ಬಿಜಾಪುರ ದ್ರಾಕ್ಷಿಯ ರುಚಿಯಂತೆ, ಚೂಡಾದ ಖಾರದ ಮಜಾದಂತೆ ದಾಖಲಾಗಿ ಹೋಯಿತು ಪತ್ರಕರ್ತರ ರಾಜ್ಯ ‘ಜವಾರಿ ಸಮ್ಮೇಳನ!’
ವಿಜಯಪುರ ಮೊದಲೇ ಆತಿಥ್ಯಕ್ಕೆ ಹೆಸರು. ಇಲ್ಲಿನ ಜನರೂ ಮನಸ್ಸಿನಿಂದಲೂ ಉದಾರಿಗಳು. ಇಂತಹ ಗುಣಗಳ ಜತೆ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರ್ ಅವರ ನಿಸ್ಪೃಹ, ಸರಳ ನಡೆ ಇಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ 37ನೆಯ ರಾಜ್ಯ ಸಮ್ಮೇಳನ ಯಶಸ್ಸಿನ ದಡ ಮುಟ್ಟುವಂತೆ ಮಾಡಿತು. ಸಮ್ಮೇಳನ ಅದ್ಧೂರಿಯಾಗಿ ನಡೆಯಿತು.

ಮುಖ್ಯಮಂತ್ರಿಗಳು ತಡವಾಗಿ ಬಂದರು ಮತ್ತು ತಡ ರಾತ್ರಿ ಬಂದ ಕೆಲವರು ವಸತಿಗಾಗಿ ಕಾಯಬೇಕಾಯಿತು ಎನ್ನುವುದು ಬಿಟ್ಟರೆ ಸಮ್ಮೇಳನ ಯಾವ ಹಂತದಲ್ಲೂ ಸೋಲಲಿಲ್ಲ. ಇಲ್ಲಿನ ಕೆಲವರ ಒಳಗೊಳಗಿನ ದುಸುಮುಸು, ಸಿಡುಕುತನ ಜರ ಅಲ್ಲಲ್ಲಿ “ಕಬಾಬ್ ಮೇ ಹಡ್ಡಿ”ಯಂತಾದರೂ ಸಮ್ಮೇಳನದ ಭರ್ಜರಿತನದಲ್ಲಿ ಅದೂ ಕರಗಿ ಮಾಯವಾಗಿತ್ತು.
ಶಿವಾನಂದ ತಗಡೂರ್‌ರ ಅನುಭವ, ಅವರ ತಾಳ್ಮೆ, ಎಲ್ಲರನ್ನು ಒಳಗೊಳ್ಳುವಿಕೆಯ ದೊಡ್ಡತನದಿಂದ ಎಲ್ಲ ಸರಿದೂಗುತ್ತ ಹೋಯಿತು. ಬರಬೇಕಿದ್ದ ಅಸಮಾಧಾನಗಳೂ ಗುಳ್ಳೆಗಳಂತೆ ಒಡೆದು ಹೋದವು.
ಒಂದು ರಾಜ್ಯ ಮಟ್ಟದ ಸಮ್ಮೇಳನ ಮಾಡುವುದೆಂದರೆ ಸಣ್ಣ ಮಾತೂ ಅಲ್ಲ. ಎಲ್ಲ ಭಾಗದ, ಎಲ್ಲ ಪ್ರದೇಶದ ಆಯಾ ಜನರ ಗುಣ-ಸ್ವಭಾವಗಳ ಜತೆ ಸಂಘಟಕರು ಏಗಬೇಕಾಗುತ್ತದೆ. ಬೆಂಗಳೂರಿನ ತಗಡೂರ್ ಅವರ ಟೀಮ್ ಇದೆಲ್ಲವನ್ನು ಅರೆದು ಕುಡಿದಂತಿದೆ. ಹಾಗಾಗಿ ಸಮ್ಮೇಳನಗಳು ಸುಲಲಿತವಾಗೋದು. ಗೋಷ್ಠಿಗಳ ತಯಾರಿ, ಅತಿಥಿಗಳ-ಪ್ರಶಸ್ತಿ ಪುರಸ್ಕೃತರ ಆಯ್ಕೆಗಳೆಲ್ಲ ಹದಗೊಳಿಸುವುದು ಸುಮ್ಮನೆ ಮಾತಲ್ಲ. ಅದನ್ನು ರಾಜ್ಯ ಘಟಕ ನವಿರಾಗಿ ನಿಭಾಯಿಸಿದೆ.

ನಡೆದ ನಾಲ್ಕು ಗೋಷ್ಠಿಗಳೂ ಚಂದಗಿದ್ದವು. ವಿಷಯ ಆಯ್ಕೆಯೂ ಪ್ರಸ್ತುತವಾಗಿದ್ದವು. ನವ ಮಾಧ್ಯಮ, ಡಿಜಿಟಲ್ ಸಾಧ್ಯತೆಗಳು, ಮಹಿಳಾ ಗೋಷ್ಠಿ ಎದ್ದು ಕಂಡವು. ಕೇಳುಗರನ್ನೂ ಹಿಡಿದಿಟ್ಟವು. ‘ಕನ್ನಡಪ್ರಭ’ ಮತ್ತು ‘ಸುವರ್ಣ ವಾಹಿನಿ’ಯ ಸಮೂಹ ಸಂಪಾದಕ ರವಿ ಹೆಗಡೆಯವರು ಛೊಲೊ ಮಾತನಾಡಿದರು. ಇಂದಿನ ವಾಸ್ತವ ಮತ್ತು ನವ ಮಾಧ್ಯಮಗಳ ಬೇಕು-ಬೇಡ, ಸಾಧ್ಯತೆಗಳನ್ನು ತೆರೆದಿಟ್ಟರು. ಮುಲಾಜಿಲ್ಲದೇ ನೇರಾ ನೇರ ಮಾತಮಾಡಿದರು.
‘ಪ್ರಜಾವಾಣಿ’ ಸಂಪಾದಕರಾದ ರವೀಂದ್ರ ಭಟ್ಟರು ಎಲ್ಲರೂ ಮೆಚ್ವುವಂತಹ ಮಾತನಾಡಿದರು. ಮಾಧ್ಯಮಗಳು ಸಾಗುತ್ತಿರುವ ದಾರಿಗಳ ಬಗ್ಗೆ ಎಚ್ಚರಿಕೆ ನೀಡುತ್ತಲೇ ಹಳಹಳಿಸಿದರು. ಹಾಗೇ ಅನೇಕ ಅತಿಥಿಗಳು ಉಪಯುಕ್ತ ಮಾತುಗಳನ್ನಾಡಿ ಸಮ್ಮೇಳನ ಕಳೆಗಟ್ಟುವಂತೆ ಮಾಡಿದರು.
ಬೆಳಗ್ಗೆ ಸಿದ್ದೇಶ್ವರ ಮಂದಿರದಿಂದ ಅನೇಕ ಕಲಾ ತಂಡಗಳ ಸಮೇತ ಮೆರವಣಿಗೆಯಾಗಿದ್ದು ವಿಶೇಷವಾಗಿತ್ತು. ಪ್ರತಿನಿಧಿಗಳ ಸಮಾವೇಶ, ಪತ್ರಿಕಾ ಏಜಂಟರ ತಳಮಳಗಳನ್ನು ದಾಖಲಿಸುವ ಗೋಷ್ಠಿ ಅವರ ಸಂಕಟಗಳಿಗೆ ದನಿಯಾಯಿತು. ಮುಖ್ಯಮಂತ್ರಿಗಳೂ ಸಂಘ ಕೇಳಿದ ಬಹುತೇಕ ಬೇಡಿಕೆಗಳಿಗೆ ಅಸ್ತು ಎಂದರು. ಗ್ರಾಮೀಣ ಪ್ರತಕರ್ತರಿಗೂ ಬಸ್ ಪಾಸ್ ನೀಡುವುದಾಗಿ ಭರವಸೆ ನೀಡಿದರು.
ತಗಡೂರ್ ಅವರು ಮೊದಲಿಂದಲೂ ಸರಕಾರದ ಜತೆ ಒಳ್ಳೆಯ ನಂಟು ಇಟ್ಟುಕೊಂಡು ಎಲ್ಲ ಪತ್ರಕರ್ತರಿಗೂ ನೆರವು ನೀಡುವಲ್ಲಿ ತುಂಬ ಆಸ್ಥೆ ವಹಿಸುತ್ತಲೇ ಬಂದಿದ್ದಾರೆ. ಕೋವಿಡ್ ಸಂದರ್ಭದ ಸಂಕಟಕ್ಕೆ ನೂರಾರು ಜನಕ್ಕೆ ಪರಿಹಾರ ಒದಗಿಸುವಲ್ಲಿ ಬಿಟ್ಟು ಬಿಡದೇ ಶ್ರಮಿಸಿದ್ದಾರೆ.
