ಈದಿನ.ಕಾಮ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ
ಧೂಳೀಪಟವಾಗಲಿದೆ ಆಡಳಿತಾರೂಢ ಬಿಜೆಪಿ
ದಳಪತಿಗಳಿಗಿಲ್ಲ ಅಧಿಕಾರದ ರುಚಿ
ಹಿಂದಿನ ಎಲ್ಲ ದಾಖಲೆಗಳನ್ನೂ ಧೂಳೀಪಟ ಮಾಡಲಿದೆ ಕೈಪಡೆ
ಬೆಂಗಳೂರು: ಈದಿನ.ಕಾಮ್ ಸಮೀಕ್ಷೆಯ ವಿವರಗಳು ಬಹಿರಂಗವಾಗಿದ್ದು 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂಬ ಸಂಗತಿ ಸಮೀಕ್ಷೆಯಿಂದ ಬಹಿರಂಗವಾಗಿದೆ. ಸಮೀಕ್ಷೆಯಲ್ಲಿ ವಿಪಕ್ಷ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಲಿದ್ದು, 132-140 ಕ್ಷೇತ್ರಗಳಲ್ಲಿ ಗೆಲ್ಲವು ನಿರೀಕ್ಷೆ ಇದೆ. ಆಡಳಿತಾರೂಢ ಬಿಜೆಪಿ ಉತ್ತರ ಕರ್ನಾಟಕದಲ್ಲಿ ಧೂಳೀಪಟವಾಗಲಿದೆ ಎಂಬ ಸಂಗತಿ ಸಮೀಕ್ಷೆಯಿಂದ ಬಹಿರಂಗವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಸ್ಪಷ್ಟ ಅಲೆ ಇದ್ದು, ಬಿಜೆಪಿಯು ತೀವ್ರ ಹಿನ್ನಡೆ ಅನುಭವಿಸಲಿದೆ ಎಂದು ಈದಿನ.ಕಾಮ್ ನಡೆಸಿದ ಮೆಗಾಸರ್ವೆಯಲ್ಲಿ ಕಂಡು ಬಂದಿದೆ. 2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈದಿನ.ಕಾಮ್ ನಡೆಸಿದ ಸಮೀಕ್ಷೆಯ ಅಂತಿಮ ಹಂತದಲ್ಲಿ ಇಂದು ಯಾವ ಪಕ್ಷಕ್ಕೆ ಎಷ್ಟು ಸೀಟುಗಳು ಲಭ್ಯವಾಗಬಹುದು ಎಂಬ ವಿವರಗಳನ್ನು ಇಂದು ಬಿಡುಗಡೆ ಮಾಡಲಾಗಿದೆ. ಅದರಂತೆ ಕಾಂಗ್ರೆಸ್ ಪಕ್ಷ 132ರಿಂದ 140 ಸೀಟುಗಳನ್ನು ಪಡೆಯಲಿದ್ದು, ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ವಿರುದ್ಧ ಮತ್ತು ಕಾಂಗ್ರೆಸ್‌ನ ಅಲೆ ಜೋರಾಗಿ ಬೀಸಲಿದೆ.
ಮತ ಪ್ರಮಾಣ Vote share
| 2018ರಲ್ಲಿ ಮತಗಳಿಕೆ | 2023ರಲ್ಲಿ ಮತ ಗಳಿಕೆ ಸಾಧ್ಯತೆ | |
| ಕಾಂಗ್ರೆಸ್ | 38.1% | 43% |
| ಬಿಜೆಪಿ | 36.3% | 33% |
| ಜೆಡಿಎಸ್ | 18.3% | 16% |
| ಇತರೆ | 7.4% | 8% |
ಸಮೀಕ್ಷೆಯ ಪ್ರಕಾರ ಇಲ್ಲಿ ಕಾಣುತ್ತಿರುವಂತೆ ಮತ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಗಿಂತ ಎರಡಂಕಿಯ ಮೇಲುಗೈ ಅನ್ನು ಸಾಧಿಸಲಿದೆ. ಶೇ.43 ಮತಪ್ರಮಾಣದಿಂದ ಕಾಂಗ್ರೆಸ್ ಕಳೆದ ಮೂರು ದಶಕಗಳ ತನ್ನ ಚುನಾವಣಾ ಸಾಧನೆಗಿಂತ ಹೆಚ್ಚಿನದಾದ್ದನ್ನು ಸಾಧಿಸಲಿರುವುದು ಈ ಸಾರಿಯ ವಿಶೇಷ. ಇದಕ್ಕಿಂತ ಹಿಂದೆ ಕಾಂಗ್ರೆಸ್ 43 ಅನ್ನು ಮುಟ್ಟಿದ್ದದ್ದು 1989ರಲ್ಲಿ ಎಂದು ಈದಿನ.ಕಾಮ್ ವಿಶ್ಲೇಷಿಸಿದೆ.
