹೋಗಿ  ನಮ್ಮ ಯಡಿಯೂರಪ್ಪ ರಕುತದ ಭಾಷೆಯಲ್ಲಿ ಇಂಗೆ ಮಾತಾಡವ್ರೆ ಏನು ಹೇಳ್ತಿ ನಿಂಗಣ್ಣಾ? ಎಂದು ಯಾರಾದರೂ ಒಬ್ಬ ಕುಡುಕನಿಗೆ ಕೇಳಿದರೆ ಅವನ ಉತ್ತರ ಹೀಗಿರುತ್ತದೆ.

ಮಗಾ, ಯಡಿಯೂರಪ್ಪನಿಗೆ ಹೇಳು ಬೂಕನಕೆರೆ ಸಮಾಧಿ ಒಳಗೆ ಇರುವ ಅವರಪ್ಪ, ತಾತ ಇವರನ್ನ ಎಬ್ಬಿಸಿಕೊಂಡು ಕರೆದುಕೊಂಡು ಹೋದರೂ ಸಹ ಹುಬ್ಬಳ್ಳಿ ಒಳಗೆ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಆಗೋದಿಲ್ಲ. ಬೇಕಂದ್ರೆ ರಕುತದಲ್ಲಿ ಬರೆದು ಕೊಡ್ತಿನಿ ಎನ್ನುತ್ತಾನೆ.

ಏಕೆಂದರೆ, ಇದು ಮಂಡ್ಯದ ನಿಂಗಣ್ಣ ಅಥವಾ ಬೋರಣ್ಣ ಇವರಿಗೆ ಗೊತ್ತಿರುವ ಸತ್ಯ ಮಾತ್ರವಲ್ಲ ಕರ್ನಾಟಕದ ಜನ ಸಾಮಾನ್ಯರಿಗೆ ಇರುವ ಸಾಮಾನ್ಯ ಜ್ಞಾನ.ಈವರೆಗೆ ಶಿಕಾರಿಪುರದಲ್ಲಿ ಯಡಿಯೂರಪ್ಪನವರನ್ನು ಸೋಲಿಸಲು ಸಾಧ್ಯವಾಗಿಲ್ಲ. ಅದೇ ರೀತಿ ಹೊಳೆನರಸಿಪುರದಲ್ಲಿ ರೇವಣ್ಣ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಜೊತೆಗೆ ಮತದಾರರಿಗೆ  ಪಕ್ಷವನ್ನು ಮೀರಿದ  ಭಾವನಾತ್ಮಕ ಸಂಬಂಧಗಳಿರುತ್ತವೆ.

ನಲವತ್ತು ವರ್ಷ ರಾಜಕೀಯ ಮಾಡಿರುವ ಹಾಗೂ ಲಿಂಗಾಯತ ಸಮುದಾಯದ ಬಸವಣ್ಣ ಎಂದು ಕರೆಸಿಕೊಂಡಿರುವ ಯಡಿಯೂರಪ್ಪನವರಿಗೆ ಈ ಸಾಮಾನ್ಯ ಜ್ಞಾನವಿಲ್ಲವೆ? ಇದೆ. ಆದರೆ ಅವರು ಈಗ ಗುಜರಾತಿನ ಗೊಂಬೆರಾಮರ ಕೈಗೆ ಸಿಕ್ಕ ಕೋಲೆ ಬಸವಣ್ಣ ಆಗಿದ್ದಾರೆ. ಅವರು ಹೇಳಿದಂತೆ ಕುಣಿಯುವುದು ಹಾಗೂ ತಲೆಯಾಡಿಸುವುದು ಯಡಿಯೂರಪ್ಪನವರಿಗೆ ಅನಿವಾರ್ಯ.

ಇಂದಿನ ಬಿ.ಜೆ.ಪಿ ಯಲ್ಲಿ ಇರುವ ಕೋಮುವಾದಿಗಳು ಹಾಗೂ ಮೂರನೇ ದರ್ಜೆಯ ರಾಜಕಾರಣಿಗಳಿಗೆ ಹೋಲಿಸಿದರೆ ಯಡಿಯೂರಪ್ಪನವರು ಸಾವಿರ ಪಾಲು ಉತ್ತಮ ಮನುಷ್ಯ. ಎಂದಿಗೂ ಧರ್ಮದ ಬಗ್ಗೆ ಉದ್ರೇಕಕಾರಿ ಭಾಷಣ ಮಾಡಲಿಲ್ಲ. ಅನ್ಯ ಕೋಮು ಮತ್ತು ಜಾತಿ ಸಮುದಾಯದ ಬಗ್ಗೆ ಕೆಟ್ಟ ಮಾತುಗಳನ್ನು ಆಡದೆ ಮೌನವಾಗಿ ಉಳಿದುಬಿಟ್ಟರು.

ಪಕ್ಷವನ್ನು ಬಿಟ್ಟರೆ ಅವರಿಗೆ ಅನ್ಯ ಮಾರ್ಗವಿರಲಿಲ್ಲ. 2011 ರಲ್ಲಿ ಕೆ.ಜೆ.ಪಿ. ಎಂಬ  ಪಕ್ಷ ಕಟ್ಟಿ ನೀರಿಲ್ಲದ ಬಾವಿಗೆ ತಲೆ ಕೆಳಕಾಗಿ ಬಿದ್ದವರಂತೆ ಬಿದ್ದು ಮಣ್ಣು ಮುಕ್ಕಿದರು. ಮತ್ತೇ ಬಿ.ಜೆ.ಪಿ ಸೇರಿ ಆಸ್ತಿ, ಹಣ ಮಾಡುವ ಹಪಾಹಪಿಯಲ್ಲಿ ಅನೇಕ ಹಗರಣಗಳಲ್ಲಿ ಸಿಲುಕಿದರು. ಯಡಿಯೂರಪ್ಪನವರ  ಈ ದೌರ್ಬಲ್ಯ ಗೊಂಬೆ ರಾಮರ ಪಾಲಿಗೆ ಆಯುಧವಾಗಿದೆ. ಅವರ ಪಾಲಿಗೆ ಗೊಂಬೆರಾಮರು  ರಾಷ್ಟ್ರೀಯ ನಾಯಕರಂತೆ ಕಾಣುತ್ತಿಲ್ಲ. ಬದಲಾಗಿ ಬಗುನಿ ಗೂಟದಂತೆ ಗೋಚರಿಸುತ್ತಿದ್ದಾರೆ.

2011 ರಲ್ಲಿ ಹಾವೇರಿಯಲ್ಲಿ ಅವರು ಕರ್ನಾಟಕ ಜನತಾ ಪಕ್ಷ ಆರಂಭಿಸಿದಾಗ ಉದ್ಘಾಟನಾ ಭಾಷಣ ಮಾಡಿದ್ದ ಬಂಡಾಯ ಸಾಹಿತಿ ಚಂಪಾ ಅವರು ಯಡಿಯೂರಪ್ಪ ಅವರನ್ನು ಇಪ್ಪತ್ತೊಂದನೇ ಶತಮಾನದ ಬಸವಣ್ಣ ಎಂದು ಕರೆದರು. ನಂತರ ಕೆಲವು ಮಠಾಧೀಶರೆಂಬ ಪರಾವಲಂಬಿ ಜೀವಿಗಳು ಜೋಳಿಗೆಗೆ ಹೇರಳವಾಗಿ ಭಿಕ್ಷೆ ಬೀಳಲಿ ಎಂಬ ಆಸೆಯಿಂದ ಯಡಿಯೂರಪ್ಪ ಕೆಳಕ್ಕೆ ಬಿದ್ದಾಗಲೆಲ್ಲಾ ಅವರ ಮೀಸೆ ಮಣ್ಣಾಗದಂತೆ ನೋಡಿಕೊಂಡರು. ಜೊತೆಗೆ ಬಸವಣ್ಣ ಎಂದು ಕರೆಯುತ್ತಾ ಬಂದರು. ನಂತರ ಪತ್ರಿಕೋದ್ಯಮದ ಮರಿಗುಬ್ಬಚ್ಚಿಗಳು ಅದನ್ನೇ ಚಿಲಿಪಿಲಿಗುಟ್ಟಿದವು.

ಇದರಿಂದಾಗಿ  ಬಿ.ಎಸ್.ಯಡಿಯೂರಪ್ಪ ಎಂಬ ಬಸವಣ್ಣ ಇಂದು ಕೋಲೆ ಬಸವಣ್ಣನಾಗುವ ಸ್ಥಿತಿ ಒದಗಿತು. ಅವರಿಗೆ ಪಕ್ಷದಲ್ಲಿ ಆಗಿರುವ ಅವಮಾನಗಳನ್ನು ಗಮನಿಸಿದರೆ ಅವರು ಎಂದೋ ರಾಜಕೀಯ ನಿವೃತ್ತಿ ಘೋಷಿಸಬೇಕಿತ್ತು. ಈಗ ಆ ಸ್ವಾತಂತ್ರ್ಯವೂ ಅವರಿಗಿಲ್ಲವಾಗಿದೆ. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಯವರನ್ನು ಸೋಲಿಸುವ ಹೊಣೆಗಾರಿಕೆಯನ್ನು ವಹಿಸಲಾಗಿದೆ.

ದೇಹದ ರಕ್ತ ತಣ್ಣಗಾಗಿ ಹೆಪ್ಪುಗಟ್ಟುತ್ತಿರುವಾಗ  ಯಡಿಯೂಪ್ಪನವರು ಈಗ ರಕುತದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಈ ಸ್ಥಿತಿ ಯಾವ ರಾಜಕೀಯ ಶತೃವಿಗೂ ಬರಬಾರದು.

-ಜಗದೀಶ್ ಕೊಪ್ಪ, ಚಿಂತಕರು

Leave a Reply