ಸುಪ್ರೀಂ ಕೋರ್ಟೇ ದಂಡ ಹಾಕುತ್ತೆ. ನಾವು ದಂಡ ಹಾಕಬಾರದೇ, ತಪ್ಪೇ? ಎಂದು ಪ್ರಶ್ನಿಸಿದ ಚಿತ್ತಯ್ಯನ ಮುಖಕ್ಕೆ ಏನು ಹೇಳುವುದು ತಕ್ಷಣಕ್ಕೆ. ನಮಗೆ ಮುನ್ಸೀಫ್ ಕೋರ್ಟ ಗೊತ್ತು. ಆತ ಸುಪ್ರೀಂ ಕೋರ್ಟ್ ವರೆಗೆ ಮಾತು ಬೆಳೆಸಿದ. ಠಾಣಾಧಿಕಾರಿಯ ಸಕ್ಷಮದಲ್ಲಿ ಬಲ್ಲಪ್ಪನಹಟ್ಟಿ ಅಂಗಳದಲ್ಲಿ ಆಗತಾನೆ ಕೆಲವು ಗಂಟೆಗಳ ಹಿಂದೆ ಮುಟ್ಟಾದ ಮಹಿಳೆಯರನ್ನು ಹಟ್ಟಿಯ ಹೊರಗೆ ಕಳುಹಿಸಿ ಲಿಂಗತಾರತಮ್ಯ ಮಾಡೆವು. ಸಂವಿಧಾನ ಗೌರವಿಸುತ್ತೇವೆ ಎಂದು ಹಟ್ಟಿಯವರಿಗೆ ಸ್ವತಃ ಪ್ರತಿಜ್ಞಾ ವಿಧಿ ಹೇಳಿಕೊಟ್ಟ ನನಗೆ ಚಿತ್ತಯ್ಯನ ಮಾತುಗಳು ತಂಬಾ ಆತಂಕಕಾರಿಯಾಗಿ ಕಂಡವು. ಆತನ ಮಾತು ಕೇಳಿ ಗಪ್ಪಾದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಹಟ್ಟಿ ಯಜಮಾನಿಕೆ ದಂಡ, ದಡೂತಿ, ನ್ಯಾಯ, ಪಂಚಾಯ್ತಿ ಮಾಡಲಿಕ್ಕೇ ಇರುವುದೆಂದು ಆತ ಗಂಟೆಗಟ್ಟಲೆ ವಾದಿಸತೊಡಗಿದ. ಕೋರ್ಟಲ್ಲಿ, ವಾದ ಪ್ರತಿವಾದ ಆಲಿಸುವ ಸರ್ವೋಚ್ಛ ವ್ಯವಸ್ಥೆ ಇರುತ್ತದೆ. ನೀನೇನು? ದಂಡ, ದಡೂತಿ ವಿಧಿಸಲು. ತಡವೊತ್ತಿನ ತನಕವೂ ವಾಗ್ವಾದಗಳು ನಡೆಯುತ್ತಲೇ ಹೋದವು.
ಅಲೆಮಾರಿ/ಅರೆಅಲೆಮಾರಿ ಕೆಲವು ಸಮುದಾಯಗಳು ಶತಮಾನಗಳಷ್ಟು ಹಳತಾದ ಅಸಂವಿಧಾನಿಕ ನಂಬಿಕೆಗಳು ಆತನ ಎದೆ ಒಕ್ಕು, ಆತ ಹಾಗೆ ಮಾತನಾಡುತ್ತಿರುವ ಎನ್ನಿಸಿತಾದರೂ; ಆತನೇನು ಕಾನೂನು, ಠಾಣೆಗಳ ಪರಿಚಯವಿರದವನೇನಲ್ಲ ಎಂತಲೂ ಕ್ರಮೇಣ ನನಗೆ ಖಾತರಿ ಆಯಿತು. ಕಾನೂನು, ಠಾಣೆಗಳ ಬಗೆಗಿನ ಅವನ ತಾತ್ಸಾರ ಅರ್ಥವಾಗತೊಡಗಿತು. ಮೀರಿತ್ಕ ಹತ್ತು ಆಡು ಹೋಗಲಿ. ಯಜಮಾನಿಕೆ ಗತ್ತು ಉಳಿಲಿ ಎನ್ನುವ ಹಠ ಇರಬಹುದು ಎಂದುಕೊಂಡೆ.
ಮೂಢನಂಬಿಕೆಗಳನ್ನು ಸಮರ್ಥಿಸಿಕೊಳ್ಳವ ಅವನ ಮಾತುಗಳು ಅತ್ಯಂತ ಆಕ್ರಮಣಕಾರಿಯಾಗಿದ್ದವು. ಅವನು ನನ್ನತ್ತ ತೆಗೆದು ಒಗೆಯುತಿದ್ದ ಮಾತುಗಳು ವ್ಯಘ್ರವಾಗಿದ್ದವು. ನಮಗೆ ಮಹಿಳೆಯರು, ಮಕ್ಕಳ ಜೀವದ ಚಿಂತೆ. ಹಟ್ಟಿಗಳ ಮನೆಮಾರುಗಳಿಗೆ ಮಹಿಳೆಯರು, ಮಕ್ಕಳೇ ಅಸ್ಪೃಶ್ಯರು.
ಮಳೆ ಚಳಿ ಬಿಸಿಲಿನ ಪರಿತಾಪಗಳಿಂದ ಬದುಕಿ ಉಳಿದರೆ ಒಳಗೆ ಬನ್ನಿ, ಇಲ್ಲವಾದರೆ ಸತ್ತೇ ಹೋಗಿ ಎಂದು ಬಾಣಂತಿ ತಾಯಿ, ಮಗುವನ್ನು ತಿಂಗಳುಗಟ್ಟಲೆ ಹೊರಹಾಕುವ ಅಪದ್ಧವಾದ ನಂಬಿಕೆಗಳು. ಯಜಮಾನಿಕೆಯ ಒತ್ತಾಸೆಗಳೇ ದೌಲತ್ತು, ಧಿಮಾಕುಗಳಿಂದ ಕೂಡಿರುತ್ತವೆ. ಹಟ್ಟಿ ಜನರ ಶೋಷಣೆಗೆ ನಿಂತಿರುವ ಇಂತಹವರಿಗೆ ಕಾನೂನು ಖಟ್ಲೆಗಳು ಎಂದರೆ ತಾತ್ಸಾರ. ಕೋರ್ಟಿನವರೆವಿಗೂ ಮಾತುಕತೆ ಮುಂದುವರಿಸಿದ್ದ ಚಿತ್ತಯ್ಯನ ನಂಬಿಕೆಗಳು ಜೀವ ವಿರೋಧಿ ತಿಳುವಳಿಕೆಯ ಮೊಂಡುತನಗಳು.
ಮೇಕೆ ಮೇಯಿಸಿಕೊಂಡು ಬಂದು ಗೂಡಿಗೆ ಕೂಡಿ ಇರಾಮಾಗಿದ್ದ. ಕಂಡು ಮಾತನಾಡಲು ಹೋದಾಗ ಅವನ ಮಾತುಗಳು ಬಿರುವಾಗಿದ್ದವು. ಹೆಣ್ಣು- ಗಂಡಿನ ನಡುವಿನ ಸಮಾನತೆಗೇ ಸವಾಲುಗಳೆಂಬಂತಿದ್ದವು. ಅಷ್ಟೊತ್ತಿಗಾಗಲೇ ಹುಳಿಯಾರು ಠಾಣಾಧಿಕಾರಿ ಬಸವರಾಜು ಅವರು, ಪೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರೇನೋ? ಜನ ಪಿಸುಗುಟ್ಟುತಿದ್ದರು.
ಆಗಲೇ, ಹೊತ್ತು ಮುಳುಗಿತ್ತು. ಅವನ ಮನೆ ಹತ್ತಿರ ನಾವು ಹೋಗಿದ್ದಾಗ. ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಚಿಕ್ಕಣ್ಣನ ಜೊತೆ ಮುಟ್ಟಾದ ಮಹಿಳೆಯರು ಹಟ್ಟಿ ಒಳಗೇ ಇರುವ ಕುರಿತು ವಾಗ್ವಾದಕ್ಕೆ ಮುಂದಾದ. ಅವನ ಕಂಠದಿಂದ ಎಗರುತಿದ್ದ ಧ್ವನಿ ಅವೇಳೆಯಯೊಳಗೆ ಭಯ ಹುಟ್ಟಿಸಿತ್ತು. ನೀನು ಬೆಂಗಳೂರಿನಲ್ಲಿ ಇದ್ದಾಗ, ಮುಟ್ಟಾದ ಹೆಂಡತಿಯ ಜೊತೆಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದೆ. ಅಲ್ಲಿಂದ ಬಂದ ಮೇಲೆ ಏಕೆ ಹೆಂಡತಿಯನ್ನು ಮನೆಯಿಂದ ಹೊರಗಿಟ್ಟೆ? ದಸೂಡಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಚಿಕ್ಕಣ್ಣನ ಜೊತೆಯಲ್ಲಿ ಮಾತಿನ ಚಕಮುಕಿಗೆ ಮುಂದಾದ. ಮಾತುಕತೆಗಳು ದಿಕ್ಕಾಪಾಲಾಗ ತೊಡಗಿದವು. ಚಿತ್ತಯ್ಯನ ಪ್ರಶ್ನೆಗಳು ನಮ್ಮಕಡೆ ತಿರುಗಿದವು.
ದೇವರು, ಧರ್ಮ, ಜಾತಿ, ಸೂತಕದ ಹೆಸರಿನಲ್ಲಿ ನೀವು ದಂಡ ದಡೂತಿ ವಿಧಿಸಿ ಹಟ್ಟಿಯ ಜನರನ್ನು ಶೋಷಿಸವುದನ್ನು ಮುಂದುವರಿಸಬಾರದು. ಜೀವನದ ಈ ಇಳಿ ವಯಸ್ಸಿನಲ್ಲಿ ಮೇಕೆಗಳನ್ನು ಅಡವಿಗೆ ಬಿಟ್ಟು, ಜೈಲು ಪಾಲಾಗಬೇಕಾಗುತ್ತದೆ. ಇಲ್ಲಿ, ಸರ್ಕಾರ, ನ್ಯಾಯಾಲಯಗಳು ನಿಮ್ಮ ಈ ಮೂಢನಂಬಿಕೆಗಳನ್ನು ಗೌರವಿಸಲಾರವು. ಹಟ್ಟಿಗಳಲ್ಲಿ ಸೂತಕ ಆದವರನ್ನು ಹೊರಗೆ ಕಳುಹಿಸುವುದು ಯಜಮಾನಿಕೆ ಉಳಿಸಿಕೊಳ್ಳುವ ನಿಮ್ಮಗಳ ಸ್ವಾರ್ಥ. ಯಜಮಾನಿಕೆ ಗೌವಾರ್ಥ ಇದನ್ನು ಮುಂದುವರಿಸ ಬಾರದು. ಸ್ವಯಂಘೋಷಿತ ಯಜಮಾನಿಕೆಯ ಗತ್ತನ್ನು ಪ್ರಶ್ನಿಸಲು ಮುಂದಾದಾಗ, ಅವನ ಮುಖ ಕಲ್ಲು ತಾಕಿದ ಮಾವಿನಕಾಯಿಯಂತಾಗತೊಡಗಿತು.
ಮೆಟ್ಟಲ್ಲಿ ಹೊಡೆದಾಡುವರು. ಮೆಟ್ಟು ಹಿಡಿದುದವರು ದೇವರು ಹೊರುವಾಗಿಲ್ಲ. ದೇವರು ಹೊರಲು ಜನ ಕಮ್ಮಿಯಾಗುತ್ತಾರೆ. ಮೆಟ್ಟು ಕೈಲಿಡಿದದ್ದಕ್ಕೆ ಕುರಿ ಬತ್ತೇವು ಕೇಳುತ್ತೇವೆ. ನಾವೇನು ಮನೆಮಕ್ಳು, ಮನೆತನ ಸಾಕ್ತೇವಾ? ಭಗವಂತನ ಮಖ ತೊಳಿತೀವಿ. ದಂಡ ಆಕ್ತೀವಿ ಎಂದ.
