ಬರಗಾಲ ಸಮಯದಲ್ಲಿ ಪರಿಹಾರ ಕೊಡಬೇಕಾದದ್ದು ಕೇಂದ್ರ ಸರ್ಕಾರದ ಕರ್ತವ್ಯ

2 years ago

#Ksnagaraj #NarendraModi #duty #centralgovernment #provide #relief #drought

ಕರ್ನಾಟಕ ರಾಜ್ಯದಲ್ಲಿ ಭೀಕರವಾದ ಬರಗಾಲ ಬಂದು ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ಬರಗಾಲದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಪತ್ತು ನಿರ್ವಹಣಾ ನಿಧಿಯಿಂದ ರಾಜ್ಯಗಳಿಗೆ ಸಹಾಯವನ್ನು ಮಾಡಬೇಕಾದದ್ದು ಅದರ ಕರ್ತವ್ಯ.

ಬರಗಾಲದ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ತಂಡ ಪರಿಶೀಲಿಸಿಕೊಂಡು ಹೋಗಿ ತಿಂಗಳುಗಳು ಸಮೀಪಿಸುತ್ತಿದ್ದರೂ ಕೇಂದ್ರ ಸರ್ಕಾರ ನಯಾ ಪೈಸೆಯನ್ನು ಬಿಡುಗಡೆ ಮಾಡಿಲ್ಲ.

ಈ ನಡುವೆ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲು ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲು ಸಮಯವನ್ನು ಕೊಡಬೇಕೆಂದು ಕೇಳಿಕೊಂಡಿದ್ದರೂ ಪ್ರಧಾನಮಂತ್ರಿಗಳು ಮುಖ್ಯಮಂತ್ರಿಗಳ ಭೇಟಿಗೆ ಅನುಮತಿಯನ್ನು ನೀಡಿರುವುದಿಲ್ಲ. ಈ ನಡುವೆ ಬಿ.ಜೆ.ಪಿ.ಯ ನಾಯಕರುಗಳು ಕೇಂದ್ರ ಸರ್ಕಾರದ ಮುಂದೆ ರಾಜ್ಯ ಸರ್ಕಾರ ತಲೆಬಾಗಿಸಿ ನಿಂತು ಪರಿಹಾರವನ್ನು ಬೇಡಬೇಕು ಎನ್ನುವ ರೀತಿಯಲ್ಲಿ ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.

ಇವೊತ್ತಿಗಾಗಲೇ ಬಿ.ಜೆ.ಪಿ.ಯ ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಕೇಂದ್ರದ ಮೇಲೆ ಒತ್ತಡವನ್ನು ತರಬೇಕಿತ್ತು. ಇದರ ಬದಲಿಗೆ ರಾಜಕಾರಣವನ್ನು ಮಾತನಾಡುತ್ತಾ ಕಾಲಕಳೆಯುತ್ತಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿಗಳು ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ಭೇಟಿಗೆ ಸಮಯಾವಕಾಶವನ್ನು ಕೇಳಿದಾಗ ಸ್ಪಂದಿಸಬೇಕಾದದ್ದು ಆ ಹುದ್ದೆಯ ಘನತೆಯಾಗಿರುತ್ತದೆ.

ಅದೇ ರೀತಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯವಾಗಿರುವ ಕರ್ನಾಟಕಕ್ಕೆ ಬರಗಾಲದ ಸಂದರ್ಭದಲ್ಲಿ ಸಹಾಯ ನೀಡಬೇಕಾದದ್ದು ಕೇಂದ್ರ ಸರ್ಕಾರದ ಕರ್ತವ್ಯವಾಗಿರುತ್ತದೆ.

ಕೇಂದ್ರ ಸರ್ಕಾರ ನೀಡುವ ಪರಿಹಾರದ ಹಣ ಬಿ.ಜೆ.ಪಿ. ಪಕ್ಷದ ಖಜಾನೆಗೆ ಸೇರಿದ್ದಲ್ಲ. ಅದು ದೇಶದ ಜನತೆ ನೀಡುವ ಅದರಲ್ಲೂ ರಾಜ್ಯದ ಜನತೆ ನೀಡುವ ತೆರಿಗೆಯ ಪಾಲಾಗಿರುತ್ತದೆ.

ಕರ್ನಾಟಕ ರಾಜ್ಯದಲ್ಲಿ ಏಕೀಕರಣವಾಗಿ ಅರವತ್ತೆಂಟು ವರ್ಷ ಮತ್ತು ಕರ್ನಾಟಕದ ಹೆಸರು ನಾಮಕರಣವಾಗಿ ಐವತ್ತು ವರ್ಷ ಸಂದಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಅನುಮೋದನೆಗಾಗಿ ಕಳುಹಿಸಿಕೊಟ್ಟಿರುವ ಕನ್ನಡ ಧ್ವಜದ ಕಡತವನ್ನು ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯದ ಮಸೂದೆಗಳಿಗೆ ಅಂಗೀಕಾರ ಹಾಕಿ ಕಳುಹಿಸಿಕೊಟ್ಟು ಕನ್ನಡಿಗರಿಗೆ ಸಂತೋಷವನ್ನುಂಟು ಮಾಡಿ ನಮ್ಮ ಲೋಕಸಭಾ ಸದಸ್ಯರು ಈ ಎರಡು ಮಸೂದೆಗಳ ವಿಚಾರದಲ್ಲಿ ಮಾತನಾಡದೇ ಇರುವುದು ಅವರಿಗೆ ಕನ್ನಡ ಬಗ್ಗೆ ಇರುವ ಪ್ರೇಮದ ಬಗ್ಗೆ ಅನುಮಾನ ಬರುತ್ತದೆ.

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply