ಕರ್ನಾಟಕದಲ್ಲಿ ಇಲ್ಲಿಯ ತನಕ ಅನೇಕ ಸಚಿವರು ಅನೇಕ ಖಾತೆಗಳನ್ನು ನಿರ್ವಹಿಸಿದ್ದಾರೆ. ಕೆಲವು ಖಾತೆಗಳಿಗೆ ಮಹತ್ವವಿಲ್ಲವೆಂದು ಅಂದುಕೊಳ್ಳುತ್ತಾರೆ. ಆದರೆ ಖಾತೆಗಳಿಗೆ ಮಹತ್ವ ಬರುವುದು ಅದನ್ನು ನಿರ್ವಹಿಸುವವರಿಂದ.
ಕರ್ನಾಟಕ ರಾಜ್ಯದಲ್ಲಿ ಎಲ್.ಜಿ. ಹಾವನೂರುರವರು ಕಾನೂನು ಸಚಿವರಾಗಿದ್ದಾಗಲೇ ಅದರ ಮಹತ್ವ ಹೆಚ್ಚಿದ್ದು, ಕಡಿದಾಳ ಮಂಜಪ್ಪನವರು ಕಂದಾಯ ಸಚಿವರಾದಗಲೇ ಅದರ ವ್ಯಾಪ್ತಿ ಅರಿವಿಗೆ ಬಂದದ್ದು, ಗೋವಿಂದೇಗೌಡರು ಶಿಕ್ಷಣ ಸಚಿವರಾದಾಗಲೇ ಇದರ ಹಿರಿಮೆ ಹೆಚ್ಚಿದ್ದು, ಅಬ್ದುಲ್ ನಜೀರ್ ಸಾಬ್ ಅವರು ಪಂಚಾಯತ್ ರಾಜ್ ಸಚಿವರಾದಗಲೇ ಆ ಖಾತೆಗೆ ಮಹತ್ವ ಬಂದದ್ದು, ಬಸವಲಿಂಗಪ್ಪನವರು ಪರಿಸರ ಖಾತೆಯನ್ನು ನಿರ್ವಹಿಸಿದಾಗಲೇ ಇದರ ಪ್ರಾಮುಖ್ಯತೆ ಎಷ್ಟೆಂದು ತಿಳಿದುಬಂದದ್ದು, ಸಣ್ಣ ಉಳಿತಾಯ ಖಾತೆಯೆನ್ನು ನಿರ್ವಹಿಸಿ ಸಾಧನೆ ಮಾಡಬಹುದೆಂದು ಸಾರಿದವರು ವೀರಣ್ಣನವರು. ಸಾರಿಗೆ ಸಚಿವರಾಗಿ ಪಿ.ಜಿ.ಆರ್. ಸಿಂದ್ಯಾ ಮತ್ತು ರಾಮಲಿಂಗಾರೆಡ್ಡಿರವರು ಇದರ ವಿಸ್ತಾರ ಅರಿವಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಘನತೆ ವಿಜೃಂಭಿಸಿದ್ದು ಎಂ.ಪಿ.ಪ್ರಕಾಶ್ ಅವರು. ಡಾ.ರಾಜ್ ಕುಮಾರ್ ಅವರು ಅಪಹರಣವಾದಾಗ ಮಲ್ಲಿಕಾಜುನ ಖರ್ಗೆರವರು ಗೃಹ ಖಾತೆಯನ್ನು ನಿರ್ವಹಿಸಿದ ರೀತಿಯಿಂದ ಈ ಖಾತೆಯ ಗಂಭೀರತೆ ಅರಿವಾಯಿತು.
ಹೀಗೆ ಅನೇಕರು ಖಾತೆಗಳನ್ನು ನಿರ್ವಹಿಸಿದಾಗ ಅದರ ಮಹತ್ವ ಹೆಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ ರಾಮಲಿಂಗಾರೆಡ್ಡಿಯವರು ಮುಜರಾಯಿ ಇಲಾಖೆ ಖಾತೆಗೆ ಮಹತ್ವವನ್ನು ತಂದುಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲಿ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದಾಗ ಪ್ರಥಮ ಬಾರಿಗೆ ಸುಧೀಂದ್ರ ರಾವ್ ಕಸಬೆರವರನ್ನು ಮುಜರಾಯಿ ಖಾತೆಗೆ ಪ್ರತ್ಯೇಕವಾದ ಸಚಿವರನ್ನು ನೇಮಕ ಮಾಡಿದರು. ಗುಂಡೂರಾಯರು ಪ್ರಥಮ ಬಾರಿಗೆ ಅರ್ಚಕರಿಗೆ ಅನೇಕ ಸವಲತ್ತುಗಳನ್ನು ಸಂಬಳವೂ ಸೇರಿದಂತೆ ಹೆಚ್ಚಿಸಿದರು. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಆರಾಧನಾ ಯೋಜನೆಯನ್ನು ಜಾರಿಗೆ ತಂದು ಈ ಮೂಲಕ ಗ್ರಾಮೀಣ ಪ್ರದೇಶದ ಸಣ್ಣಪುಟ್ಟ ದೇವಾಲಯಗಳ ಅಭಿವೃದ್ಧಿಗೆ ಚಾಲನೆಯನ್ನು ನೀಡಿದರು.
ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸ್ವಸ್ತಿಕ್ ನಿಧಿಯನ್ನು ಹೆಚ್ಚಿಸಿದರು. ಇತ್ತೀಚಿನ ದಶಕಗಳಲ್ಲಿ ಮುಜರಾಯಿ ಖಾತೆಯನ್ನು ವಹಿಸಿಕೊಳ್ಳಲು ಆಸಕ್ತಿಯಿಂದ ಮುಂದೆ ಬರುವುದಿಲ್ಲ. ರಾಮಲಿಂಗಾರೆಡ್ಡಿಯವರು ಈ ಖಾತೆಯನ್ನು ವಹಿಸಿಕೊಂಡ ನಂತರ ಇದರ ಸ್ವರೂಪವೇ ಬದಲಾಗಿದೆ. ಆರ್ಚಕರುಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಅರ್ಚಕರು ಮತ್ತು ನೌಕರರು ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಿಧನರಾದರೆ ಎರಡು ಲಕ್ಷ ರೂಪಾಯಗಳ ಪರಿಹಾರವನ್ನು ಅವರ ಕುಟುಂಬದವರಿಗೆ ನೀಡುವ ಯೋಜನೆ ಜಾರಿಯಾಗಿದೆ.
ಅದೇ ರೀತಿಯಲ್ಲಿ ಅವರ ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆಗೆ ಸೌಲಭ್ಯಗಳನ್ನು ಒದಗಿಸಲು ವಿಮೆ ಯೋಜನೆಯನ್ನು ತಂದಿರುತ್ತಾರೆ. ಇವರ ಮಕ್ಕಳುಗಳು ಮಾಡುವ ವಿದ್ಯಾಭ್ಯಾಸಗಳಿಗೆ ಪ್ರೋತ್ಸಾಹ ಧನವಾಗಿ ಪದವಿ ಪೂರ್ವ ಶಿಕ್ಷಣಕ್ಕೆ ಐದು ಸಾವಿರ ರೂಪಾಯಿಗಳು, ಐಟಿಐ, ಜೆಓಸಿ ಮತ್ತು ಡಿಪ್ಲೋಮೊ ಕೋರ್ಸ್‌ಗಳಿಗೆ ಐದು ಸಾವಿರ ರೂಪಾಯಿಗಳು, ಪದವಿ ಶಿಕ್ಷಣಕ್ಕೆ ಏಳು ಸಾವಿರ, ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಹದಿನೈದು ಸಾವಿರ, ವೈದ್ಯಕೀಯ ಕೋರ್ಸ್ ಗಳಿಗೆ ಇಪ್ಪತ್ತೈದು ಸಾವಿರ, ತಾಂತ್ರಿಕ ಶಿಕ್ಷಣಕ್ಕೆ ಇಪತ್ತೈದು ಸಾವಿರ, ಡೆಂಟಲ್ ಶಿಕ್ಷಣಕ್ಕೆ ಐವತ್ತು ಸಾವಿರ, ವಿದೇಶಿ ವ್ಯಾಸಂಗಕ್ಕೆ ಐವತ್ತು ಸಾವಿರ ರೂಪಾಯಿಗಳನ್ನು ನೀಡಲು ಕಾರ್ಯಕ್ರಮವನ್ನು ರೂಪಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ‘ಸಿ’ ದರ್ಜೆ ದೇವಾಲಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು ಮತ್ತು ನೌಕರರಿಗೆ ಕರ್ನಾಟಕ ಭಾರತ್ ಗೌರವ್ ಕಾಶಿ, ಗಯಾ ಯೋಜನೆ ಹಾಗೂ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆ ಯೋಜನೆಯಡಿಲ್ಲಿ ಪ್ರತಿವರ್ಷ 1200 ಜನ ಅರ್ಚಕರು ನೌಕರರ ಕುಟುಂಬದ ಒಬ್ಬ ಸದಸ್ಯರನ್ನು ಉಚಿತವಾಗಿ ಯಾತ್ರೆಗೆ ಕಳುಹಿಸಲಾಗುವುದು.