ಬೆಂಗಳೂರು: ಬಿಜೆಪಿ ಜಿಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ಪಟ್ಟಿ ಪಕ್ಷದಲ್ಲಿ ಮತ್ತೊಮ್ಮೆ ಅಸಮಾಧಾನ ಸೃಷ್ಟಿಸಿದೆ. ನಿನ್ನೆ ಜಿಲ್ಲಾಧ್ಯಕ್ಷರ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಹಲವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆಪ್ತರು ಹಾಗೂ ಈ ಹಿಂದಿನ ಕೆ.ಜೆ.ಪಿ.ಯಲ್ಲಿ ಗುರುತಿಸಿಕೊಂಡವರನ್ನು ಆಯ್ದು ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ನೇಮಕಾತಿ ಸಮಯದಲ್ಲಿ ಹಿರಿಯರ ಅಭಿಪ್ರಾಯಗಳನ್ನು ಕೇಳಲಾಗಿಲ್ಲ. ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಸಮಯದಲ್ಲಿ ಇಂತಹ ಏಕಪಕ್ಷೀಯ ನಿರ್ಧಾರಗಳು ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಹಿರಿಯ ನಾಯಕರು ಭಿನ್ನಾಭಿಪ್ರಾಯ ತಾಳಿದ್ದಾರೆ.

ಜಿಲ್ಲಾಧ್ಯಕ್ಷರ ನೇಮಕದಲ್ಲಿ ಆಗಿರುವ ಗೊಂದಲವನ್ನು ತಕ್ಷಣ ಪರಿಹರಿಸಬೇಕು ಎಂದು ಕೆಲವು ನಾಯಕರು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರಿಗೆ ಮನವಿ ಮಾಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಸಿಕ್ಕಿದೆ.




