ಗ್ಯಾರಂಟಿ ಯೋಜನೆಗಳ ಅರ್ಜಿದಾರರಿಂದ ಲಂಚ, ಹೆಚ್ಚುವರಿ ಹಣ ಪಡೆಯುವುದಾಗಿ ಕಂಡುಬಂದರೆ ಕಠಿಣ ಕ್ರಮ: ಡಿಕೆಶಿ

3 years ago

ಬೆಂಗಳೂರು: ಗೃಹಜ್ಯೋತಿ ಸೇರಿದಂತೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಅರ್ಜಿದಾರರಿಂದ ಲಂಚ ಅಥವಾ ಹೆಚ್ಚುವರಿ ಹಣವನ್ನು ಪಡೆಯುವುದಾಗಿ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಮ್ಮ ಪಕ್ಷದ ಪದಾಧಿಕಾರಿಗಳೊಂದಿಗೆ ಮಾತನಾಡಿದ ವೇಳೆ ಕೆಲ ದೂರುಗಳು ಬಂದಿವೆ. ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆಗೆ ಫಲಾನುಭವಿಗಳಿಂದ 200, 500, 1000 ರೂ.ಗಳನ್ನು ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳಿವೆ. ಇದಕ್ಕೆ ಅವಕಾಶ ಇಲ್ಲ. ಪ್ರತಿ ಅರ್ಜಿಗೆ 22 ರೂ. ಪಡೆದುಕೊಳ್ಳಲು ಸರ್ಕಾರ ಏಜೆನ್ಸಿಗೆ ಅವಕಾಶ ನೀಡಿದೆ. ಅದನ್ನು ಸರ್ಕಾರವೇ ಭರ್ತಿ ಮಾಡುತ್ತದೆ. ಫಲಾನುಭವಿಗಳಿಂದ ಯಾವುದೇ ಶುಲ್ಕ ಪಢಯುವಂತಿಲ್ಲ ಎಂದು ಹೇಳಿದರು.

ಇಂತಹ ದೂರುಗಳ ಬಗ್ಗೆ ಗಮನ ಹರಿಸಲು ಸರ್ಕಾರ ಕಾಲ್ ಸೆಂಟರ್ ಸ್ಥಾಪಿಸಲಿದೆ.ಫಲಾನುಭವಿಗಳಿಂದ ಲಂಚ ಅಥವಾ ಹೆಚ್ಚುವರಿ ಹಣ ಪಡೆಯುವ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಪರವಾನಗಿ ರದ್ದುಪಡಿಸಲಾಗುವುದು ಎಂದು ಹೇಳಿದರು.

ಒಂದು ವೇಳೆ ಹೆಚ್ಚುವರಿ ಹಣ ಪಡೆಯುವುದು ಹಾಗೂ ಲಂಚ ಪಡೆಯುವುದನ್ನು ಮುಂದುವರಿಸಿದರೆ ಸರ್ಕಾರ ಸ್ಥಾಪಿಸಲಿರುವ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.

ಗೃಹಲಕ್ಷ್ಮಿ ಯೋಜನೆಯನ್ನು ಆತುರವಾಗಿ ಜಾರಿಗೆ ತರದಂತೆ, ತಡೆಹಿಡಿಯುವಂತೆ ತಾವೇ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದಾಗಿ ಡಿ.ಕೆ.ಶಿವಕುಮಾರ್ ಹೇಳಿದರು. ಗೃಹಜ್ಯೋತಿ ಯೋಜನೆಯಲ್ಲಿ ಈಗಾಗಲೇ ಸಾಕಷ್ಟು ಗೊಂದಲಗಳಾಗಿವೆ. ಅರ್ಜಿ ಸಲ್ಲಿಕೆಯ ವೇಳೆ ತೊಂದರೆಗಳು ಕಾಣುತ್ತಿವೆ. ಅದು ಗೃಹಲಕ್ಷ್ಮಿ ಯೋಜನೆಯಲ್ಲೂ ಮರುಕಳಿಸಬಾರದು ಎಂಬ ಕಾರಣಕ್ಕೆ ಸ್ವಲ್ಪ ಸಮಯ ಅರ್ಜಿ ಸ್ವೀಕಾರವನ್ನು ತಡೆಹಿಡಿಯುವಂತೆ ಮನವಿ ಮಾಡಿದ್ದೆ ಎಂದು ವಿವರಿಸಿದರು.

ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಸರಳ ಸುಲಭ ವಿಧಾನವನ್ನು ಅಳವಡಿಸಲಾಗುವುದು. ಫಲಾನುಭವಿಗಳೇ ತಮ್ಮ ಮೊಬೈಲ್‍ನಲ್ಲಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತಹ ವ್ಯವಸ್ಥೆ ರೂಪಿಸಲಾಗುವುದು. ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಆಪ್ ಸಿದ್ಧಗೊಳಿಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಖುದ್ದು ನಾನೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಇಂದು ಅಥವಾ ನಾಳೆ ಮತ್ತೊಮ್ಮೆ ಸಭೆ ನಡೆಸಲಾಗುವುದು. ಎಲ್ಲಾ ಸಿದ್ಧತೆಗಳ ಬಳಿಕ ಗೃಹಲಕ್ಷ್ಮಿ ಜಾರಿಯಾಗಲಿದೆ. ಯಾವುದೇ ಗಲಾಟೆಗೆ ಹಾಗೂ ಗೊಂದಲಕ್ಕೆ ಅಕವಾಶ ಇಲ್ಲದಂತಹ ವ್ಯವಸ್ಥೆ ರೂಪಿಸುವುದಾಗಿ ಹೇಳಿದರು.

ಕಾಂಗ್ರೆಸ್‍ನ ಪಂಚಖಾತ್ರಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಜಾರಿಯಾಗಿದೆ. ನಮ್ಮ ಅಕ್ಕ-ತಂಗಿಯರು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಖುಷಿಯಿಂದ ಓಡಾಡುತ್ತಿದ್ದಾರೆ, ಬಸ್‍ಗಳ ಡೋರ್ ಮುರಿದುಹಾಕುತ್ತಿದ್ದಾರೆ, ಈ ಖುಷಿಯನ್ನು ನೋಡಲು ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಂದ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡದೇ ಇದ್ದರೆ ಒಂದು ಕಾಳು ಕಡಿಮೆ ಕೊಟ್ಟರೂ ಧರಣಿ ಮಾಡುವುದಾಗಿ ಹೇಳಿದ್ದಾರೆ.

ಯಡಿಯೂರಪ್ಪ ಧರಣಿ ಮಾಡುವುದಕ್ಕೆ ಪ್ರಖ್ಯಾತರು. ಈ ಹಿಂದೆ ಅವರದೇ ಸರ್ಕಾರ ಸೀರೆ, ಸೈಕಲ್ ನಿಲ್ಲಿಸಿದಾಗ ವಿಧಾನಸಭೆಯಲ್ಲೂ ಧರಣಿ ನಡೆಸಿದ್ದರು. ಈಗ ಮತ್ತೊಮ್ಮೆ ವಿಧಾನಸಭೆಗೆ ಬಂದು ಧರಣಿ ಮಾಡಲಿ ಎಂದು ಆಹ್ವಾನಿಸಿದರು.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಎರಡು, ಮೂರು ದಿನ ತಾಳ್ಮೆಯಿಂದ ಇರಬೇಕು. ಜನಸಾಮಾನ್ಯರು ಈವರೆಗೂ 5 ಕೆ.ಜಿ. ಅಕ್ಕಿಯಲ್ಲೇ ಜೀವನ ಮಾಡಿದ್ದಾರೆ. ಅವರ್ಯಾರೂ ಪ್ರತಿಭಟನೆ ಮಾಡುವ ಅಥವಾ ಟೀಕೆ ಮಾಡುವುದಕ್ಕೆ ಮುಂದಾಗಿಲ್ಲ. ಹೊಟ್ಟೆ ತುಂಬಿದವರು ಹೋರಾಟ, ಆರೋಪಗಳನ್ನು ಮಾಡುತ್ತಿದ್ದಾರೆ. ಜನಸಾಮಾನ್ಯರು, ಬಡವರು ತಾಳ್ಮೆಯಿಂದಿದ್ದಾರೆ ಎಂದು ಹೇಳಿದರು.

Leave a Reply