ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರನ್ನು ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ ಎಂದು ಆರೋಪಿಸಿದರು.
ವಿಧಾನಪರಿಷತ್ನಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ನಡೆದಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಆಗಿದ್ದ ಮೋದಿಯವರು, ಯುಪಿಎ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಎಂದು ಹೇಳಿದ್ದನ್ನು ಸ್ಮರಿಸಿದರು.
ಮೋದಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ, ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷುಕರಲ್ಲ. ಗುಜರಾತ್ ರಾಜ್ಯದಿಂದ ಸಂಗ್ರಹ ಆಗುವ ತೆರಿಗೆಯಲ್ಲಿ ಶೇ.50 ರಷ್ಟು ವಾಪಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಗುಜರಾತ್ ರಾಜ್ಯದ ತೆರಿಗೆಯನ್ನು ನಾವು ಕೇಂದ್ರಕ್ಕೆ ಕೊಡುವುದಿಲ್ಲ ಎನ್ನುವ ಮಾತನ್ನೂ ಮೋದಿ ಅವರು ಆಡಿದ್ದರು. ಆದರೆ ಈಗ ಅದೇ ಮೋದಿ ಅವರು ಪ್ರಧಾನಿ ಆಗಿರುವಾಗ, ಕರ್ನಾಟಕ ರಾಜ್ಯಕ್ಕೆ ವಾಪಸ್ ಕೊಡುತ್ತಿರುವುದು ಶೇ.12-13ರಷ್ಟು ಮಾತ್ರ. ಮೋದಿ ಆಗೊಂದು ಮಾತು ಈಗೊಂದು ರೀತಿ ಮಾತನಾಡಿದ್ದಾರೆ. ಇದನ್ನು ಪ್ರಸ್ತಾಪಿಸಿದರೆ ನಿಮಗೇಕೆ ಸಿಟ್ಟು ಎಂದು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.
ನಾವು ಕೊಡುವ ಪ್ರತಿ 100 ರೂಪಾಯಿಗೆ ಕೇವಲ 12 ರೂ. ವಾಪಸ್ ಕೊಟ್ಟರೆ ರಾಜ್ಯದ ಅಭಿವೃದ್ಧಿ ಆಗಲು ಹೇಗೆ ಸಾಧ್ಯ? ಇಷ್ಟು ಕಡಿಮೆ ಪಾಲು ನಮಗೆ ಕೊಟ್ಟರೆ ರಾಜ್ಯದ ಶೂದ್ರರು, ದಲಿತರು, ಆದಿವಾಸಿಗಳು, ದುಡಿಯುವವರು, ಶ್ರಮಿಕರು, ಯುವಕರ, ಮಹಿಳೆಯರ ಅಭಿವೃದ್ಧಿ ಹೇಗೆ ಸಾಧ್ಯ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಹಣದ ಪಾಲಿನಲ್ಲಿ ಅನ್ಯಾಯವಾದುದು. 2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ 24,44,213 ಕೋಟಿ ಇತ್ತು. ಅಂದು ರಾಜ್ಯಕ್ಕೆ 51,000 ಕೋಟಿ ಮಾತ್ರ ಬಂತು. 2020-21 ಸಾಲಿನಲ್ಲಿ ಕೇಂದ್ರದ ಬಜೆಟ್ ಗಾತ್ರ 30,42,243 ಕೋಟಿ ಇದ್ದರೆ ನಮಗೆ ಬಂದಿದ್ದು 31,734 ಕೋಟಿ ರೂ., 2021-22 ರಲ್ಲಿ 34,83,236 ಕೋಟಿ ಗಾತ್ರದ ಬಜೆಟ್ ಗೆ, ರಾಜ್ಯಕ್ಕೆ 48,589 ಕೋಟಿ ಬಂತು. 2022-23ರಲ್ಲಿ ಕೇಂದ್ರದ ಬಜೆಟ್ 41,81,232 ಕೋಟಿ , ರಾಜ್ಯಕ್ಕೆ 53510 ಕೋಟಿ ಮಾತ್ರ ಬಂತು. 2023-24ರಲ್ಲಿ 45,03,007 ಕೋಟಿ ಕೇಂದ್ರದ ಬಜೆಟ್ ಗಾತ್ರ. ರಾಜ್ಯಕ್ಕೆ ಬಂದಿದ್ದು 50,257 ಕೋಟಿ ಮಾತ್ರ. 2024-25ರಲ್ಲಿ ರಾಜ್ಯಕ್ಕೆ 59,785 ಕೋಟಿ ಬರುತ್ತದೆ ಎಂದು ರಾಜ್ಯಕ್ಕೆ ಆಗುತ್ಯಲೇ ಇರುವ ಅನ್ಯಾಯದ ಅಂಕಿ ಅಂಶಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಈ ರೀತಿ ಬಜೆಟ್ ಗಾತ್ರ ದೊಡ್ಡದಾದರೂ, ನಮಗೆ ಬರುತ್ತಿರುವ ಪಾಲು ಕಡಿಮೆಯಾಗುತ್ತಿದೆ. ಪ್ರಧಾನಿ ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ರಾಜ್ಯದ ತೆರಿಗೆ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ದೇಶದ ಏಕತೆಗೆ ಅಪಾಯವೊಡ್ಡುತ್ತದೆ ಎಂದಿದ್ದರು. ಅದೇ ಪ್ರಧಾನಿಯವರು ಗುಜರಾತಿನ ಸಿಎಂ ಆಗಿದ್ದಾಗ 2012ರಲ್ಲಿ ಗುಜರಾತಿಗೆ ಬರುತ್ತಿರುವ ಆರ್ಥಿಕ ಪಾಲನ್ನು ವಿರೋಧಿಸಿದ್ದರು ಎಂದರು.
