ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಸುಗ್ರೀವಾಜ್ಞೆ ಕುರಿತು ವಿಧಾನಸಭೆಯಲ್ಲಿ ಚರ್ಚಿಸಿ ಕಾಯಿದೆ ರೂಪ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ
ಈ ಕುರಿತಂತೆ ಚರ್ಚಿಸಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿಲುವಳಿ ಸೂಚನೆ ಮಂಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇದೊಂದು ಮಹತ್ವದ ವಿಷಯವಾಗಿರುವುದರಿಂದ ಸದನದಲ್ಲಿ ಅನೇಕ ಸದಸ್ಯರು ಮಾತನಾಡಬೇಕಿದೆ. ಕೇವಲ ಪ್ರತಿಪಕ್ಷದ ನಾಯಕರು, ಮುಖ್ಯಮಂತ್ರಿಗಳು ಚರ್ಚೆ ನಡೆಸಿದರೆ ಸಾಲದು. ಸದನದಲ್ಲಿ ಸುದೀರ್ಘವಾದ ಚರ್ಚೆ ಆಗಬೇಕೆಂದು ಅಭಿಪ್ರಾಯಪಟ್ಟರು. ಹೀಗಾಗಿ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಕಾಯ್ದೆಯನ್ನು ನಾವು ಸುಗ್ರೀವಾಜ್ಞೆ ಮೂಲಕ ಅಂಗೀಕರಿಸಿದ್ದೇವೆ. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದಾರೆ. ಸದನದಲ್ಲಿ ಎಲ್ಲ ಸದಸ್ಯರು ಚರ್ಚೆ ಮಾಡಬೇಕೆಂಬ ಕಾರಣಕ್ಕಾಗಿಯೇ ಪುನಃ ಇದನ್ನು ಮಂಡಿಸಿದ್ದೇವೆ. ಅನೇಕ ಸದಸ್ಯರು ಇದರ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಬೆಳಕು ಚೆಲ್ಲಬೇಕು. ಸರ್ಕಾರ ಚರ್ಚಿಸಲು ಮುಕ್ತವಾಗಿದೆ ಎಂದರು.
ಎ.ಇ.ನೇಮಕಾತಿ: ಇಂಧನ ಇಲಾಖೆಯಲ್ಲಿ ಕರೆಯಲಾಗಿದ್ದ 1500 ಸಹಾಯಕ ಕಾರ್ಯಪಾಲಕ ಅಭಿಯಂತರ(ಎಎಇ) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆದೇಶವನ್ನು ಜನವರಿ ತಿಂಗಳ ಮೊದಲ ವಾರದಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ತಿಳಿಸಿದರು.
ಶೂನ್ಯವೇಳೆಯಲ್ಲಿ ಶಾಸಕ ಎಸ್.ಸುರೇಶ್‍ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಇಇ ಹುದ್ದೆಗಳಿಗೆ ನೇರನೇಮಕಾತಿಯನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಇ)ಕ್ಕೆ ನೀಡಲಾಗಿತ್ತು. ಕೆಲವು ಕಾರಣದಿಂದ ಪರೀಕ್ಷೆ ಫಲಿತಾಂಶ ತಡವಾಗಿದೆ ಎಂದರು.
ಅಧಿವೇಶನ ಮುಗಿಯುವುದರೊಳಗೆ ಕೀ ಉತ್ತರಗಳನ್ನು ಪ್ರಕಟಿಸಿ, ಜನವರಿ ಮೊದಲ ವಾರದೊಳಗೆ ಫಲಿತಾಂಶ ಪ್ರಕಟಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.