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ‘ಎ’ ಮತ್ತು ‘ಬಿ’ ಅಧಿಸೂಚಿತ ದೇವಾಲಯಗಳಲ್ಲಿ ಮಾಂಗಲ್ಯ ಯೋಜನೆಯಡಿ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗಿದೆ. ಈ ಯೋಜನೆಯಡಿ ಪ್ರತಿ ಜೋಡಿಗೆ ಐವತ್ತೈದು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಆಯ್ಕೆಯಾಗುವ ‘ಸಿ’ ವರ್ಗದ ದೇವಾಲಯಗಳ ಅರ್ಚಕರು ಮತ್ತು ನೌಕರರು ವಸತಿ ಯೋಜನೆಗಳಿಗೆ ಪಾವತಿಸಬೇಕಾದ ವಂತಿಗೆಯನ್ನು ಸಾಮಾನ್ಯ ಸಂಗ್ರಹ ನಿಧಿಯಿಂದ ಭರಿಸಿ ಪಾವತಿಸಲಾಗುವುದು. ಇದಲ್ಲದೇ ಹಿರಿಯ ನಾಗರಿಕರಿಗೆ ದೇವಾಲಯಗಳಲ್ಲಿ ಶೀಘ್ರ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಶಿ ಯಾತ್ರೆಗೆ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗಿದೆ. ಆಯಾ ದೇವಾಲಯದ ಹುಂಡಿಯ ಹಣವನ್ನು ಆಯಾ ದೇವಾಲಯದ ಅಭಿವೃದ್ಧಿಗೆ ಬಳಸಲು ಆದೇಶ ಮಾಡಿದ್ದಾರೆ. ಈ ರೀತಿಯಲ್ಲಿ ಮುಜರಾಯಿ ಇಲಾಖೆಯ ಅರ್ಚಕರು ಮತ್ತು ಸಿಬ್ಬಂದಿ ಹಿತವನ್ನು ಕಾಯುತ್ತಾ ದೇವಾಲಯಗಳಲ್ಲಿ ಸೌಕರ್ಯ, ಸೌಲಭ್ಯಗಳನ್ನು ಹೆಚ್ಚಿಸುತ್ತಾ ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಇವುಗಳಿಗೆ ಆದ್ಯತೆ ನೀಡಿದ್ದಾರೆ.
ಹಿಂದುಳಿದ ವರ್ಗದವರು, ದಲಿತರು ಮತ್ತು ಸಾಮಾನ್ಯ ನಾಗರಿಕರು ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸುವ ದೇವಾಲಯಗಳಿಗೆ ಮತ್ತು ಜೀರ್ಣೋದ್ಧಾರ ಕಾರ್ಯಗಳಿಗೆ ಆರ್ಥಿಕ ನೆರವನ್ನು ಒದಗಿಸುತ್ತಿದ್ದಾರೆ. ಈ ರೀತಿಯಲ್ಲಿ ರಾಮಲಿಂಗಾರೆಡ್ಡಿರವರು ಈ ಖಾತೆಯ ಮಹತ್ವವನ್ನು ಹೆಚ್ಚಿಸಿ ಜನಸ್ನೇಹಿ ಖಾತೆಯನ್ನಾಗಿ ಪರಿವರ್ತಿಸಿದ್ದಾರೆ.
ಜನರಿಗೆ ಮುಜರಾಯಿ ಇಲಾಖೆಯ ಖಾತೆ ಇದೆ ಎನ್ನುವುದು ಈಗ ಮನದಟ್ಟಾಗುತ್ತಿದೆ. ತಿರುಪತಿಯಲ್ಲಿ ಕರ್ನಾಟಕ ಭವನದ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದಲ್ಲದೆ, ಶಿರಡಿ, ಮಂತ್ರಾಲಯದ ನಂತರ ಈಗ ಆಯೋಧ್ಯೆಯಲ್ಲಿಯೂ ಸಹ ಕರ್ನಾಟಕ ಭವನದ ನಿರ್ಮಾಣದ ಗುರಿಯನ್ನು ಹೊಂದಿದ್ದಾರೆ. ರಾಮಲಿಂಗಾರೆಡ್ಡಿರವರು ಸಾರಿಗೆ ಇಲಾಖೆಗೆ ಕೊಟ್ಟಷ್ಟೆ ಮಹತ್ವವನ್ನು ಈ ಖಾತೆಗೂ ಕೊಡುವುದರ ಮೂಲಕ ಜನರ ಗಮನವನ್ನು ಸೆಳೆಯುವ ಇಲಾಖೆಯನ್ನಾಗಿ ಬದಲಾಯಿಸಿದ್ದಾರೆ. ಹೀಗಾಗಿ ಖಾತೆಗಳಿಗೆ ಮಹತ್ವ ಬರುವುದು ಅದನ್ನು ನಿರ್ವಹಿಸುವವರಿಂದಲೇ ಹೊರತು ಖಾತೆಗಳಿಗೆ ಮಹತ್ವವಿಲ್ಲ.
- ಕೆ.ಎಸ್.ನಾಗರಾಜ್, ಬೆಂಗಳೂರು




