ದಲಿತ ಯುವ ರಾಜಕಾರಣಿ ಪ್ರಸಾದ್ ಕೊಲೆ ಹಿಂದೆ ದ್ವೇಷ ರಾಜಕಾರಣ

2 years ago

#politics #hatred #behind #murder #Dalit #youth #politician #Prasad

ರಾಯಚೂರು: ರಾಯಚೂರ ಜಿಲ್ಲೆಯ ಮಾನವಿ ತಾಲೂಕಿನ ಮುದ್ಲಾಪುರ ಗ್ರಾಮದ ದಲಿತ ಯುವ ರಾಜಕಾರಣಿ ಪ್ರಸಾದ್ ಕೊಲೆಯನ್ನು ಕರ್ನಾಟಕ ರೈತ ಸಂಘ KRS(-AIKKS)ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಡಿ.ಹೆಚ್.ಪೂಜಾರ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಗ್ರಾಮ ಪಂಚಾಯತಿಯ ಭ್ರಷ್ಟಾಚಾರದ ವಿರುದ್ಧ ಪ್ರಸಾದ್ ಧ್ವನಿ ಎತ್ತಿದ್ದಲ್ಲದೆ ಅವಿಶ್ವಾಸ ಗೊತ್ತುವಳಿ ಪಾಸ್ ಮಾಡಿಸಿದ್ದರಿಂದಲೆ ವಿರೋಧಿ ಗುಂಪಿನವರು ಕೊಲೆ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ. ರಾಜಕೀಯ ಸಾಮಾಜಿಕ ವೈಷಮ್ಯೆಗಳೇನೆ ಇರಲಿ ಕೊಲೆ ಮಾಡುವ ಕೃತ್ಯವನ್ನು ಪ್ರಜಾತಂತ್ರವಾದಿಗಳಾರು ಕ್ಷೆಮಿಸಲಾರರು ಎಂದಿದ್ದಾರೆ.

ಕೊಲೆ ಮಾಡುವ ಕ್ರೌರ್ಯಯ ಪರಂಪರೆಯನ್ನು, ಶಾಂತಿಪ್ರಿಯರು ಹಾಗೂ ಮಾನವೀಯ ಮೌಲ್ಯಯುಳ್ಳವರಾರು ಸಹಿಸಿಕೊಳ್ಳಲಾರರು. ಪ್ರಸಾದನ ಕೊಲೆಯು, ದೇಶದಲ್ಲಿ ತೀವ್ರಗೊಂಡಿರುವ ಕೋಮುವಾದಿ, ಜಾತಿವಾದಿ ದ್ವೇಷ ರಾಜಕಾರಣದ ಮುಂದುವರೆದ ಭಾಗವಾಗಿದೆ ಎಂದಿದ್ದಾರೆ.

2014 ನಂತರದ ಕಾಲಾವಧಿಯಲ್ಲಿ ಕೆಳ ಜಾತಿ ಮತ್ತು ಮೇಲು ಜಾತಿಯ ಜನರ ಮಧ್ಯ ಸಾಮಾಜಿಕ, ರಾಜಕೀಯ ದ್ವೇಷವನ್ನು ತೀವ್ರಗೊಳಿಸುವ ಕಾರ್ಯಗಳಿಗೆ ಇನ್ನಷ್ಟು ಶಕ್ತಿ ತುಂಬಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರೀತಿ, ಸಹಕಾರ, ಶಾಂತಿ ಸೌಹಾರ್ದತೆಯ ರಾಜಕೀಯಕ್ಕೆ ಹಿನ್ನಡೆಯಾಗಿದೆ ಎಂದಿದ್ದಾರೆ.

