ಚನ್ನಪಟ್ಟಣ ತಾಲೂಕಿನ ರಾಜಕೀಯ ಚರಿತ್ರೆಯನ್ನು ಹುಡುಕುತ್ತಾ ಹೊರಟರೆ ದುರಂತದ ಕಥೆಗಳು ಅನಾವರಣಗೊಳ್ಳುತ್ತವೆ. ಇಲ್ಲಿನ ದಲಿತ ರಾಜಕಾರಣ ಸತ್ತು ಬಿದ್ದಿರುವ ಅನಾಥ ಶವ ಇದ್ದಂತೆ. ರಾಜಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ‘ರಾಜಕೀಯ ಅನಕ್ಷರತೆಯಲ್ಲಿ ನರಳುತ್ತಿರುವ ದಿಕ್ಕು ಕಾಣದ ತಬ್ಬಲಿಗಳು’ ಇವರಾಗಿದ್ದಾರೆ. ಹಳ್ಳಿಗಾಡಿನ ಗಾದೆ ಮಾತಿನಂತೆ ‘ದಿಕ್ಕಿಲ್ದೋರು ದೆವ್ವ ತಪ್ಕೊಂಡ್ರಂತೆ’ ಅನ್ನುವಂತೆ ಇಲ್ಲಿನ ದಲಿತ ಸಮುದಾಯದ ರಾಜಕಾರಣಿಗಳು ಪ್ರತಿ ಬಾರಿಯೂ ಅನಿವಾರ್ಯತೆಯ ಕಾರಣಕ್ಕಾಗಿ ಒಂದೊಂದು ಚುನಾವಣೆಗೆ ಒಬ್ಬಬ್ಬ ನಾಯಕನನ್ನು ಆಯ್ಕೆ ಮಾಡಿಕೊಂಡು ಎಲ್ಲಿಯೂ ಸಲ್ಲದ ವ್ಯಕ್ತಿಗಳಾಗಿ ಬದುಕುತ್ತಿರುವುದು ಈ ನೆಲದ ದುರಂತವೇ ಸರಿ.
ಹೀಗೆ ಐವತ್ತು ಸಾವಿರಕ್ಕೂ ಹೆಚ್ಚು ಮತದಾರರಿರುವ ಒಂದು ಸಮುದಾಯ, ಪ್ರತಿ ಚುನಾವಣೆಯಲ್ಲಿಯೂ ಇಲ್ಲಿನ ಪ್ರಭುತ್ವದ ರಾಜಕೀಯ ಚದುರಂಗದಾಟದ ದಾಳಕ್ಕೆ ಸಿಲುಕಿ ಚುನಾವಣೆಯ ಸಂದರ್ಭದಲ್ಲಿ ಮತ ಚಲಾಯಿಸುವ ಸರಕುಗಳಾಗಿ ಪ್ರಜಾಪ್ರಭುತ್ವದ ಅಂಕಿ ಸಂಖ್ಯೆಗಳ ಆಟದಿಂದ ಹೊರಗುಳಿದಿರುವುದು ಸ್ವತಂತ್ರ ಭಾರತದ ದುರಂತವೇ ಸರಿ.
ಬೊಂಬೆ ನಾಡಿನ ರಾಜಕಾರಣದ ಚರಿತ್ರೆ ಇಲ್ಲಿಗೆ ನಿಲ್ಲವುದಿಲ್ಲ. ಮುಂದುವರಿದಂತೆ ಒಂದೇ ಸಮುದಾಯದ ಶಾಸಕನ್ನು, ಮಂತ್ರಿ ಮಹೋದಯರನ್ನು, ಮುಖ್ಯಮಂತ್ರಿಗಳನ್ನು ಕೊಡುಗೆ ಕೊಟ್ಟಿರುವ ಈ ನೆಲಕ್ಕೆ ಕರುಣೆ ಎಂಬುದು ಇದ್ದಿದ್ದರೆ ಒಂದೇ ಒಂದು ಬಾರಿಯಾದರೂ ದಲಿತ ಸಮುದಾಯದ ವ್ಯಕ್ತಿಯನ್ನು ಶಾಸಕ ಸ್ಥಾನದ ಮೇಲೆ ಕೂರಿಸಿ ಈ ಅಪವಾದವನ್ನು ತೊಡೆದುಕೊಳ್ಳಬಹುದಿತ್ತು. ಆದರೆ ಸದಾ ಅಧಿಕಾರವನ್ನು ಉಂಡ ಪ್ರಭುತ್ವವು ಪಾಪಪ್ರಜ್ಞೆಯ ಅರ್ಥವನ್ನು ಕೂಡ ಅರಿಯದೆ ತನ್ನ ಜಾತಿಗ್ರಸ್ತ ಕೋರೆ ಹಲ್ಲುಗಳಿಂದ ದಲಿತ ಕೇರಿಯ ಮತಗಳನ್ನು ಸುಲಿದು ತಿನ್ನುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ವ್ಯಂಗ್ಯವಲ್ಲದೆ ಮತ್ತೇನು?
ಮೀಸಲಾತಿಯ ಸಂದರ್ಭವನ್ನು ಬಿಟ್ಟರೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ , ಜಿಲ್ಲಾ ಪಂಚಾಯಿತಿ, ನಗರಸಭೆ, ಪುರಸಭೆ ಇತ್ಯಾದಿಗಳಲ್ಲಿ ಅಧ್ಯಕ್ಷ ಸ್ಥಾನ ಇರಲಿ ಸದಸ್ಯ ಸ್ಥಾನವು ಕೂಡ ಸ್ವತಂತ್ರ ಭಾರತದ ಚನ್ನಪಟ್ಟಣದ ರಾಜಕೀಯ ಚರಿತ್ರೆಯಲ್ಲಿ ಒಂದೇ ಒಂದು ಬಾರಿಯಾದರೂ ದಲಿತ ಸಮುದಾಯಕ್ಕೆ ದೊರೆತಿದ್ದರೆ ಹೇಳಿ ನೋಡೋಣ ? ಹಾಗೇನಾದರೂ ಮೀಸಲಾತಿ ಎನ್ನುವ ರಾಜಕೀಯ ಪ್ರಾತಿನಿಧ್ಯ ಇಲ್ಲದಿದ್ದರೆ ಇಲ್ಲಿನ ದಲಿತರ ಕಥೆ ಏನಾಗುತ್ತಿತ್ತು ಎಂದು ಸ್ವಲ್ಪ ಯೋಚಿಸೋಣವೇ?
ಇಲ್ಲಿನ ಪ್ರಭುತ್ವ ಒಬ್ಬ ದಲಿತ ನಾಯಕನನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವಂತೆ ನೋಡಿಕೊಳ್ಳದೇ ಇರುವುದರ ಹಿಂದಿರುವ ಮರ್ಮವೇನು ? ಎಂ ಎಲ್ ಸಿ, ನಿಗಮ ಮಂಡಳಿ , ನಿರ್ದೇಶಕ ಸ್ಥಾನಗಳು, ಇತರೆ ಪಕ್ಷಗಳ ರಾಜ್ಯ ಮಟ್ಟದ ಸ್ಥಾನಮಾನಗಳು ಇವರ ಹತ್ತಿರಕ್ಕೆ ಸುಳಿಯದಂತೆ ನೋಡಿಕೊಂಡಿರುವುದರ ಅರ್ಥವೇನು?
ಪ್ರತಿಪಕ್ಷಗಳಿಗೂ ತಮ್ಮನ್ನು ತಾವು ಹಂಚಿಕೊಂಡಿರುವ ದಲಿತ ನಾಯಕರುಗಳು ‘ಮೇಗಲ ಕೇರಿಯ ಜೀತಗಾರ ತನ್ನ ಕೇರಿಯ ಯಜಮಾನ’ ಎಂಬ ನಾಣ್ನುಡಿಯಂತೆ ತನ್ನ ಸಮುದಾಯದ ಜನ ಸಾಮಾನ್ಯರ ಮುಂದೆ ನಾಯಕರಂತೆ ಕಾಣುವ ಇವರುಗಳು ತಾನು ಮೆಚ್ಚಿಕೊಂಡಿರುವ ಪಕ್ಷದ ಮಹೋದಯರುಗಳ ಮುಂದೆ ತಗ್ಗಿ ಬಗ್ಗಿ ತಮ್ಮ ವಿನಮ್ರತೆಯನ್ನು ಪ್ರದರ್ಶನ ಮಾಡುವುದನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ.