ಅಲ್ಲ ಕಣಯ್ಯಾ ನಿನಗೂ ಇಬ್ಬರು ಪತ್ನಿಯರು. ನಿಮ್ಮ ಹಟ್ಟಿ ದೇವರು ಚಿತ್ತಯ್ಯನಿಗೂ ಇಬ್ಬರು ಪತ್ನಿಯರು. ನೀನು ಗೊಲ್ಲರೊಳಿಗೇ ಇಬ್ಬರನ್ನು ಮದುವಾದೆ. ಚಿತ್ತಯ್ಯ ಹೊರ ಸಾಲಿನಲ್ಲಿ ಇಬ್ಬರನ್ನು ಮದುವೆಯಾದ. ನೀವು ಆರಾಧಿಸುವ ದೈವವೇ ಹೊರಸಾಲು ಮಾಡಿದ. ದೇವರು ಚಿತ್ತಯ್ಯಗೇನು ದಂಡ ಎಂದೆ. ಪ್ರಾರಂಭದಲ್ಲಿ ಕೋರ್ಟು, ದಂಡ, ದಡೂತಿ ಬಗ್ಗೆ ಮಾತನಾಡುತಿದ್ದವನು ತಣ್ಣಗಾದ.
ಮಾತುಗಳು ಮತ್ತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕಡೆ ವಾಲಿದವು. ಅಡವಿ ಮೇಲೆ ಮ್ಯಾಕೆ ಕಾಯ್ಯೊ ಹೊತ್ತು. ನನಗೆ ಆ ಸಬ್ ಇನ್ಸ್ ಪೆಕ್ಟರ್ ಎಷ್ಟು ಸಲ ಪೋನ್ ಮಾಡೋದು? ಮತ್ತೆ ಮಾತುಗಳು ಮುಂದುವರಿಸಿದ. ಮುಟ್ಟಾದ ಹೆಂಡತಿಯನ್ನು ಹಟ್ಟಿ ಹೊರಗಟ್ಟಿ, ನೀನು ಮ್ಯಾಕೆ ಹೊಡ್ಕಂಡು ಕಾಯಾಕೋದರೆ, ಹಟ್ಟಿಗೆ ಬಂದ ಪೊಲೀಸರು, ನೀನು ನಿನ್ನ ಹೆಂಡತಿಯನ್ನು ಮೊದಲು ಮನೆ ಒಳಗೆ ಬಿಟ್ಕಳಲಿ ಎಂದು ಪೋನ್ ಮಾಡಿದ್ದಾರೆ.
ನೀನು ಮಾಡಬೇಕಾದ ಕೆಲ್ಸ. ಪಿ.ಎಸ್.ಐ ಬಂದು ಮಗು ಬಾಣಂತಿ ಮನೆಗೆ ಸೇರಿಸಿದ್ದಾರೆ. ನೀನೂ ನಂನ್ನಂತೆಯೇ ರಕ್ಷಣಾ ಅಧಿಕಾರಿಯಾಗು ಎಂದು ಆಶಿಸಿ ಹೋಗಿದ್ದಾರೆ. ಅದೇ ಕೆಲ್ಸ ನಿನ್ನಿಂದ ಆಗಿದ್ದರೆ ಏನಾಗುತಿತ್ತು ಚಿತ್ತಯ್ಯ? ಎಂದು ನಾನೂ ಆತನ ಮೊಂಡು ಪ್ರಶ್ನೆಗಳಿಗೆ ಒಂದೀಸು ಪ್ರಶ್ನೆಗಳನ್ನು ಎಸೆದಾಗ, ಏನಾಗುತಿತ್ತು? ಎಂದ.
ಆ ಮಗುವಿಗೆ ನೀನು ನನ್ನಂಗೆ ಆಡು ಕಾಯಿ ಎಂದು ಹೇಳುತಿದ್ದಾ? ಎಂದೆ, ಅವಕ್ಕಾದ. ಮುಟ್ಟಾದ ಹೆಂಡತಿಯನ್ನೂ ಆತನ ಮನೆಗೆ ಕೂಡೋ ಹೊತ್ತಿಗೆ ಮಾತುಗಳ ರಥೋತ್ಸವ ನಡೆದವು. ಮಾತುಗಳು ಸಾಕು ಎನ್ನಿಸಿತು. ಮುಟ್ಟಾದ ಅವನಾಕೆಯನ್ನು ಒಳಗೆ ಕಳುಹಿಸಿ ಅಲ್ಲಿಂದ ಹೊರಡಲು ಅನುವಾದೆವು. ಚಿತ್ತಯ್ಯ ತಡೆದ.
ಒಳ್ಳೆ ಕೆಲ್ಸ ಬಂದಿದ್ದೀರಾ. ತಡಿರಿ ಹೋಗ್ಬೇಡಿ. ಗೂಡೊಗ್ಳ ಓತ್ಮರಿ ಕುಯ್ಯಣ. ಉಂಡೋಗುವಿರಂತೆ ಎಂದ. ಮಾತಿಗೆ ಎಂದ, ಗೊತ್ತಾಗಲ್ವೆ? ಅಷ್ಟೊತ್ತಿಗಾಗಲೇ, ಇನ್ನೆಲ್ಲೋ, ಬಾಡು ಬೇಯುವ ವಾಸನೆ. ಮೂಗಿಗೆ ಯಡತಾಕುತಿತ್ತು. ಆಗಲೆ, ರಾತ್ರಿ ತಡ ಹೊತ್ತು. ಬ್ಯಾಟಗಾರರ ಮನೇಲಿ ಬಾಡಿಗೇನು ಬಂಗ? ಹಟ್ಟೀಲಿ ಬಾಡು ಬೇಯೋದು ಸಾಮಾನ್ಯ.
ಬ್ಯಾಡು ಇನ್ನೊಂದು ಸಲ ಉಂಡರಾತು. ರೊಂಪು, ಅಕನಾತಿ ಮಾಡಿಕೊಂಡು ಹೆಂಗ್ಸಿರಿಗೆ ತೊಂದರೆ ಆಗ್ಬಾರದು. ಮುಟ್ಟಾದಾಗ ಹಟ್ಟಿ ಹೊರಗೆ ಹಾಕಬಾರದು. ಕೊನೆ ಸೊಲ್ಲುಗಳಾದವು ಆತನೊಂದಿಗೆ. ಮಾಜಿ ಮೆಂಬರ್ ಬೆಂಗಳೂರು ಚಿಕ್ಕಣ್ಣನ ಮನೆ ಸೇರುವೊಷ್ಟರಲ್ಲಿ ನೆತ್ತಿ ನೆನಿಯೋ ಹಾಗೆ ಮಳೆ. ಹೆಜ್ಜೆಗೆ ನೀರು ಇಳಿಯೋ ತನಕ. ತಿರುಗಾಡೊ ಹಾದಿಯೊಳಗೆ ನೀರು. ಒಲ್ಡೊಯ್ದಂತೆ ಮಳೆ ನೀರು ಇಟ್ಟಾಡಿತು. ಅಬ್ಬರಿಸಿ ರೋಹಿಣಿ ಮಳೆ ಸುರಿಯಿತು. ಫಳಾರಿಸುವ ಮಿಂಚು. ಸಿಡಿಲು,ಮಳೆ. ಹಿರಿಕಟ್ಟೆ ಕೂನಿಕೆರೆ ರಾಮಣ್ಣನ ಹಿಂದೆ ನಾವೆಲ್ಲಾ ಚಿತ್ತಯ್ಯನ ಮನೆ ಆವರಣದಿಂದ ಹೊರಟೆವು. ಮಳೆ ನಿಂತು ದೂರದಲ್ಲಿ ಗುಡುಗಿ ಮಳೆಯಾಗುತ್ತಿರುವುದು ತಾಯಿ, ಮಗಳ ಪಿಸುಮಾತುಗಳ ಹಾಗೆ ಕೇಳುತ್ತಿತ್ತು. ಬಾಲವಿಕಾಸ ಸಮಿತಿ ಸದಸ್ಯ ಕಾರ್ಯದರ್ಶಿ ಕವಿತಾರ ಮನೆಯಲ್ಲಿ ಅಂದು ರಾತ್ರಿ ಉಳಿದೆವು. ಬೆಂಗ್ಳೂರು ಚಿಕ್ಕಣ್ಣನ ಮನೇಲಿ ಹೊಟ್ಟೆಗೆ ತಾಡು ಮಾಡಿಕೊಂಡೆವು.
