ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ದಿಗಂಬರ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣದಲ್ಲಿ ಶಾಮೀಲಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಚಿಕ್ಕೋಡಿಯ ಹಿರೇಕೊಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನ ಮುನಿ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ನಿಧನದ ಸುದ್ದಿ ಆಘಾತವನ್ನುಂಟು ಮಾಡಿದೆ. ಹತ್ಯೆಯ ಹಿಂದೆ ಯಾರೇ ಇದ್ದರೂ ಸರ್ಕಾರ ಸೂಕ್ತ ತನಿಖೆ ನಡೆಸಿ ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗುವಂತೆ ತಮ್ಮ ಸರ್ಕಾರ ಗಮನ ಹರಿಸಲಿದೆ ಎಂದು ಹೇಳಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವರೂರ ನವಗ್ರಹ ತೀರ್ಥ ಕ್ಷೇತ್ರದ 108 ಆಚಾರ್ಯ ಗುಣಧರ ನಂದಿ ಮಹಾರಾಜ ಅವರು ಆರಂಭಿಸಿರುವ ಸಲ್ಲೇಖನ ವ್ರತವನ್ನು ಕೈಬಿಡುವಂತೆ ಹಾಗೂ ಸಾರ್ವಜನಿಕರು ಶಾಂತಿ ಕಾಪಾಡಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಂತರಿಗೆ ರಕ್ಷಣೆ: ಈ ನಡುವೆ ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಜೈನ ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ ಎಂದು ತಿಳಿಸಿದ್ದಾರೆ. ಈ ಹತ್ಯೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಕೊಲೆಗಡುಕರನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಮುನಿಗಳ ಹತ್ಯೆ ಮನಸ್ಸಿಗೆ ಅತ್ಯಂತ ಅಘಾತ ತಂದಿದೆ .ಈ ಭೀಕರ ಹತ್ಯೆಯ ಹಿನ್ನೆಲೆಯಲ್ಲಿ ನಾಡಿನ ಸಾಧು ಸಂತರಿಗೆ ರಕ್ಷಣೆ ಒದಗಿಸುವಂತೆ ಅವರು ಆಗ್ರಹಿಸಿದರು. ಸಾಧು, ಸಂತರು ಶಾಂತಿಪ್ರಿಯರು. ದೇಶದ ಒಳಿತು. ಸಂಸ್ಕಾರ, ಸನಾತನ ಧರ್ಮದ ವಿಚಾರವಾಗಿ ಮಾರ್ಗದರ್ಶನ ನೀಡುವವರು. ಅಂತಹ ಸಂತರನ್ನು ಹೇಯವಾಗಿ ಕೊಲೆ ಮಾಡಿರುವುದನ್ನು ಸಮಾಜ ಒಪ್ಪಲು ಸಾಧ್ಯವೇ ಇಲ್ಲ ಎಂದರು.