ಇವತ್ತಿಗೂ ಆಧುನಿಕ – ಹೈಟೆಕ್ ಯುಗದಲ್ಲಿಯೂ ಸಂವಿಧಾನ ಜಾರಿಗೊಂಡು 75 ವರ್ಷಗಳು ಕಳೆದರೂ ತಾಲೂಕಿನ ಹಳ್ಳಿಗಳಲ್ಲಿ ಸತ್ತ ಹೆಣ ಹೂಳಲು ಸ್ಮಶಾನವಿಲ್ಲದ ದರಿದ್ರ ಸ್ಥಿತಿಯಲ್ಲಿ ನಾವಿದ್ದೇವೆ ಎಂದರೆ ಇನ್ಯಾವ ಪದಗಳಿಂದ ದಲಿತ ರಾಜಕಾರಣದ ಸುವರ್ಣ ಅಕ್ಷರದ ಅನಾಥ ಸ್ಥಿತಿಯನ್ನು ಹೇಳಲಿ?
ತಾಲೂಕಿನಲ್ಲಿ ನಮ್ಮನ್ನು ಆಳಿ ಹೋದ ಮತ್ತು ಆಳುತ್ತಿರುವ ಶಾಸಕರುಗಳು ಕೊನೆ ಪಕ್ಷ ಒಬ್ಬ ಪಿ.ಎ (ಆಪ್ತ ಸಹಾಯಕ) ಸ್ಥಾನವನ್ನಾದರೂ ಒಬ್ಬ ದಲಿತನಿಗೆ ಕೊಟ್ಟಿದ್ದಾರೆಯೇ ? ಇನ್ನೊಂದು ನಮ್ಮ ದಲಿತ ಸಮುದಾಯದ ಹೀನಾಯ ಸ್ಥಿತಿಯ ಪ್ರತೀಕವೆಂದರೆ ಒಬ್ಬ ತಾಲೂಕಿನ ದಲಿತ ನಾಯಕನಾದವನು ತಮ್ಮ ನಾಯಕ ಮಹೋದಯರಿಗೆ ತಮ್ಮ ಮೊಬೈಲ್ ಮೂಲಕ ನೇರವಾಗಿ ಕರೆ ಮಾಡಿ ಮಾತನಾಡುವ ಧೈರ್ಯ ಇದೆಯೇ? ಇಂತಹ ಹೀನಾಯ ದರಿದ್ರ ಸ್ಥಿತಿಯಲ್ಲಿರುವ ದಲಿತ ರಾಜಕಾರಣಕ್ಕೆ ಯಾರು ಹೊಣೆ?
ನಿಜಕ್ಕೂ ಪ್ರಭುತ್ವವೇ ಉತ್ತರಿಸಬೇಕಾಗಿದೆ.
ಶತಮಾನೋತ್ಸವ ಭವನ ಮತ್ತು ಕೋರ್ಟ್ ಕಟ್ಟಲು ತೆಗೆದುಕೊಂಡ ಕಾಲಮಿತಿಯ ಮುತ್ತುವರ್ಜಿ ಮತ್ತು ಅಂಬೇಡ್ಕರ್ ಭವನ ಕಟ್ಟಲು ತೆಗೆದುಕೊಂಡ 20 ವರ್ಷಗಳ ಕಾಲಮಾನದ ತಾತ್ಸಾರವನ್ನು ಗಮನಿಸಿದರೆ ತಾಲೂಕಿನಲ್ಲಿ 200 ಅಂಬೇಡ್ಕರ್ ಭವನಗಳನ್ನು ಬಹುದಿತ್ತು ಅಲ್ಲವೇ ?
ನಮ್ಮ ತಾಲೂಕನ್ನು ಆಳುತ್ತಿರುವ ಪ್ರಭುತ್ವವು ದಲಿತ ಸಮುದಾಯದ ಒಬ್ಬ ಗುತ್ತಿಗೆದಾರನನ್ನು ಬೆಳೆಸಿರುವ ಇತಿಹಾಸವಿದೆಯೇ? ಒಬ್ಬ ಸರ್ಕಾರಿ ನೌಕರನಿಗೆ ಉನ್ನತ ಸ್ಥಾನ ಕೊಡಿಸಿರುವ ಚರಿತ್ರೆ ಇದೆಯೇ ? ಬಡ್ತಿ ಮೀಸಲಾತಿಯ ಸಂದರ್ಭದಲ್ಲಿ ತಾಲೂಕಿನ ನೌಕರರಿಗೆ ಸಹಕಾರ ನೀಡಲಾಗಿದೆಯೇ ? ಚುನಾವಣೆಯ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ದಲಿತ ನಾಯಕರನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೇ? ಹೋಗಲಿ ಇದ್ಯಾವುದು ಬೇಡ ಕೊನೆ ಪಕ್ಷ ರಸ್ತೆಯಲ್ಲಿ ಎದುರಿಗೆ ಬರುವ ದಲಿತ ನಾಯಕರನ್ನು ಮನಸ್ಸೊ ಇಚ್ಛೆ ಪ್ರೀತಿಯಿಂದ ಗೌರವಿಸುವ ಮನಸ್ಥಿತಿ ಈ ನೆಲದಲ್ಲಿ ಶಾಸಕ ಮಹೋದಯರಿಗೆ ಇದೆಯೇ?
ನಾವು ಖಂಡಿತವಾಗಿಯೂ ದಲಿತ ನಾಯಕರನ್ನು ಹೀಯಾಳಿಸುವುದು ಬೇಡ. ಈ ಮೇಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನಾವೇ ಆಗಿದ್ದೇವೆ. ನಾವು ಕೂಡ ಕಡಿಮೆಯೇನಿಲ್ಲ ನಮ್ಮ ದಲಿತ ನಾಯಕರನ್ನು ನಾವು ಗೌರವಿಸುವುದಿಲ್ಲ. ನಮ್ಮ ನಾಯಕರಿಗೆ ಸಾವಿರ ಪ್ರಶ್ನೆ ಕೇಳುವ ನಾವು ಪ್ರಭುತ್ವದ ಮುಂದೆ ಹಲ್ಲು ಕಿರಿಯುತ್ತೇವೆ.
ಪ್ರೀತಿಯ ಬಂದುಗಳೇ ಕೊನೆಯ ಮಾತು ……
ಸಾಕು ಮಾಡೋಣ ನಮ್ಮ ಈ ದರಿದ್ರ ಸ್ಥಿತಿಯನ್ನು . ಹಳ್ಳಿಗಳ ಕಡೆ ಹೋಗೋಣ. ಏನು ಅರಿಯದ ನಮ್ಮ ಮುಗ್ದ ಸಮುದಾಯವನ್ನು ಜಾಗೃತಿಗೊಳಿಸೋಣ. ತಾಲ್ಲೂಕಿನಲ್ಲಿ ಪರ್ಯಾಯ ರಾಜಕಾರಣವನ್ನು ಮಾಡಿ ತೋರಿಸೋಣ.
ಮೇಲಿನ ಮಾತುಗಳು ಯಾರನ್ನೋ ಪ್ರಶ್ನೆ ಮಾಡಲು ಬರೆದ ಮಾತುಗಳಲ್ಲ, ನಮ್ಮನ್ನು ನಾವೇ ಮಾಡಿಕೊಂಡ ಸಮುದಾಯದ ಅವಲೋಕನ.
– ಸುರೇಶ್ ಗೌತಮ್, ಸಾಮಾಜಿಕ ಹೋರಾಟಗಾರರು