“ಮಳೆಯಲ್ಲಿ ನೆನೆಯುತ್ತವೆ ಎಂದು ಮೆಟ್ಟನ್ನ ಒಳಗೆ ಬಿಟ್ಟುಕೊಳ್ಳುವರು. ಮುಟ್ಟಾದ ಮಹಿಳೆಯನ್ನು ಹಟ್ಟಿ ಹೊರಗಾಕುವರು”. ನಂಬಿಕೆಗಳಿಗೆ ಹಟ್ಟಿ ಮಹಿಳೆಯರ ಧಿಕ್ಕಾರವಿದೆ. ಹಟ್ಟಿಗಳ ಯಜಮಾನಿಕೆಯ ದರ್ಪ. ಸಾಮಾನ್ಯರು ಪ್ರಶ್ನಿಸಲಾರದಂತಾಗಿದೆ. ದಂಡವಸೂಲಿಯ ದಬ್ಬಾಳಿಕೆ. ಮೂಢನಂಬಿಕೆಗಳು, ಹಟ್ಟಿ ಮಹಿಳೆಯರಿಗೆ ಬದುಕಿನ ಬಗ್ಗೆಯೇ ಅಪನಂಬಿಕೆ ಹುಟ್ಟಿಸಿವೆ. ಅವರ ಶಿಕ್ಷಣ, ಆರೋಗ್ಯ ಕಸಿದುಕೊಂಡಿವೆ. ಬದುಕುವ ಅವರ ಸ್ವಾತಂತ್ರ್ಯದ ಹಕ್ಕುಗಳಿಗೆ ಯಜಮಾನಿಕೆಯ ಗೆದ್ದಲು ಹಿಡಿದಿದೆ. ಹಟ್ಟಿ ಹೆಂಗಸರು ಮತ್ತು ಮಕ್ಕಳ ಜೀವನ ತುಕ್ಕು ಹಿಡಿದು ಸಾವು ಬದುಕಿನ ನಡುವೆ ಸಾವೇರಿ ರೋಗವಾಗಿದೆ. ಬಲ್ಲಪ್ಪನಹಟ್ಟಿ ಸುತ್ತಲ ಇತರೆ ಹಟ್ಟಿಗಳಲ್ಲೂ ಇದೇ ಗತಿ.
ಮಹಿಳೆಯರು, ಮಕ್ಕಳು ಹಟ್ಟಿ ಯಜಮಾನಿಕೆಯ ವಿರುದ್ದ ಧ್ವನಿ ಎತ್ತರಿಸಿ ಮಾತನಾಡಲು ಬೆಂಬಲಬೇಕು. ಹೋರಾಟಗಾರರು, ರಕ್ಷಣಾಧಿಕಾರಿಗಳು, ದಂಡಾಧಿಕಾರಿಗಳ ಪ್ರಯತ್ನಗಳ ಅಗತ್ಯವಿದೆ. ಇಲ್ಲವಾದರೆ, ಹಟ್ಟಿಗಳಲ್ಲಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಎಂಬುದು ಹಳ್ಳ ಹಿಡಿಯುತ್ತದೆ.
- ಉಜ್ಜಜ್ಜಿ ರಾಜಣ್ಣ , ಕವಿಗಳು




