ಫೆಬ್ರವರಿ10ರಿಂದ ಈ ವಿಧಾನಸಭೆಯ ಕಡೆಯ ಅಧಿವೇಶನ

4 years ago

ಬೆಂಗಳೂರು: ರಾಜ್ಯದ ಪ್ರಸಕ್ತ ವಿಧಾನಸಭೆಯ ಕೊನೆಯ ಅಧಿವೇಶನ ಫೆಬ್ರವರಿ 10ರಿಂದ ಆರಂಭವಾಗಲಿದೆ. ಅಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವ ಮೂಲಕ ವಿಧಾನಮಂಡಲದ ಪ್ರಸಕ್ತ ವರ್ಷದ ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ.

ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಫೆ. 10ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆ. 16ರವರೆಗೂ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಫೆ.17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎಂದರು.

ಲೋಕೋಪಯೋಗಿ ಇಲಾಖೆ ಮೂಲಕ ₹600 ಕೋಟಿ ವೆಚ್ಚದಲ್ಲಿ 100 ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಗಳ ನಿರ್ಮಾಣ, ಉತ್ತರ ಕನ್ನಡ ಜಿಲ್ಲೆಯ ಜಾಲಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪೂಂಜಾಲಕಟ್ಟೆ, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ವಡ್ಡರ್ಸೆ ಹಾಗೂ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಹಿರೇಶಕುನ ಗ್ರಾಮದಲ್ಲಿ ಒಟ್ಟು ₹72 ಕೋಟಿ ವೆಚ್ಚದಲ್ಲಿ ನಾರಾಯಣ ಗುರು ವಸತಿ ಶಾಲೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

ನಗರ ಪ್ರದೇಶಗಳಲ್ಲಿ 117 ಆರೋಗ್ಯ ಕೇಂದ್ರಗಳನ್ನು ನಮ್ಮ ಕ್ಲಿನಿಕ್ ಗಳಾಗಿ ಪರಿವರ್ತಿಸುವುದು, ಗ್ರಾಮೀಣ ಪ್ರದೇಶದ 847 ಉಪ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

Leave a Reply