ನಗ-ನಾಣ್ಯ ದೋಚಿ ನಿಂಬೆ ಹಣ್ಣು ಇಟ್ಟು ಯಾಮಾರಿಸಿದ  ಜ್ಯೋತಿಷಿ

3 years ago

#astrologer #snatched #gold #placed #lemon

ಬೆಂಗಳೂರು: ಅಮಾವಾಸ್ಯೆ ದಿನ ಮನೆಯವರನ್ನು ದೇವಸ್ಥಾನಕ್ಕೆ ಕಳುಹಿಸಿಕೊಟ್ಟು ಬಳಿಕ ಅದೇ ದಿನ ಮನೆಗೆ ನುಗ್ಗಿ ನಗ-ನಾಣ್ಯ ದೋಚಿ ನಿಂಬೆ ಹಣ್ಣು ಇಟ್ಟು ಯಾರೋ ಮಾಟ ಮಾಡಿಸಿದ್ದಾರೆ ಎಂದು ಯಾಮಾರಿಸುತ್ತಿದ್ದ ಖತರ್ನಾಕ್  ಜ್ಯೋತಿಷಿ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸಪೇಟೆಯ ಜ್ಯೋತಿಷಿ ಸುರೇಶ್ ಪಾಟೀಲ್ ವಿರುದ್ಧ ಕಳ್ಳತನ ನಡೆದ  ಮನೆಯ ಮಾಲಕಿ ಇಂದಿರಾ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪತಿ ಮತ್ತು ಮಕ್ಕಳೊಂದಿಗೆ ಆಳ್ಳಾಲಸಂದ್ರದಲ್ಲಿ ಮಹಿಳೆ ವಾಸವಾಗಿದ್ದು, ಜೀವನಕ್ಕಾಗಿ ಮನೆಕೆಲಸ ಮಾಡುತ್ತಿದ್ದರು. ಮಗಳಿಗೆ ಕುಣಿಗಲ್​ನ ಹೆಬ್ಬೂರು ನಿವಾಸಿ ಗೋವಿಂದ ಗೌಡ ಎಂಬವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಕೆಲ ತಿಂಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತವರು ಮನೆಗೆ ಬರುತ್ತಿದ್ದ ಮಗಳ ಕುರಿತು ಇಂದಿರಾ ಚಿಂತಾಕ್ರಾಂತರಾಗಿದ್ದರು.

ಈ ಬಗ್ಗೆ ಇಂದಿರಾ ಕೂಡ ತನ್ನ ತಾಯಿಯೊಂದಿಗೆ ದುಃಖ ತೋಡಿಕೊಂಡಿದ್ದಳು. ಸಮಸ್ಯೆಗೆ ಪರಿಹಾರವೆಂಬಂತೆ ಆಕೆಯ ತಾಯಿಯು ತನಗೆ ಜ್ಯೋತಿಷಿ ಸುರೇಶ್ ಪಾಟೀಲ್ ಪರಿಚಯವಿದ್ದು, ಅವರ ಬಳಿ ವಿಚಾರಿಸು ಎಲ್ಲವೂ ಸರಿಹೋಗಲಿದೆ ಎಂದಿದ್ದಳು.

ನಿಂಬೆ ಇಡುತ್ತಿದ್ದ ಜ್ಯೋತಿಷಿ: ಅದರಂತೆ ಕಳೆದ‌ ಡಿಸೆಂಬರ್ ತಿಂಗಳಿನಲ್ಲಿ ಮಹಿಳೆಯ ಮನೆಗೆ ಬಂದ ಜ್ಯೋತಿಷಿ ಎಲ್ಲವನ್ನೂ ಗಮನಿಸಿದ್ದಾನೆ. ನಿಮ್ಮ‌ ಮಗಳ ಜೀವನ ಸರಿಪಡಿಸುತ್ತೇನೆ. ಅಮಾವಾಸ್ಯೆ ದಿನದಂದು ಮನೆಯಲ್ಲಿ ಯಾರೂ ಇರಬಾರದು. ಎಲ್ಲರೂ ದೇವಸ್ಥಾನಕ್ಕೆ ಹೋಗಿ ಎಂದು ಸೂಚಿಸಿದ್ದ‌‌. ಇದರಂತೆ ಇಂದಿರಾ ಕುಟುಂಬಸ್ಥರು ದೇವಸ್ಥಾನಕ್ಕೆ ತೆರಳಿದ್ದರು.‌ ಇದೇ ಸರಿಯಾದ ಸಮಯ ಅಂದುಕೊಂಡ ಆರೋಪಿ ಮನೆಗೆ ಬಂದು ಬೀರುವಿನಲ್ಲಿದ್ದ 5 ಲಕ್ಷ ರೂ ಬೆಲೆಯ ಚಿನ್ನಾಭರಣ ದೋಚಿದ್ದ.‌ ಬಳಿಕ ಬಿರುವಿನಲ್ಲಿ ನಿಂಬೆ ಹಣ್ಣು ಇಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೆಲ ದಿನಗಳ ಬಳಿಕ ಕುಟುಂಬಸ್ಥರನ್ನು ಭೇಟಿಯಾಗಿ ಮನೆಗೆ ಬಂದು ಬೀರು ತೆರೆಯಿಸಿ ತಾನೇ ಇಟ್ಟಿದ್ದ ನಿಂಬೆಹಣ್ಣು ತೋರಿಸಿದ್ದಾನೆ. ನಿಮ್ಮ ಬೀಗರು ಮಾಟ, ಮಂತ್ರ ಮಾಡಿಸಿ ಚಿನ್ನದೊಡವೆ ದೋಚಿದ್ದಾರೆ‌. 65 ದಿನಗಳ ಕಾಲಾವಕಾಶ ಕೊಟ್ಟರೆ ದೋಚಿರುವ ಒಡವೆಗಳನ್ನು ಮರಳಿ ಕೊಡಿಸುವುದಾಗಿ ನಂಬಿಸಿ ಪರಾರಿಯಾಗಿದ್ದಾನೆ.‌

ಎರಡು ತಿಂಗಳ ಬಳಿಕ ಪೋನ್ ಮಾಡಿದಾಗ ಸ್ಚಿಚ್ ಆಫ್ ಮಾಡಿಕೊಂಡಿದ್ದ. ಬಳಿಕ ಈತನ ಮೇಲೆ ಅನುಮಾನಗೊಂಡು ಯಲಹಂಕ ಪೊಲೀಸರಿಗೆ ಜ್ಯೋತಿಷಿ ವಿರುದ್ಧ ದೂರು ದಾಖಲಿಸಿದ್ದಾರೆ.

Leave a Reply