ಗುಜರಾತ್ ರಾಜ್ಯ ನಾವು ಭಿಕ್ಷುಕ ರಾಜ್ಯವೇ, ನಾವು ಭಿಕ್ಷುಕರೆ, ನಾವು ಕೇಂದ್ರದ ಕರುಣೆಯ ಮೇಲೆ ಬದುಕಬೇಕೇ ಎಂದಿದ್ದರು. ಅಂದಿನ ಕೇಂದ್ರಕ್ಕೆ ಗುಜರಾತಿನಿಂದ ತೆರಿಗೆ ತೆಗೆದುಕೊಳ್ಳಬೇಡಿ, ಅದನ್ನು ನಾವೇ ಬಳಸಿಕೊಳ್ಳುತ್ತೇವೆ ಎಂದು ಮೋದಿ ಅಂದಿದ್ದರು. ಇದು ಸಂವಿಧಾನ, ಒಕ್ಕೂಟ ವ್ಯವಸ್ಥೆಗೆ ವಿರೋಧವಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯಗಳು ಸುಭದ್ರವಾಗಿದ್ದರೆ ಮಾತ್ರ ದೇಶ ಸುಭದ್ರ. ರಾಜ್ಯಗಳನ್ನು ಕೇಂದ್ರ ದುರ್ಬಲಗೊಳಿಸಬಾರದು ನಮ್ಮ ಸಂವಿಧಾನ ನಮ್ಮದು ಒಕ್ಕೂಟ ವ್ಯವಸ್ಥೆ ಎಂದು ರೂಪಿಸಿದೆ. ಇದನ್ನು ಇಡೀ ದೇಶ ಒಪ್ಪಿಕೊಂಡಿದೆ. ಆದರೆ ಈ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡಬಾರದು. ನರೇಂದ್ರ ಮೋದಿಯವರು ¾ಕೋ ಆಪರೇಟಿವ್ ಫೆಡರಿಲಿಸಂ ಎಂದು ಹೇಳುತ್ತಾರೆ. ಆದರೆ ಅವರ ಮತ್ತು ಕೇಂದ್ರ ಸರ್ಕಾರದ ನಡವಳಿಕೆಯಲ್ಲಿ ಇದು ಕಾಣುತ್ತಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಆಗುತ್ತಿರುವ ಅನ್ಯಾಯದ ಅಂಕಿ ಅಂಶಗಳನ್ನು ಸದನಕ್ಕೆ ನೀಡಿದರು.
ರಾಜ್ಯದಿಂದ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ರಾಜ್ಯದಿಂದ 4.30 ಲಕ್ಷ ಕೋಟಿ ತೆರಿಗೆ ಹೋಗುತ್ತಿದೆ. ತೆರಿಗೆ ಹಂಚಿಕೆಯಲ್ಲಿ 2023-24ಕ್ಕೆ 37252 ಕೋಟಿ ರೂ. ಬರುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಂದ 13005 ಕೋಟಿ , ಒಟ್ಟು 50257 ಕೋಟಿ ಮಾತ್ರ ರೂ. ಬರುತ್ತಿದೆ. ಕೇಂದ್ರದ ಬಜೆಟ್ ಗಾತ್ರ ಹೆಚ್ಚಾದ ಹಾಗೆ ರಾಜ್ಯದ ಪಾಲು ಕೂಡ ನಿಯಮಬದ್ದವಾಗಿ ಹೆಚ್ಚಾಗಬೇಕು ಎಂದರು.
ಆದರೆ, ಕೇಂದ್ರದ ಬಜೆಟ್ ಗಾತ್ರ ಹೆಚ್ಚಾಗುತ್ತಾ ಹೋದಂತೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲು, ಕನ್ನಡಿಗರ ಹಕ್ಕಿನ ತೆರಿಗೆ ಮತ್ತು ಅನುದಾನದ ಪಾಲು ಕಡಿಮೆ ಆಗುತ್ತಿದೆ. ಕನ್ನಡಿಗರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ರಾಜ್ಯ ಬಲಿಷ್ಠವಾದರೆ, ಕೇಂದ್ರ ಬಲಿಷ್ಠವಾಗುತ್ತದೆ ಎಂದರು.
ಇದನ್ನು ವಿರೋಧಿಸಿದ ವಿಪಕ್ಷ ಸದಸ್ಯರು ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ಕೊಟ್ಟಿದ್ದರೆ ನಮ್ಮದೇನು ತಕರಾರು ಇರುತ್ತಿರಲಿಲ್ಲ. ಕೇವಲ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡಿದರೆ ನಾವು ಅದನ್ನು ಸಹಿಸಿಕೊಂಡು ಸುಮ್ಮನಿರಬೇಕಾ? ಎಂದು ಪ್ರಶ್ನಿಸಿ ಸಭಾತ್ಯಾಗ ಮಾಡಿದರು.