ಇನ್ನು ಸಂಘದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಎಪ್ಪತ್ಮೂರರ ಹರೆಯದ, ‘ಮುದ್ದು ಹೀರೋ’ನಂತೆ ಕಾಣುವ, ಹುಡುಗರನ್ನು ಮೀರಿಸುವ ಉತ್ಸಾಹದ ಚಿಲುಮೆ ಬಿ.ವಿ. ಮಲ್ಲಿಕಾರ್ಜುನಯ್ಯ ಅವರ ತೂಕ ಇನ್ನೊಂದು ಬಗೆಯದು! ಸಮ್ಮೇಳನದ ತುಂಬ ಅತ್ತಿಂದಿತ್ತ ಓಡಾಡುತ್ತ ಎಲ್ಲರ ಪ್ರೀತಿ, ಗೌರವ ಪಡೆಯುತ್ತ ಮೆಚ್ಚಿನವರಾಗಿದ್ದರು. ಮನೆಯ ಹಿರಿಯನಂತೆ ಕಾರ್ಯನಿರತ ಪತ್ರಕರ್ತರ ಸಂಘದ ಮೇಟಿಯಂತೆ ಎಲ್ಲರೊಂದಿಗೆ ಇದ್ದಾರೆ. ತಮ್ಮ ಅನುಭವ ಧಾರೆ ಎರೆಯುತ್ತ, ತಗಡೂರ್ ಅವರಿಗೆ ‘ನಿಜ ಸಾಥಿ’ಯಾಗಿದ್ದಾರೆ.
ಕಾರ್ಯದರ್ಶಿ ಲೋಕೇಶ್ ಅವರೂ ಸಮ್ಮೇಳನದ ಸಂತಸಕ್ಕೆ ನೆರವಾದರು. ಇವರೊಂದಿಗೆ ಉಳಿದೆಲ್ಲ ಪದಾಧಿಕಾರಿಗಳು, ಜಿಲ್ಲೆಯ ಘಟಕದ ಎಲ್ಲರೂ ಸೇರಿ ಸಮ್ಮೇಳನ ಝಗಮಗಿಸುವಂತೆ ಮಾಡಿದರು. ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ತಮ್ಮದೇ ‘ಧಾಟಿ’ಯಲ್ಲಿ ಕೆಲಸ ಮಾಡಿದರು. ಅಕ್ಕಪಕ್ಕದ ಜಿಲ್ಲೆಗಳಲ್ಲದೆ, ದೂರದೂರಿನವರೂ ಸಮ್ಮೇಳನದ ಸಂಭ್ರಮದಲ್ಲಿ ತಲ್ಲೀನರಾಗಿದ್ದು ಅದು ನಡೆದ ರೀತಿಗೆ ಸಾಕ್ಷಿ.
ಒಂದೆಡೆ ಪತ್ರಕರ್ತರೆಲ್ಲ ಸೇರುವುದೇ ಒಂದು ಆನಂದ. ‘ವೃತ್ತಿ ಒತ್ತಡ’ದ ಮಧ್ಯೆ ಇಂತಹ ಮೇಳಗಳು ತುಸು ವಿಶ್ರಾಂತಿ, ದೇಹ- ಮನಸ್ಸಿಗೆ ಮುದ ನೀಡುತ್ತವೆ. ಅದೇ ಏಕತಾನತೆಯನ್ನು ಬಿಡಿಸುತ್ತವೆ. ಮುಂದಿನ ಸಮ್ಮೇಳನ ದಾವಣಗೆರೆಯಲ್ಲಿ ನಡೆಯುತ್ತಿದ್ದು, ಬೆಣ್ಣೆ ದೋಸೆಯ ಘಮಲಿನೊಂದಿಗೆ ಮತ್ತೊಂದು ಮಜಲು ತೆರೆದುಕೊಳ್ಳಲಿದೆ.
ಬರೋ ಹೊಸ ಸರಕಾರ, ಆಡಳಿತದ ಜತೆ ಇನ್ನೊಂದು ಸಮ್ಮೇಳನ ನಾವೆಲ್ಲ ಪತ್ರಕರ್ತರ ಕಲರವದ ಜತೆ ಮೇಳೈಸಲಿದೆ. ಇನ್ನೂ ಹಲವು ಸಾಧ್ಯತೆಗಳು ತೆರೆದುಕೊಂಡು ಹೊಸಬರಿಗೂ ಅವಕಾಶ, ಗುರುತಿಸುವಿಕೆ, ಪ್ರಶಸ್ತಿಗಳನ್ನು ನೀಡುವಿಕೆಯ ಸಾರ್ಥಕ್ಯ ಮೆರೆಯಲಿ ಎಂದು ಆಶಿಸೋಣ.
ಪತ್ರಕರ್ತರು ಸೂಕ್ಷ್ಮ ಜೀವಿಗಳು, ಅವರ ಮನಸ್ಸು ಅರಳಿಸುವ ಕೆಲಸವನ್ನು ರಾಜ್ಯಾಧ್ಯಕ್ಷ ಶಿವಾನಂದ ತಗಡೂರ್ ಅವರ ತಂಡ ಹೀಗೇ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಸಣ್ಣತನಗಳನ್ನು ತೋರಿಸುವ ಕೆಲ ಜನರ ಸಂಕಟವೂ ಕೊನೆಗೊಳ್ಳಲಿ. ತಗಡೂರ್ ಅವರ ಕಾರಣಕ್ಕೇ ಮೊದಲ ಬಾರಿಗೆ ಸದಸ್ಯತ್ವ ಪಡೆದವರಲ್ಲಿ ನಾನೂ ಒಬ್ಬ.
ಬಿಜಾಪುರ ನೆಲದ ದಾಸೋಹ ಸಂಸ್ಕೃತಿಯನ್ನು ಎತ್ತಿ ಹಿಡಿದ ಮಾಜಿ ಸಚಿವ ಮಾನ್ಯ ಎಂ.ಬಿ. ಪಾಟೀಲರು ಬಂದವರಿಗೆಲ್ಲ ಪ್ರೀತಿಯಿಂದ ಉತ್ತಮ ಊಟದ ವ್ಯವಸ್ಥೆ ಮಾಡಿ ಉಪಕರಿಸಿದರು. ಹಾಗೆಯೇ ಉಳಿದ ನಾಯಕರೂ ಸಮ್ಮೇಳನ ಸಾಂಗವಾಗಿ ಸಾಗಲು ನೆರವು ನೀಡಿದರು. ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಶಿವಾನಂದ ಪಾಟೀಲರು ಸಭೆಯಲ್ಲೂ ಒಳ್ಳೆಯ ಮಾತುಗಳನ್ನಾಡಿದರು. ಎಂ.ಬಿ.ಪಾಟೀಲರೂ ತೂಕದ ಮಾತನಾಡಿ, ಪತ್ರಕರ್ತರ ಕಾಳಜಿ ಮಾಡಿದರು. ಫ.ಗು. ಹಳಕಟ್ಟಿಯವರಂತೆ ನೀವೆಲ್ಲ ‘ನಿಜ ಪತ್ರಕರ್ತರಾಗಬೇಕು’ ಎಂದು ಆಶಿಸಿದರು. ಸಿಎಂ ಬೊಮ್ಮಾಯಿವರೂ ಏನು ಕಡಿಮೆ ಇರಲಿಲ್ಲ.
ಒಟ್ಟಿನಲ್ಲಿ ಸಮ್ಮೇಳನ ತನ್ನ ಛಾಪು ಮೂಡಿಸಿತು. Tv9ನ ಸುಕನ್ಯಾ, ವಿಜಯಲಕ್ಷ್ಮಿ ಶಿಬರೂರ್ ಸೇರಿ ಅನೇಕ ಜನಪ್ರಿಯ ಪತ್ರಕರ್ತರು, ಪತ್ರಕರ್ತೆಯರು ಭೇಟಿ ನೀಡಿ ಖದರು ತಂದರು. ಹೊಸ ತಲೆ ಮಾರಿನ ಪತ್ರಕರ್ತರಿಗೂ ಅನುಕೂಲವಾಯಿತು. ಅಕ್ಕಮಹಾದೇವಿ ಮಹಿಳಾ ವಿವಿಯ ಪತ್ರಿಕೋದ್ಯಮ ವಿಭಾಗದ ಓಂಕಾರ್ ಕಾಕಡೆಯವರು ತಮ್ಮ ವಿದ್ಯಾರ್ಥಿನಿಯರ ಜತೆ ಪ್ರಚಾರ ನೀಡಿದರು. ಈ ಹುಡುಗಿಯರೂ ಮದುವೆ ಮನೆಯಲ್ಲಿ ಓಡಾಡಿದಂತೆ ಉತ್ಸಾಹದಿಂದ ಇದ್ದರು.
ಬಸವಣ್ಣನವರು ಮತ್ತು ಸೂಫಿ ಸಂತರ ನೆಲದಲ್ಲಿ ನಡೆದ ‘ಅಕ್ಷರ ಗೀಚುವವರ ಜಾತ್ರೆ’ ಅನನ್ಯವಾಗಿತ್ತು.
– ಶಿವಕುಮಾರ್ ಉಪ್ಪಿನ, ಪತ್ರಕರ್ತ-ಬಿಜಾಪುರ




