ವಿಧಾನಪರಿಷತ್ ನಲ್ಲಿ ಬಿಸಿ ಚರ್ಚೆಗೆ ಕಾರಣವಾದ ಕಬ್ಬು

3 years ago

ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆ ವಿಧಾನಪರಿಷತ್ ನಲ್ಲಿ  ಪ್ರತಿಧ್ವನಿಸಿ, ಸಚಿವ ಮುರುಗೇಶ್ ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು ಧರಣಿ ನಡೆಸುವ ಮೂಲಕ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರಾದ ಪ್ರಕಾಶ್ ರಾಥೋಡ್, ಪಿ.ಆರ್. ರಮೇಶ್ ಸದನದಲ್ಲಿ ಕಬ್ಬಿನ ತೂಕದ ವಂಚನೆಯ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಅವರು ಕಬ್ಬು ಕಾರ್ಖಾನೆಯ ಮಾಲೀಕರು ಬಡವರ ರಕ್ತ ಹೀರುತ್ತಿದ್ದಾರೆ. ಅದರಲ್ಲೂ ತೂಕದ ವಿಚಾರದಲ್ಲಿ ಟನ್ ಗಟ್ಟಲೆ ಮೋಸ ಮಾಡುತ್ತಿದ್ದಾರೆ ಎಂದು ಸದನದ ಗಮನಕ್ಕೆ ತಂದರು.

ಈ ವೇಳೆ ಎದ್ದು ನಿಂತು ವಿವರಣೆ ನೀಡಲು ಮುಂದಾದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರಿಗೆ ವಿಷಯ ಪ್ರಸ್ತಾಪಿಸಲು ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ನಿರಾಕರಿಸಿದರು. ಆದರೆ, ನಿರಾಣಿ ಅವರು ಮಾತನಾಡಲು ಮುಂದಾಗಿದ್ದರಿಂದ ಸಭಾಪತಿಗಳು ಆಕ್ರೋಶಗೊಂಡು ಸುಮ್ಮನೆ ಕುಳಿತುಕೊಳ್ಳುವಂತೆ ಏರಿದ ದನಿಯಲ್ಲಿ ತಾಕೀತು ಮಾಡಿದರು. ಇದರಿಂದ ಕೆರಳಿದ ಜೆಡಿಎಸ್‌ನ ಮರಿತಿಮ್ಮೇಗೌಡ ಅವರು, ಇದು ಸಂವಿಧಾನ ವಿರೋಧಿ ನಡೆ. ಸಚಿವ ನಿರಾಣಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಬಳಿಕ, ವಿಪಕ್ಷ ನಾಯಕ ಹರಿಪ್ರಸಾದ್, ಪ್ರಕಾಶ್ ರಾಥೋಡ್, ಸಲೀಂ ಅಹ್ಮದ್ ಸೇರಿದಂತೆ ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸದ ಬಗ್ಗೆ ವಿವರ ನೀಡಲು ನಿರಾಣಿ ಅವರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಆದರೂ, ಸಭಾಪತಿ ಅವಕಾಶ ನೀಡದ ಕಾರಣ ಸದಸ್ಯ ಯು ಬಿ ವೆಂಕಟೇಶ್ ಸೇರಿದಂತೆ ಹಲವರು ಸದಸ್ಯರು ಬಾವಿಗೆ ಇಳಿದು, ಧರಣಿ ನಡೆಸಿ ಗದ್ದಲ ಎಬ್ಬಿಸಿದರು.

ಆನಂತರ ಸಭಾಪತಿ, ಅವಕಾಶ ನೀಡುವುದಾಗಿ ಭರವಸೆ ನೀಡಿದ ನಂತರ ಧರಣಿ ವಾಪಸ್ ಪಡೆದುಕೊಂಡರು. ಆನಂತರ ಉತ್ತರಿಸಿದ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕಬ್ಬಿನ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಡಿತದ ಕುರಿತು ಒಂದು ತಿಂಗಳಲ್ಲಿ ಸಮಿತಿ ರಚಿಸಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply