ಹಣಕಾಸು ಇಲಾಖೆ ಮುಂದೆ ಸಲ್ಲಿಸಬೇಕಾದ ಬೇಡಿಕೆಯನ್ನು ಖಾಸಗಿ ವಿವಿ ಮುಖ್ಯಸ್ಥರ ಮುಂದೆ ಬೇಡಿಕೊಂಡಿದ್ದಾರೆ

3 years ago

#demand #submitted #finance #department #begged #head #private #university

ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರನ್ನು ಅಜೀಂ ಪ್ರೇಮಂಜೀ ವಿವಿಯ ಮುಖ್ಯಸ್ಥ ಅನುರಾಗ್ ಬೆಹರ್ ಭೇಟಿಯಾಗಿದ್ದಾರೆ. ಪ್ರತಿಷ್ಠಿತ ಖಾಸಗಿ ವಿವಿಯ ಪ್ರಭಾವಶಾಲಿ ಪ್ರತಿನಿಧಿಯನ್ನು ಭೇಟಿಯಾಗಿದ್ದೇ ತಮ್ಮ ಸೌಭಾಗ್ಯ ಎಂಬಂತೆ ವರ್ತಿಸಿದ ಈ ಜನ ಪ್ರತಿನಿಧಿಗಳು ಉನ್ನತ ಶಿಕ್ಷಣದ ಅನುದಾನಕ್ಕೆ ರಾಜ್ಯ ಹಣಕಾಸು ಇಲಾಖೆ ಮುಂದೆ ಸಲ್ಲಿಸಬೇಕಾದ ಬೇಡಿಕೆಯನ್ನು ಖಾಸಗಿ ವಿವಿಯ ಮುಖ್ಯಸ್ಥರ ಮುಂದೆ ಬೇಡಿಕೊಂಡಿದ್ದಾರೆ. ಇದು ನವ ಉದಾರೀಕರಣದ ವ್ಯವಸ್ಥೆಯಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ತಲುಪಿರುವ ಅವಸ್ಥೆಗೆ ಉದಾಹರಣೆಯಷ್ಟೆ.

ಈಗಾಗಲೇ ಪ್ರತಿ ವರ್ಷ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸಮೀಕ್ಷೆಯನ್ನು ಅಜೀಂ ಪ್ರೇಮಂಜಿ ವಿವಿಯ ಮೇಲೆ, ಪ್ರಥಮ್ ಎನ್ ಜಿಒ ಮೇಲೆ ಅವಲಂಬಿತವಾಗಿರುವ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆಗೆ ನಿಮ್ಮ ಜೊತೆಗೆ ನಾವೂ ಸೇರಿಕೊಂಡಿದ್ದೇವೆ ಎಂದು ಉನ್ನತ ಶಿಕ್ಷಣ ಇಲಾಖೆಯವರು ದೌಡಾಯಿಸಿದ್ದಾರೆ.

ಮತ್ತೊಂದು ವ್ಯಂಗ್ಯವೆಂದರೆ, ಎನ್ ಇಪಿ ಬೆಂಬಲಿಗರಾದ ಇದೇ ಅನುರಾಗ್ ಬೆಹರ್ ಮೊನ್ನೆ ಬಿಜೆಪಿ ಎನ್ ಇಪಿ ಬೆಂಬಲಿಸಿ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ರಾಜ್ಯ ಸರಕಾರದ ನಿರ್ಧಾರವನ್ನು ಟೀಕಿಸಿದ್ದರು.

ಎನ್ ಇಪಿಯನ್ನು ತಿರಸ್ಕರಿಸುತ್ತೇವೆ ಎಂದು ಘೋಷಿಸುವ ರಾಜ್ಯ ಸರಕಾರ ಅದನ್ನು ಬೆಂಬಲಿಸುವ, ಅದನ್ನು ರೂಪಿಸಿದ ಅನಧಿಕೃತ ರೂವಾರಿಗೆ ಆರ್ಥಿಕ ಅನುದಾನಕ್ಕೆ ಮೊರೆ ಇಟ್ಟಿದೆ. ಇಂತಹ ವೈರುಧ್ಯಗಳ ಜಗತ್ತು??

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಸಬಲೀಕರಣ ಎನ್ನುವುದು ಕನಸು ಎಂದು ಮತ್ತೆ ಮತ್ತೆ ಸಾಬೀತಾಗಿದೆ. ಯಾರಿಗೆ ಬೇಕು ಈ ವ್ಯವಸ್ಥೆ? ಯಾರಿಗೂ ಬೇಡ.

(ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಅನುದಾನದ ಹಿನ್ನೆಲೆಯಲ್ಲಿ ಶಿಕ್ಷಣಕ್ಕೆ ಕೊರತೆಯಾಗಿದೆ, ಹೀಗಾಗಿ ಈ ನಿಲುವು ಎಂದು ಇದನ್ನು ಸಮರ್ಥಿಸಿಕೊಳ್ಳುವವರ ಗಮನಕ್ಕೆ: ಮಾನ್ಯರೇ ಗ್ಯಾರಂಟಿ ಯೋಜನೆಗಳಿಲ್ಲದಿದ್ದರೂ ಸರ್ಕಾರದ ನಿಲುವು ಬದಲಾಗುತ್ತಿರಲಿಲ್ಲ ಎನ್ನುವ ವಾಸ್ತವ ನಿಮಗೆ ಗೊತ್ತಿಲ್ಲವೇ?)

  • ಬಿ.ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply