ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನ ಸಮೀಪಿಸುತ್ತಿರುವ ಬೆನ್ನಲ್ಲೇ ವರ್ಗಾವಣೆ ಸೇರಿದಂತೆ ಹಲವಾರು ವಿಷಯದಲ್ಲಿ ಮಂತ್ರಿಗಳು, ಶಾಸಕರು ಮತ್ತು ಮುಖಂಡರ ನಡುವೆ ಅಸಮಾಧಾನ ತಲೆದೋರಿದೆ. ಇದನ್ನು ಆರಂಭದಲ್ಲಿಯೇ ಚಿವುಟಿ ಹಾಕಲು ಹೈಕಮಾಂಡ್ ತೀರ್ಮಾನಿಸಿದೆ. ಇದಕ್ಕಾಗಿ ದೆಹಲಿಯಲ್ಲಿ ನಾಳೆ ಸಭೆ ಆಯೋಜಿಸಲಾಗಿದೆ.
ಹೈಕಮಾಂಡ್ ಸೂಚನೆ ಆಧರಿಸಿ ರಾಜ್ಯದಲ್ಲಿನ ವಿದ್ಯಮಾನಗಳ ಕುರಿತಂತೆ ಚರ್ಚೆಗಾಗಿ ಸಿಎಂ, ಸಚಿವರು ಸೇರಿ ಪ್ರಮುಖ ಹಿರಿಯ ಕಾಂಗ್ರೆಸ್ ನಾಯಕರ ದಂಡು ದೆಹಲಿಗೆ ತೆರಳುತ್ತಿದ್ದಾರೆ
ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅಸಮಾಧಾನ ಹಾಗೂ ಹಿರಿಯ ಶಾಸಕರ ದೂರು ಸರಕಾರಕ್ಕೆ ಮುಜುಗರ ಸೃಷ್ಟಿಸಿರುವ ಬೆನ್ನಲ್ಲೇ, ನಾಳೆ ಮಧ್ಯಾಹ್ನ 3 ಗಂಟೆಗೆ ವರಿಷ್ಠರ ಸಮ್ಮುಖದಲ್ಲಿಸಭೆ ಕರೆಯಲಾಗಿದೆ. ಸಿಎಂ, ಡಿಸಿಎಂ, ಸಚಿವರು ಹಾಗೂ ಆಯ್ದ ಹಿರಿಯ ಶಾಸಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಕಾರ್ಯತಂತ್ರ: ಈ ಸಭೆಯ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಂಬರುವ ಲೋಕಸಭೆ ಚುನಾವಣೆಯ ತಂತ್ರಗಾರಿಕೆ ಕುರಿತು ಚರ್ಚೆ ಮಾಡುವ ಉದ್ದೇಶದಿಂದ ಸಚಿವರು, ಶಾಸಕರು ಮತ್ತು ಇತರ ನಾಯಕರು ದೆಹಲಿ ಪ್ರವಾಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ, ಪಕ್ಷದ ಹಿತದೃಷ್ಟಿ, ಚುನಾವಣಾ ತಂತ್ರಗಾರಿಕೆ, ಜವಾಬ್ದಾರಿಗಳ ಹಂಚಿಕೆ ಕುರಿತು ಚರ್ಚೆ ಮಾಡಲು ಹೈಕಮಾಂಡ್ ನಾಯಕರು ದೆಹಲಿಯಲ್ಲಿ ಸಭೆ ಕರೆದಿದ್ದಾರೆ. ಜೊತೆಗೆ ನಮ್ಮ ಎಲ್ಲ ಗ್ಯಾರಂಟಿಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದರು.
ಸಚಿವರು, ಶಾಸಕರು ಹೊರತಾಗಿ ಹಲವು ಮುಖಂಡರು ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಹೋಗುತ್ತಿರುವ ಬಗ್ಗೆ ಕೇಳಿದಾಗ, ಕೇವಲ ಸಚಿವರಿಗೆ ಮಾತ್ರ ಆಹ್ವಾನ ನೀಡಿಲ್ಲ. ಕೆಲವು ಶಾಸಕರು, ಸಂಸದರು, ಪಕ್ಷದ ಹಿರಿಯ ಮುಖಂಡರೂ ಸೇರಿದಂತೆ ಒಟ್ಟು 50 ನಾಯಕರನ್ನು ಮೂರು ತಂಡಗಳಂತೆ ಸಭೆಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಸಮನ್ವಯ ಸಮಿತಿ: ನಾನು ಸರ್ಕಾರವೂ ಹೌದು, ಪಕ್ಷವೂ ಹೌದು. ಅದೇ ರೀತಿ ಮುಖ್ಯಮಂತ್ರಿಯವರು ಪಕ್ಷದವರೂ ಹೌದು ಹಾಗೂ ಸರ್ಕಾರವೂ ಹೌದು. ನಾವೇ ಇರುವಾಗ ಸಮನ್ವಯ ಸಮಿತಿ ಏಕೆ? ನಾವೇ ಎಲ್ಲ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದರು.
ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ರಾಹುಲ್ ಗಾಂಧಿ ಬಂದಿದ್ದಾಗ ಪ್ರಮುಖರ ಸಭೆ ನಡೆಯಬೇಕಿತ್ತು. ಕೇರಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಪಕ್ಷದ ಹಿರಿಯ ನಾಯಕ ಉಮ್ಮನ್ ಚಾಂಡಿ ಅದೇ ದಿನ ನಿಧನ ಹೊಂದಿದರು. ಹೀಗಾಗಿ ಸಭೆ ರದ್ದಾಗಿತ್ತು. ರಾಜ್ಯ ಸರ್ಕಾರವು ನಾಲ್ಕು ಗ್ಯಾರಂಟಿಗಳು ಈಗಾಗಲೇ ಜಾರಿಗೆ ತಂದಿದ್ದು, ಅವುಗಳನ್ನು ಹೇಗೆ ಪ್ರಚಾರ ಮಾಡಬೇಕು, ಮುಂದಿನ ದಿನಗಳಲ್ಲಿ ಜನಪರ ಯೋಜನೆಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದರು.
ಲೋಕಸಭಾ ಚುನಾವಣೆ ನಮ್ಮ ಮುಂದಿದೆ. ಹಿರಿಯ ನಾಯಕರಿಗೆ ಹೊಣೆಗಾರಿಕೆ ನೀಡಬೇಕಾಗಿದೆ. ಅಭ್ಯರ್ಥಿಗಳ ಆಯ್ಕೆ ಹೇಗಿರಬೇಕು ಎಂಬ ವಿಚಾರವಾಗಿ ನಾವು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು. ಇದಕ್ಕಾಗಿ ಕೆಲವು ಸಲಹೆ, ಸೂಚನೆಗಳನ್ನು ಹೈಕಮಾಂಡ್ ನಾಯಕರು ನೀಡಲಿದ್ದಾರೆ ಎಂದರು.
ಸಿಬಿಐ ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವ ಬಗ್ಗೆ ಪ್ರಶ್ನಿಸಿದಾಗ, ತೀರ್ಪು ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಗೌರವ, ನಂಬಿಕೆಯಿದೆ. ನನ್ನ ಮೇಲೆ ಏನೇ ಸುಳ್ಳು ಕೇಸು ಹಾಕಿದರೂ ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.




