ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸುತ್ತಿರುವ ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು ಮತ್ತು ಕಾರ್ಮಿಕ ಹಕ್ಕುಗಳ ರಕ್ಷಣಗೆ ಸರಕಾರಗಳು ಮುಂದಾಗಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಅಖಿಲ ಭಾರತ ಅಧ್ಯಕ್ಷೆ ಡಾ. ಕೆ. ಹೇಮಲತಾ ಹೇಳಿದರು.
ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನದ ಮೂರನೇ ದಿನ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ಸಮ್ಮೇಳನದಲ್ಲಿ ಮೂರು ಪ್ರಮುಖ ನಿರ್ಣಯವನ್ನು ಅಂಗೀಕರಿಸಲಾಯಿತು. ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೊಳಿಸುತ್ತಿರುವ ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು ಮತ್ತು ಕಾರ್ಮಿಕ ಹಕ್ಕುಗಳ ರಕ್ಷಣೆಗೆ ಸರಕಾರಗಳು ಮುಂದಾಗಬೇಕು ಎಂದು ನಿರ್ಣಯ ಅಂಗೀಕರಿಸಲಾಯಿತು ಎಂದರು.
ಕೇಂದ್ರದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಸತತ ಒಂದು ವರ್ಷ ಹೋರಾಟ ನಡೆದಿದ್ದು, ಹೋರಾಟದ ತೀವ್ರತೆಗೆ ಮಣಿದ ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್ಸು ಪಡೆಯುವ ಸಂದರ್ಭದಲ್ಲಿ ನೀಡಿದ ಪ್ರಮುಖ ಭರವಸೆಗಳನ್ನು ಇದೂವರೆಗೂ ಈಡೇರಿಲ್ಲ. ಭರವಸೆ ಈಡೇರಿಸಲು ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದರು.
ವಿದ್ಯುತ್ ರಂಗವನ್ನು ಸಂಪೂರ್ಣ ಖಾಸಗೀಯವರಿಗೆ ವಹಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ವಿದ್ಯುತ್ ಮಸೂದೆ-2021 ಕೇಂದ್ರ ಸರ್ಕಾರ ಕೂಡಲೇ ವಾಪಸ್ಸು ಪಡೆಯಬೇಕೆಂದು ಸಮ್ಮೇಳನವು ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದರು.
ದೆಹಲಿಯಲ್ಲಿ 2023ರ ಏಪ್ರಿಲ್ 5ರಂದು ರೈತ-ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಯಲಿದೆ. ಈ ಐಕ್ಯ ಹೋರಾಟದಲ್ಲಿ ದೇಶದ ವಿವಿಧ ಭಾಗಗಳಿಂದ ರೈತ-ಕಾರ್ಮಿಕರು, ಕೃಷಿಕೂಲಿಕಾರರು, ಮಹಿಳೆಯರು, ಯುವಜನ-ವಿದ್ಯಾರ್ಥಿಗಳು ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. ಈ ವಿಭಾಗದ ಹಕ್ಕುಗಳ ರಕ್ಷಣೆಗಾಗಿ ಸರ್ಕಾರವನ್ನು ಎಚ್ಚರಿಸಲು ಈ ಹೋರಾಟ ನಡೆಯುತ್ತಿದೆ ಎಂದರು.
ಕೇರಳದ ಎಡರಂಗ ಸರ್ಕಾರ ಜಾರಿಗೊಳಿಸುತ್ತಿರುವ ಜನಪರ, ರೈತಪರ, ಕಾರ್ಮಿಕ ಪರ ನೀತಿಗಳಿಗೆ ಎದುರಾಗಿ ದಾಳಿಗಳು ಆರಂಭವಾಗಿವೆ. ಬಿಜೆಪಿ ಮತ್ತು ಅದರ ಮಿತ್ರಕೂಟ ಎಡರಂಗ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ತಡೆಯೊಡ್ಡುತ್ತಿದ್ದು, ಇದನ್ನು ಖಂಡಿಸಲಾಗುವುದು ಎಂದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಚಳುವಳಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಬಂಡವಾಳಶಾಹಿ ದೇಶಗಳು ಬೆಳೆದು ಬರುತ್ತಿರುವ ಕಾರ್ಮಿಕ ಹೋರಾಟಗಳು ಆಳುವ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸುತ್ತಿದ್ದಾರೆ. ಅದರಲ್ಲೂ ಕೋವಿಡ್ ಸಾಂಕ್ರಾಮಿಕ ಉತ್ತುಂಗದ ಹಂತದಲ್ಲಿದ್ದಾಗ ಕಾರ್ಮಿಕರು ಹೋರಾಟಗಳನ್ನು ಸಂಘಟಿಸಿದ್ದಾರೆ ಎಂದರು.
ಅಕ್ಟೋಬರ್ 2021ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ದೊಡ್ಡ ಪ್ರತಿಭಟನೆಗಳು ನಡೆದವು. ಕಳೆದ ಕೆಲವು ವರ್ಷಗಳಲ್ಲಿ ಜರುಗಿದ ಅತ್ಯಂತ ಬಲಿಷ್ಠ ಹೋರಾಟ ಇದಾಗಿದೆ. ಅದೇ ರೀತಿ ಯು.ಕೆ. ಸ್ಪೇನ್, ಜರ್ಮನಿಯಲ್ಲಿಯೂ ಹೋರಾಟಗಳು ನಡೆದಿವೆ. ಇತ್ತೀಚಿಗೆ ಫ್ರಾನ್ಸ್ ನಲ್ಲಿ ಸತತ ಪ್ರತಿಭಟನೆಗಳು ನಡೆದಿದ್ದು, ನೌಕರರ ನಿವೃತ್ತಿ ಕಾಲಮಿತಿ ಅವಧಿ ಬದಲಾವಣೆಯನ್ನು ವಿರೋಧಿಸಿ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದರು ಎಂದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳಶಾಹಿಗಳ ವಿರುದ್ಧ ಜರುಗುತ್ತಿರುವ ಜನ ಚಳುವಳಿಯೊಂದಿಗೆ ಸಿಐಟಿಯು ಸಂಘಟನೆಯು ಸೌಹಾರ್ದಯುತವಾಗಿ ಬೆಂಬಲಿಸಲಿದೆ ಎಂದು ಹೇಳಿದರು.




