ಮೈಸೂರು: ನಗರಾಭಿವೃದ್ಧಿ ಇಲಾಖೆಯ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆದಿದೆ. ಇದರಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಿಲ್ಲ. ಬೆಳಗಾವಿಯಲ್ಲಿ ತಮ್ಮ ವಿರುದ್ಧ ನಡೆದ ಗುತ್ತಿಗೆದಾರರ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ನಗರಾಭಿವೃದ್ಧಿ ಮಂತ್ರಿ ಬೈರತಿ ಸುರೇಶ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಗುತ್ತಿಗೆದಾರರು ತಮ್ಮ ವಿರುದ್ಧ ಯಾವ ಕಾರಣಕ್ಕೆ ಪ್ರತಿಭಟನೆ ಮಾಡಿದರೋ ಗೊತ್ತಿಲ್ಲ ಎಂದರು.
ಕಾಮಗಾರಿಗಳನ್ನು ಇ– ಟೆಂಡರ್ ಮೂಲಕ ನೀಡಲಾಗುತ್ತದೆ. ಇದು ಪ್ರಕ್ರಿಯೆ. ಅದರಲ್ಲಿ ನಮ್ಮವರನ್ನು ಹೇಗೆ ಸೇರಿಸಲು ಸಾಧ್ಯ? ಅಷ್ಟಕ್ಕೂ ನಾವಿನ್ನೂ ಟೆಂಡರ್ ಪ್ರಕ್ರಿಯೆಯನ್ನೇ ನಡೆಸಿಲ್ಲ. ಸುಮ್ಮನೆ ಆರೋಪಗಳನ್ನು ಮಾಡಲಾಗುತ್ತಿದೆ. ಭಾಗವಹಿಸಿದವರಲ್ಲಿ ಹೆಚ್ಚು ಕೋಟ್ ಮಾಡಿದವರಿಗೆ ಟೆಂಡರ್ ಸಿಗುತ್ತದೆ. ಶಕ್ತಿವಂತ ಪಡೆದುಕೊಳ್ಳುತ್ತಾನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಎಲ್ಲಿಯೇ ಸರ್ಕಾರ ರಚಿಸಿದರೂ ಭ್ರಷ್ಟಾಚಾರದಲ್ಲಿ ತೊಡಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಹೇಳಿಕೆಗೆ ಉತ್ತರ ಕೊಡುವಷ್ಟು ದೊಡ್ಡವನಲ್ಲ. ಆದರೆ, ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹರೇ ಬಿಜೆಪಿಯವರು. ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ್ದೇ ಆ ಪಕ್ಷದವರು. ಅವರು ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ ಎಂದು ಇಡೀ ರಾಜ್ಯದ ಜನರೇ ಹೇಳುತ್ತಿದ್ದಾರೆ ಎಂದರು.




