ಕೋಮುಬಣ್ಣ ಬಳಿಯಲು ತೇಜಸ್ವಿ ನೀಚ ಪ್ರಯತ್ನ: ಯತೀಂದ್ರ ಸಿದ್ದರಾಮಯ್ಯ

5 years ago

ಬೆಂಗಳೂರು: ಬೆಂಗಳೂರು ದಕ್ಷಿಣ ವಲಯದ ವಾರ್ ರೂಂನಲ್ಲಿ 120 ಜನ ಕೆಲಸಗಾರರು, ಅದರಲ್ಲಿದ್ದ 17 ಜನ ಮುಸ್ಲಿಂ ಕೆಲಸಗಾರರ ಹೆಸರು ಮಾತ್ರ ಹೇಳಿ ಕೋಮು ಬಣ್ಣ ಬಳಿಯಲು ತೇಜಸ್ವಿ ಸೂರ್ಯರದು ನೀಚ ಪ್ರಯತ್ನ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ನಿನ್ನೆ ಸುದ್ದಿ ಗೋಷ್ಠಿ ನಡೆಸಿದ್ದ ತೇಜಸ್ವಿ ಸೂರ್ಯ ಮುಸ್ಲಿಂ ಅಧಿಕಾರಿಗಳ ವಿರುದ್ಧ ಆರೋಪಿಸಿದ್ದರು, ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಯತೀಂದ್ರ, ಹಾಸಿಗೆ ಬ್ಲಾಕ್ ಹಗರಣದಲ್ಲಿ ಬಂಧನವಾಗಿರುವವರು ಹಿಂದೂಗಳು. ಬಿಬಿಎಂಪಿಯ ಅಧಿಕಾರ ಚುಕ್ಕಾಣಿ ಇರುವುದು ಬಿಜೆಪಿಗರ ಕೈಯಲ್ಲಿ, ಬೆಂಗಳೂರು ಉಸ್ತುವಾರಿ ಮಂತ್ರಿಗಳು ಸ್ವತಃ ಮುಖ್ಯಮಂತ್ರಿಗಳು, ಬೆಂಗಳೂರು ದಕ್ಷಿಣ ವಲಯದ ಕೋವಿಡ್ ಉಸ್ತುವಾರಿಗಳು ಆರ್. ಅಶೋಕ್ ಅವರು ಎಂದಿದ್ದಾರೆ.

ಹೀಗೆ ತಮ್ಮದೇ ಸರ್ಕಾರದಡಿಯಲ್ಲಿ ನಡೆದಿರುವ ಹಗರಣಕ್ಕೆ ಒಂದು ಸಮುದಾಯದವರನ್ನು ದೂಷಿಸಿ ತಮ್ಮ ಆಡಳಿತ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಹುನ್ನಾರ ಎಂದು ಅವರು ತಿರುಗೇಟು ನೀಡಿದ್ದಾರೆ.

ಪ್ರತಿ ಬಾರಿ ಕೋಮು ಭಾವನೆಗಳನ್ನು ಕೆರಳಿಸಿ ದೇಶದ ನಿಜ ಸಮಸ್ಯೆಗಳನ್ನು ಮರೆಮಾಚಿ ತಮ್ಮ ಅಧಿಕಾರದಾಹ ತೀರಿಸಿಕೊಳ್ಳುವುದರಲ್ಲಿ ನಿಸ್ಸೀಮರು ಈ ಬಿಜೆಪಿಗರು. ರಾಜ್ಯದಲ್ಲಿ ಸರ್ಕಾರದ  ಅಸಮರ್ಥ ಆಡಳಿತದಿಂದ ಜನ ಪ್ರಾಣ ಕಳೆದುಕೊಳ್ಳುವ ಸಮಯದಲ್ಲೂ ಕೋಮು ರಾಜಕೀಯ ಮಾಡುವ ಹೀನ ಚಾಳಿ ಬಿಡದ ಬಿಜೆಪಿಗೆ ಧಿಕ್ಕಾರ ಎಂದಿದ್ದಾರೆ.

Leave a Reply