ಆದರೆ, ಈ ಪ್ರಮಾಣದ ಏರಿಕೆ ಮೇಲ್ನೋಟಕ್ಕೆ ಕಾಣುವಷ್ಟು ನಾಟಕೀಯವಾಗಿಲ್ಲ. ಏಕೆಂದರೆ 2018ರ ಚುನಾವಣೆಯಲ್ಲಿ ಸೋತಿದ್ದರೂ ಕಾಂಗ್ರೆಸ್ ಪಕ್ಷವು ಆಗಲೂ ಬಿಜೆಪಿಗಿಂತ ಶೇ.2ರಷ್ಟು ಹೆಚ್ಚು ಮತಗಳನ್ನೇ ಗಳಿಸಿತ್ತು. ಆಗಿನದ್ದಕ್ಕೆ ಹೋಲಿಸಿದರೆ, ಕಾಂಗ್ರೆಸ್ ಪರವಾಗಿ ಶೇ.5ರಷ್ಟು ಮತಗಳ ಹೆಚ್ಚಳ ಆಗಿದೆ ಮತ್ತು ಅದರಲ್ಲಿ ಶೇ.3ಅನ್ನು ಬಿಜೆಪಿಯಿಂದಲೂ, ಶೇ.2 ಅನ್ನು ಜೆಡಿಎಸ್ ನಿಂದಲೂ ಅದು ಪಡೆದುಕೊಳ್ಳುತ್ತಿದೆ. ಪಂಜಾಬ್ ನಲ್ಲಿ ಅಭೂತಪೂರ್ವ ಗೆಲುವು ಮತ್ತು ಗುಜರಾತಿನಲ್ಲೂ ಒಳ್ಳೆಯ ಸಾಧನೆ ಮಾಡಿದ್ದ ಆಮ್ ಆದ್ಮಿ ಪಕ್ಷವು ಕರ್ನಾಟಕದ ಮಟ್ಟಿಗೆ ‘ಇನ್ನೂ ಶುರುವಾಗದ ಪಕ್ಷವಾಗಿಯೇ ಉಳಿದುಕೊಳ್ಳುವಂತೆ ಕಾಣುತ್ತಿದೆ. ಅದರ ಮತಪ್ರಮಾಣವು ಶೇ.2ಅನ್ನು ದಾಟುವುದಿಲ್ಲ ಎಂದು ವರದಿ ಮಾಡಿದೆ.
ಸೀಟು ವಿವರ: (Projected estimate of seats)
| 2018ರಲ್ಲಿ ಗಳಿಸಿದ ಸೀಟುಗಳು | 2023ರಲ್ಲಿ ಸೀಟು ಗಳಿಸುವ ಸಾಧ್ಯತೆ | |
| ಕಾಂಗ್ರೆಸ್ | 80 | 132 – 140 |
| ಬಿಜೆಪಿ | 104 | 57 – 65 |
| ಜೆಡಿಎಸ್ | 37 | 19 – 25 |
| ಇತರೆ | 3 | 1 – 5 |
ಸಮೀಕ್ಷೆಯ ಅಂಕಿ-ಸಂಖ್ಯೆಗಳನ್ನು ಸೀಟು ವಿವರವಾಗಿ ವಿಸ್ತರಿಸಿದರೆ, ಕಾಂಗ್ರೆಸ್ ಗೆ ಸ್ಪಷ್ಟವಾದ ಬಹುಮತ ಸಿಗಲಿದ್ದು, 132-140 ಸೀಟುಗಳನ್ನು ಅದು ಪಡೆಯಲಿದೆ. ಈ ಹಿಂದೆ ಇಂತಹ ಬಹುಮತವನ್ನು ಪಡೆದುಕೊಂಡಿದ್ದದ್ದು 2013 ಮತ್ತು 1999ರಲ್ಲಿ. ಈ ಸಾರಿ ಅವೆರಡನ್ನೂ ದಾಟಲಿದ್ದು, 1989ರ ನಂತರ ಮೂರು ದಶಕಗಳಲ್ಲಿ ಇದೇ ಅತಿ ದೊಡ್ಡ ಸಾಧನೆಯಾಗಬಹುದು ಎಂದು ಸಮೀಕ್ಷೆಯಿಂದ ಸಿಕ್ಕಿರುವ ಸಂಖ್ಯೆಗಳು ಹೇಳುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿಯ ಮಟ್ಟಿಗೆ ಹೇಳುವುದಾದರೆ, 2013ರಲ್ಲಿ ಆ ಪಕ್ಷ ಒಡೆದು ಹೋಗಿದ್ದಾಗ ಉದ್ಭವವಾಗಿದ್ದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಹೊರತುಪಡಿಸಿದರೆ, ಇದು ಅದರ ಅತ್ಯಂತ ಹೀನಾಯ ಸ್ಥಿತಿಯಾಗಿರಲಿದೆ.ಜೆಡಿಎಸ್ ಸಹಾ ಈ ಅವಧಿಯ ಅತಿ ಕೆಟ್ಟ ಪರಿಸ್ಥಿತಿ ಈ ಸಾರಿಯದ್ದೇ ಆಗಿರುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ.
ಕಾಂಗ್ರೆಸ್‌ಉತ್ತರ ಕರ್ನಾಟಕದಲ್ಲಿ ಮಿಕ್ಕವರನ್ನು ಗುಡಿಸಿ ಹಾಕಲಿದ್ದು, ದಕ್ಷಿಣ ಕರ್ನಾಟಕದಲ್ಲೂ ಮುನ್ನಡೆ ಗಳಿಸಲಿದೆ ಎಂಬುದು ಸ್ಪಷ್ಟವಾಗಿದೆ. ಆದರೆ ಮಧ್ಯ ಕರ್ನಾಟಕ ಕರಾವಳಿಗಳಲ್ಲಿ ಬಿಜೆಪಿಯು ಸ್ಪಷ್ಟವಾದ ಮುನ್ನಡೆ ಹೊಂದಿರುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
| ವಲಯವಾರು ಸೀಟುಗಳು | ಒಟ್ಟು | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ |
| ಹೈದರಾಬಾದ್ ಕರ್ನಾಟಕ | 40 | 31 – 37 | 2 – 4 | 2 – 4 |
| ಮುಂಬೈ ಕರ್ನಾಟಕ | 50 | 40 – 46 | 3 – 7 | 0 – 2 |
| ಕರಾವಳಿ ಕರ್ನಾಟಕ | 19 | 5 – 9 | 10 – 14 | 0 |
| ಮಧ್ಯ ಕರ್ನಾಟಕ (ಚಿತ್ರದುರ್ಗ , ದಾವಣಗೆರೆ, ಹರಪನಹಳ್ಳಿ ತಾ. ಸೇರಿ) ಶಿವಮೊಗ್ಗ, ಚಿಕ್ಕಮಗಳೂರು | 26 | 3 – 7 | 19 – 23 | 0 |
| ದಕ್ಷಿಣ ಕರ್ನಾಟಕ | 61 | 26 – 32 | 10 – 14 | 15 – 19 |
| ಬೆಂಗಳೂರು ನಗರ | 28 | 16 – 20 | 6 – 10 | 1 – 3 |
ಈ ಎಲ್ಲಾ ಅಂಕಿ-ಸಂಖ್ಯೆಗಳು ಮಾರ್ಚ್ ನಿಂದ ಏಪ್ರಿಲ್ ವರೆಗೆ ನಡೆಸಲಾದ ಸಮೀಕ್ಷೆಯಿಂದ (ಸ್ಯಾಂಪಲೈಜ್: 41,169) ಅಂದಾಜಿಸಲಾಗಿದೆ. ಹಾಗಾಗಿ ಆ ನಂತರದ ಬೆಳವಣಿಗೆಗಳು ಬೀರಬಹುದಾದ ಪರಿಣಾಮಗಳು ಚುನಾವಣಾ ಫಲಿತಾಂಶದವನ್ನೂ ಪ್ರಭಾವಿಸಲಿವೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಮೀಕ್ಷೆಯನ್ನು ರಾಜ್ಯದ 204 ಕ್ಷೇತ್ರಗಳಲ್ಲಿ ನಡೆಸಲಾಗಿದ್ದು, 1,521 ಬೂತ್ ಗಳಲ್ಲಿ, 41,169 ಜನರನ್ನು ಖುದ್ದಾಗಿ ಸಂದರ್ಶನ ಮಾಡಿ ಈ ಅಂಕಿಅಂಶಗಳನ್ನು ಪಡೆಯಲಾಗಿದೆ. ಈ ಸಮೀಕ್ಷೆಯನ್ನು ಮಾರ್ಚ್3 ರಿಂದ ಏಎಪ್ರಿಲ್21 ರವೆರೆಗೆ ನಡೆಸಲಾಗಿದ್ದು, ಸಮೀಕ್ಷೆಯನ್ನು ಈ ಕ್ಷೇತ್ರದಲ್ಲಿ ಅನುಭವ ಹೊಂದಿದ ತಜ್ಞರ ಸಹಕಾರದೊಂದಿಗೆ ವೈಜ್ಞಾನಿಕವಾದ ರ್ಯಾಂಡಮ್ ಆಯ್ಕೆಯ ವಿಧಾನದಲ್ಲಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಈದಿನ ನಡೆಸಿದ ಸಮೀಕ್ಷೆಯ ಇನ್ನೂ ವಿವರವಾದ ಅಂಕಿ-ಸಂಖ್ಯೆಗಳು ಉಳಿದ ಮಾಧ್ಯಮದವರಿಗೂ ಲಭ್ಯ ಸಂಪೂರ್ಣ ದತ್ತಾಂಶವು ಯಾವುದೇ ವಿಶ್ವವಿದ್ಯಾಲಯದ ಆಸಕ್ತ ಸಂಶೋಧನಾ ವಿಭಾಗಕ್ಕೆ ಮುಕ್ತವಾಗಿ ಲಭ್ಯವಿರುತ್ತದೆ ಎಂದು ಕೊಂಡಿಗಳನ್ನು ಕೂಡ ನೀಡಲಾಗಿದೆ.
https://drive.google.com/drive/folders/1v84A0fivjg-ZkM5cx-kRScILpxdMHAu4



