ಆಶಯದಲ್ಲಿ ‘ದಲಿತ’ರಾಗುವ ಸಮಸ್ಯೆ…

2 years ago

ದಸಂಸ ಕುರಿತ ಚರ್ಚೆಯಲ್ಲಿ ಹಿಂದುಳಿದ ಸಮುದಾಯದ ಕಿರಣ್ ಗಾಜನೂರು ನಾನೂ ಕೂಡ ದಲಿತನೇ ನನ್ನನ್ನು ದಲಿತ ಅಲ್ಲ ಅಂತ ಹೇಗೆ ಪರಿಗಣಿಸುತ್ತೀರಿ ಎಂದರೇ, ಇನ್ನೊಬ್ಬ ಗೆಳೆಯ ಕಾಂತರಾಜ್ ಗೊಲ್ಲರಹಟ್ಟಿ ದಲಿತರು ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಹಾಗೇ ಅತಿ ಹಿಂದುಳಿದ ಸಮುದಾಯಗಳು ರಾಜಕೀಯ ಮತ್ತು ಉದ್ಯೋಗಾವಕಾಶಗಳಿಂದ ವಂಚಿತರಾಗಿರುವುದು ನಾವೂ ದಲಿತರಷ್ಟೇ ದಮನಿತರೇ ಎಂದಿದ್ದಾರೆ.

ಈ ಇಬ್ಬರು ಗೆಳೆಯರಿಗೂ ಹೇಳಬೇಕೆನಿಸಿದ್ದು ದಲಿತ ಚಳುವಳಿ ಎಲ್ಲ ದಮನಿತರ ‘ನೋವಿಗೂ ಮಿಡಿಯುವ ಪ್ರಾಣ ಮಿತ್ರ’ನಂತೆ ಇರುವುದರಿಂದ ಆಶಯದ ಮಟ್ಟದಲ್ಲಿ ಎಲ್ಲ ದಮನಿತರೂ ದಲಿತರೇ. ‘ದಲಿತ’ ಪದದ ಅರ್ಥ ಕೂಡ ಎಲ್ಲ ಸಮುದಾಯಗಳಲ್ಲಿ ತುಳಿತಕ್ಕೆ ಒಳಗಾದವರು, ಶೋಷಿತರು, ನೊಂದವರು ಎನ್ನುವುದು. ಆದರೆ ಎಲ್ಲ ಸಮುದಾಯಗಳ ಬಡವರು, ಶೋಷಿತರು ನಾವೆಲ್ಲರೂ ಒಂದು ಎಂದು ಯಾವತ್ತೂ  ಭಾವಿಸುವುದಿಲ್ಲ. ಹಾಗಾಗಿ ಆಶಯದ ಮಟ್ಟದಲ್ಲಿ ನೀವು ನಿಮ್ಮನ್ನು ದಲಿತರು ಎಂದು ಕರೆದುಕೊಂಡರೆ ಸಮಸ್ಯೆ ಇಲ್ಲ‌. ಆದರೆ ಎಲ್ಲ ಶೋಷಿತರನ್ನು ಒಳಗೊಂಡಿರುವ ‘ದಲಿತ’ ಎನ್ನುವ ಪರಿಭಾಷೆಯ ಒಳಗೆ ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಅಸಮಾನತೆ ಮತ್ತು ಶೋಷಣೆಯನ್ನು ಅನುಭವಿಸಿರುವ ಅಸ್ಪೃಶ್ಯ ಸಮುದಾಯಗಳ ಐಡೆಂಟಿಟಿ ಇದೆ.

ಕೇವಲ ಆಶಯದ ಮಟ್ಟದಲ್ಲಿ ದಲಿತನಾಗುವುದಕ್ಕೂ, ದಲಿತನಾಗಿ ಹುಟ್ಟಿದ್ದಕ್ಕೆ ಬರುವ lived experienceಗೂ ತುಂಬಾ ವ್ಯತ್ಯಾಸ ಇದೆ. ಕೆಲವೊಮ್ಮೆ ನಮ್ಮ ಆಶಯದ ಕಾರಣಕ್ಕೆ claim ಮಾಡುವ ಐಡೆಂಟಿಟಿಗಳು ನಿಜವಾಗಿಯೂ ಆ ಸಮುದಾಯಗಳಿಗೆ ಸಿಗಬೇಕಾದ ಐಡೆಂಟಿಟಿಯನ್ನು ಕಸಿದುಕೊಳ್ಳುತ್ತದೆ. ನಿಜವಾಗಿಯೂ ಅಂಚಿನಿಂದ ಬಂದ ಸಮುದಾಯಗಳಿಗೆ ಸಿಗಬೇಕಾದ ಪ್ರಾತಿನಿಧ್ಯ, ಅವಕಾಶ, ನ್ಯಾಯದ ಪ್ರಶ್ನೆಗಳನ್ನು ನಗಣ್ಯ ಮಾಡಿಬಿಡುತ್ತವೆ.

ದಲಿತ ಸಮುದಾಯ ಹಿಂದುಳಿದ ಸಮುದಾಯಗಳ  ಪರವಾಗಿ ನಿಂತು ಹೋರಾಟ ಮಾಡಿರುವ ಹಲವು ಉದಾಹರಣೆಗಳು ಇವೆ. ಆದರೆ ಅದೇ ಹಿಂದುಳಿದ ಸಮುದಾಯಗಳು ಎಷ್ಟು ಸಲ ದಲಿತರ ಪರ ನಿಂತಿವೆ ಎನ್ನುವುದಕ್ಕೆ ಉತ್ತರ ಇದೆಯೇ?

ದಲಿತರನ್ನು ಪ್ರೀತಿ ಮಾಡಿದ್ದಕ್ಕೆ, ಮದುವೆಯಾಗಿದ್ದಕ್ಕೆ ಅತಿಹೆಚ್ಚು ಮರ್ಯಾದೆ ಹತ್ಯೆಗಳನ್ನು ಮಾಡುತ್ತಿರುವವರು ಯಾರು?

ಅತಿ ಹಿಂದುಳಿದ ಸಮುದಾಯಗಳಿಗೆ ಪ್ರಾತಿನಿಧ್ಯ, ಅವಕಾಶ, ಅಧಿಕಾರ ಸಿಗದಿರುವುದಕ್ಕೆ ಕಾರಣ ಆ ಸಮುದಾಯಗಳು ಜನಸಂಖ್ಯೆಯಲ್ಲಿ ಕಡಿಮೆ ಇರುವುದು, ರಾಜಕೀಯ ಪ್ರಜ್ಞೆ ಇಲ್ಲದಿರುವುದು ಮತ್ತು ಪ್ರಬಲ ಸಮುದಾಯಗಳ ಅವಕಾಶವಾದಿತನವೇ ಹೊರತು ಜಾತಿವಾದವಲ್ಲ.

– ವಿ.ಎಲ್.ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು

Leave a Reply