ಪ್ರಸಾದ್ ಕೊಲೆಯ ನಂತರ ರಾಜ್ಯದ ಕೆಲವು ಭಾಗಗಳಲ್ಲಿ ಕೊಲೆಯನ್ನು ಸಮರ್ಥಿಸುವ ಮತ್ತು ಇದೆ ರೀತಿಯಲ್ಲಿ ಕೊಲೆ ಮಾಡಿದರೆ ಮಾತ್ರ ಕೆಳ ಜಾತಿ ಜನರನ್ನು ರಾಜಕೀಯವಾಗಿ ನಿಯಂತ್ರಣ ಮಾಡಲು ಸಾಧ್ಯ ಎನ್ನುವ ಚರ್ಚೆಗಳು ನಡೆದಿವೆ. ನಾಜಿವಾದಿ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನ ಕಾಲಾವಧಿಯಲ್ಲಿ ಜನಾಂಗೀಯ ಕಲಹಗಳು ಕ್ರೌರ್ಯಗಳು ವಿಜೃಂಭಿಸಿದ್ದವು. ಭಾರತದಲ್ಲಿ ಆ ಪರಂಪರೆ ಮುಂದುವರೆದಿದೆ. ಮಣಿಪುರದ ಕುಕಿ ಜನಾಂಗದ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಪೈಶಾಚಿಕ ಕೃತ್ಯವು ದ್ವೇಷ ರಾಜಕಾರಣದ ದೊಡ್ಡ ಪುರಾವೆಯಾಗಿವೆ ಎಂದಿದ್ದಾರೆ.

ಪ್ರಸಾದ್ ಕೊಲೆ ಸೇರಿದಂತೆ ರಾಜ್ಯಾದ್ಯಂತ ನಡೆದಿರುವ ಕೊಲೆ, ಅತ್ಯಾಚಾರ, ದೌರ್ಜನ್ಯಗಳಿಗೆ ಪೊಲೀಸ್ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವೆ ಮುಖ್ಯ ಕಾರಣವಾಗಿದೆ. ಹಣ ಖರ್ಚು ಮಾಡಿದರೆ ಅಪರಾಧಿ ನಿರಪರಾಧಿಯಾಗುತ್ತಾನೆ. ಇಲಾಖೆಯ ಈ ದೌರ್ಬಲ್ಯಗಳನ್ನು, ಜಾತಿವಾದಿಗಳು, ರಾಜಕೀಯ ಗೂಂಡಾಗಳು, ಕ್ರಿಮಿನಲ್ ಗಳು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರ ದಲಿತ ದುರ್ಬಲರ ಮತ್ತು ಮಹಿಳೆಯ ಮೇಲಿನ ದೌರ್ಜನ್ಯವನ್ನು ನಿಯಂತ್ರಣ ಮಾಡದಿದ್ದರೇ, ಕೊಲೆ ದೌರ್ಜನ್ಯಗಳು ಮತ್ತಷ್ಟು ಹೆಚ್ಚಾಗುತ್ತವೆ. ಕೊಲೆ ದೌರ್ಜನ್ಯ ಅತ್ಯಾಚಾರದಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಕ್ಕೆ ಮುಂದಾದರೆ ಮಾತ್ರ ಸಿದ್ದರಾಮಯ್ಯ ಸರ್ಕಾರದ ಮೇಲೆ ವಿಶ್ವಾಸ ಉಳಿಯುತ್ತದೆ ಎಂದಿದ್ದಾರೆ.

ಪ್ರಸಾದ್ ಕೊಲೆಯನ್ನು ಸಿಓಡಿ ತನಿಗೊಪ್ಪಿಸಲು ಒತ್ತಾಯಿಸಿ ನವೆಂಬರ್ 16ರಂದು ಮಾನ್ವಿಯಲ್ಲಿ ನಡೆಯುವ ಹೋರಾಟಕ್ಕೆ ಕರ್ನಾಟಕ ರೈತ ಸಂಘ KRS-AIKKS ಸಂಪೂರ್ಣವಾಗಿ ಬಂಬಲಿಸುತ್ತದೆ ಎಂದಿದ್ದಾರೆ.

Leave a Reply