ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಬಂಡಾಯದ ಬಿಸಿ

3 years ago

#heat #rebellion #Congress #BJP #parties

ಬೆಂಗಳೂರು: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ರಾಜಕಾರಣಿ ಹಿಡಿಯಬೇಕೆಂದು ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಎದ್ದಿರುವ ಭಿನ್ನಮತದ ಧಗೆ ನಾಯಕತ್ವವನ್ನು ತತ್ತರಿಸುವಂತೆ ಮಾಡಿದೆ.

ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಬಹುತೇಕ ಪ್ರದೇಶಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಲು ಸಚ್ಚಾಗಿದ್ದರೆ ಟಿಕೆಟ್ ಘೋಷಣೆಗೂ ಮುನ್ನವೇ ಬಿಜೆಪಿಯಲ್ಲಿ ಬಂಡಾಯದ ಧಗದಗಿಸತೊಡಗಿದೆ.

ಧಗದಗಿಸುತ್ತಿರುವ ಬಂಡಾಯ: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಬೀಸುತ್ತಿದೆ. ಇದು ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಾತಾವರಣ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿಶ್ಚಿತ ಎಂದು ಭಾವಿಸಿರುವ ಹಲವು ಪ್ರಮುಖರು ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಅವರಲ್ಲಿ ಅನೇಕರಿಗೆ ಟಿಕೆಟ್ ಕೈತಪ್ಪಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ತುಮಕೂರು ಚಿತ್ರದುರ್ಗ ದಾವಣಗೆರೆ ಬೆಳಗಾವಿ ಮಂಡ್ಯ ಸೇರಿದಂತೆ ಹಲವೆಡೆ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದಾಗಿ ಟಿಕೆಟ್ ವಂಚಿತರು ಬೆದರಿಕೆ ಹಾಕಿದ್ದಾರೆ.

ತುಮಕೂರು ನಗರದಿಂದ ಮತ್ತೆ ಸ್ಪರ್ಧಿಸಲು ಬಯಸಿದ್ದ ಮಾಜಿ ಶಾಸಕ ರಫೀಕ್ ಅಹಮದ್ ತಮಗೆ ಟಿಕೆಟ್ ನಿರಾಕರಿಸಿದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದು ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೆ ಅಧಿಕೃತ ಅಭ್ಯರ್ಥಿಯ ವಿರುದ್ಧ ಕಣಕ್ಕಿಳಿಯುವ ಬೆದರಿಕೆ ಹಾಕಿದ್ದಾರೆ.

ಅದೇ ರೀತಿ ಚಿತ್ರದುರ್ಗ ಮತ್ತು ಮೊಳಕಾಲ್ಮೂರುವಿನಲ್ಲಿ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಕೇಳಿದಂತೆ ಚಿತ್ರದುರ್ಗದಲ್ಲಿ ಮಾಜಿ ಶಾಸಕ ರಘು ಆಚಾರ್ ಕಣಕ್ಕಿಳಿಯುವುದು ನಿಶ್ಚಿತ ಎಂದು ಹೇಳಿದರೆ, ಬೆಳಗಾವಿಯ ಕಿತ್ತೂರಿನಲ್ಲಿ ಮಾಜಿ ಸಚಿವ ಡಿ.ಬಿ. ಇನಾಂದಾರ್ ಬೆಂಬಲಿಗರು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯದಲ್ಲಿ ರವಿಕುಮಾರ್ ಅವರಿಗೆ ಟಿಕೆಟ್ ಘೋಷಿಸಿರುವುದು ಅನೇಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಚಿಕ್ಕಮಗಳೂರಿನ ಕಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಬಯಸಿದ್ದ ಮಾಜಿ ಶಾಸಕ ವೈ ಎಸ್ ವಿ ದತ್ತ ಅವರಿಗೆ ಟಿಕೆಟ್ ಸಿಗದಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಬಲಿಗರೊಂದಿಗೆ ಸಭೆ ನಡೆಸಿರುವ ಅವರು ಬಂಡಾಯ ಸಾರಿದರೆ ಕಾಂಗ್ರೆಸ್ ನ ಗೆಲುವಿನ ಹಾದಿ ಕಠಿಣವಾಗಲಿದೆ.

ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕರು ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿರುವುದು ನಾಯಕತ್ವವನ್ನು ಚಿಂತೆಗೀಡು ಮಾಡಿದೆ. ಹೈಕಮಾಂಡ್ ಅತೃಪ್ತ ಮಾಜಿ ಶಾಸಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಗೊಂದಲವಿಲ್ಲದಂತೆ ಬಿಕ್ಕಟ್ಟು ಬಗೆಹರಿಸಲು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ. ಇವರು ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎನ್ನುವುದು ಕುತೂಹಲದ ವಿಷಯವಾಗಿದೆ.

ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡ: ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸತತ ಸಭೆ ನಡೆಸಿದ ಬಿಜೆಪಿ ಕೋರ್ ಕಮಿಟಿ ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಿದೆ. ಇದನ್ನು ತೆಗೆದುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ತಲುಪಿದ್ದಾರೆ. ಅಲ್ಲಿ ನಡೆಯಲಿರುವ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ವಾರಾಂತ್ಯದಲ್ಲಿ ಸುಮಾರು 120 ರಿಂದ 150 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಗೆಲುವಿನ ಮಾನದಂಡ ಆಧರಿಸಿ ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದು ಭ್ರಷ್ಟಾಚಾರ ಸ್ಥಳೀಯ ಕಾರ್ಯಕರ್ತರ ವಿರೋಧ ಜನಸಾಮಾನ್ಯರ ಆಕ್ರೋಶ ಮತ್ತು ವಯಸ್ಸಿನ ಕಾರಣ ನೀಡಿ ಸುಮಾರು 25 ಜನ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಕ್ಷೇತ್ರದಲ್ಲಿ ಕಾರ್ಯಕರ್ತರ ಅವಕೃಪೆಗೆ ಒಳಗಾಗಿರುವ  ಶಾಸಕರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಸಂಭವವಿದ್ದು, ಹೊಸಬರಿಗೆ ಮಣೆ ಹಾಕಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಇದೇ ನನ್ನ ಕೊನೆಯ ಚುನಾವಣೆ, ಇದೊಂದು ಬಾರಿ ಅವಕಾಶ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.

ಬಾಗಲಕೋಟೆ ಜಿಲ್ಲೆ ತೇರದಾಳದಿಂದ ಹಾಲಿ ಶಾಸಕ ಸಿದ್ದು ಸವದಿಗೆ ಟಿಕೆಟ್ ಕೊಡಬಾರದೆಂದು ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆ ನಡೆಸಿದ್ದಾರೆ. ಒಂದು ವೇಳೆ ಅವರಿಗೆ ಟಿಕೆಟ್ ಕೊಟ್ಟರೆ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆಯನ್ನು ಹಾಕಲಾಗಿದೆ.

ಬಾಗಲಕೋಟೆ ಕ್ಷೇತ್ರದ ಹಾಲಿ ಶಾಸಕ ವೀರಣ್ಣ ಚರಂತಿಮಠ ಅವರಿಗೂ ಬಂಡಾಯದ ಬಿಸಿ ತಟ್ಟಿದೆ. ಖುದ್ದು ಅವರ ಸಹೋದರನೇ ಅಣ್ಣನ ಬದಲಿಗೆ ನನಗೆ ಟಿಕೆಟ್ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಕಲಬುರಗಿ ಜಿಲ್ಲೆ ಅಫ್ಜಲ್‍ಪುರದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಈ ಕ್ಷೇತ್ರದ ಆಕಾಂಕ್ಷಿಯಾಗಿರುವ ಮಾಲೀಕಯ್ಯ ಗುತ್ತೇದಾರ್ ತನಗೆ ಟಿಕೆಟ್ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ ಅವರಿಗೆ ಸಹೋದರ ನಿತೇಶ್ ಗುತ್ತೇದಾರ್ ಪ್ರಬಲ ಎದುರಾಳಿಯಾಗಿದ್ದು, ಕುಟುಂಬ ಕಲಹ ಬೀದಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮುಂದುವರೆದಿದೆ. ನಿನ್ನೆಯಷ್ಟೇ ಆರ್‍ಎಸ್‍ಎಸ್ ಕಟ್ಟಾಳು ನರೇಂದ್ರ ಬಿಜೆಪಿಗೆ ಸೇರ್ಪಡೆಯಾಗಿದ್ದು ಬಹುತೇಕ ಅವರೇ ಅಭ್ಯರ್ಥಿ ಎನ್ನಲಾಗುತ್ತಿದೆ

ತುಮಕೂರಿನಲ್ಲೂ ಬಿಜೆಪಿ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ಹಾಲಿ ಶಾಸಕ ಜ್ಯೋತಿಗಣೇಶ್ ಹಾಗೂ ಮಾಜಿ ಶಾಸಕ ಸೊಗಡು ಶಿವಣ್ಣ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಬ್ಬರು ಕೂಡ ನನಗೆ ಟಿಕೆಟ್ ಸಿಗುತ್ತದೆ ಎಂದು ಹೇಳಿಕೊಂಡೇ ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿದ್ದಾರೆ. ಹಾಲಿ ಶಾಸಕನಾಗಿದ್ದು, ನನಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಬಲವಿದೆ ಎಂದು ಜ್ಯೋತಿ ಗಣೇಶ್ ಹೇಳಿಕೊಳ್ಳುತ್ತಿದ್ದಾರೆ.

ಪಕ್ಷದಲ್ಲಿ ಹಿರಿಯನಾಗಿದ್ದು, ಕೊನೆಯ ಚುನಾವಣೆಯಾಗಿರುವುದರಿಂದ ನನಗೆ ಪಕ್ಷ ಟಿಕೆಟ್ ಕೊಡುತ್ತದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರ ಬೆಂಬಲ ತಮಗಿದೆ ಎಂಬ ಅತಿಯಾದ ಆತ್ಮವಿಶ್ವಾಸ ಸೊಗಡು ಶಿವಣ್ಣನವರದು. ಈಗಾಗಲೇ ಅವರು ಕ್ಷೇತ್ರದಲ್ಲಿ ಎರಡು ಜೋಳಿಗೆ ಹಾಕಿಕೊಂಡು ಪ್ರಚಾರವನ್ನೂ ಸಹ ನಡೆಸುತ್ತಿದ್ದಾರೆ.

ಮೈಸೂರಿನ ಕೃಷ್ಣರಾಜದಲ್ಲೂ ಹಾಲಿ ಶಾಸಕ ಕೆ.ರಾಮದಾಸ್‍ಗೆ ಟಿಕೆಟ್ ಕೊಡಬಾರದೆಂಬ ವಿರೋಧ ಕೇಳಿಬಂದಿದೆ. ಅದರಲ್ಲೂ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಬ್ರಾಹ್ಮಣ ಸಮುದಾಯದವರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಕ್ಷೇತ್ರದಿಂದ ಬಿಜೆಪಿ ಕಟ್ಟಾಳು ಹಾಗೂ ಆರ್‍ಎಸ್‍ಎಸ್ ಹಿನ್ನೆಲೆಯ ರಾಜೀವ್ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಕೇಳಿಬಂದಿದೆ. ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯಗೂ ಟಿಕೆಟ್ ಕೊಡುವುದಕ್ಕೆ ಕ್ಷೇತ್ರದಲ್ಲಿ ವಿರೋಧವಿದೆ.

ಯಲಬುರ್ಗಿಯಲ್ಲಿ ಸಚಿವ ಆಚಾರ್ ಹಾಲಪ್ಪ ಬದಲಿಗೆ ಮಾಜಿ ಶಾಸಕ ದಿವಂಗತ ಈಶಣ್ಣ ಗುಳಗಣ್ಣನವರ್ ಪುತ್ರನಿಗೆ ಟಿಕೆಟ್ ಕೊಡಬೇಕೆಂಬ ಅಭಿಪ್ರಾಯ ಕೇಳಿಬಂದಿದೆ.

ಪುತ್ತೂರಿನ ಸಂಜೀವ್ ಮಟಂದೂರು, ಸೊರಬದಲ್ಲಿ ಕುಮಾರ್ ಬಂಗಾರಪ್ಪ, ಹಾವೇರಿಯಲ್ಲಿ ನೆಹರು ಓಲೇಕರ್ ಸೇರಿದಂತೆ ಅನೇಕರಿಗೆ ಟಿಕೆಟ್ ನೀಡಲು ಪಕ್ಷದ ಕಾರ್ಯಕರ್ತರೇ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ಬೆಂಗಳೂರಿನಲ್ಲಿ ಹಾಲಿ ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಅವರಿಗೆ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರು ಪಕ್ಷದ ಮೇಲೆ ಒತ್ತಡ ಹಾಕಿದ್ದಾರೆ.

ಟಿಕೆಟ್ ವಂಚಿತ ಶಾಸಕರು ಬೇರೆ ಪಕ್ಷದ ಹುರಿಯಾಳುಗಳಾಗಿ ಕಣಕ್ಕಿಳಿಯುವ ಇಲ್ಲವೇ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಬೆದರಿಕೆ ಹಾಕಿದರೆ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಹೊಸಬರು ಕೂಡ ಇದೇ ರೀತಿಯ ಬೆದರಿಕೆ ಹಾಕುತ್ತಿದ್ದು ಟಿಕೆಟ್ ಹಂಚಿಕೆಗೂ ಮುನ್ನವೇ ಕಾಣಿಸಿಕೊಂಡಿರುವ ಈ ಬಂಡಾಯ ಬಿಜೆಪಿಯ ನಾಯಕತ್ವವನ್ನು ಚಿಂತೆಗೀಡು ಮಾಡಿದೆ.

Leave a Reply