ಬೆಂಗಳೂರು: ರಾಜ್ಯ ಸರ್ಕಾರ ಡೀಸೆಲ್, ಪೆಟ್ರೋಲ್ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಹಾಕಿರುವ ಹೊರೆಯನ್ನು ತಕ್ಷಣವೇ ವಾಪಸ್ ಪಡೆಯುವಂತೆ ಆಗ್ರಹಿಸಿ ನಾಳೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಪ್ರಕಟಿಸಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್ ದರ ಹೆಚ್ಚಳ ಮಾಡಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಜಿಲ್ಲಾ, ತಾಲ್ಲೂಕು ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ಯಾರೊಬ್ಬರೂ ಮತ ಹಾಕಬಾರದು ಎಂದು ರಾಜ್ಯದ ಜನತೆಗೆ ಕರೆ ನೀಡಿದರು.
ಕಾಂಗ್ರೆಸ್ ಪಕ್ಷದಿಂದ ಸಚಿವರು ಇಲ್ಲವೇ ಶಾಸಕರ ಅಣ್ಣ-ತಮಂದಿರು, ಅಕ್ಕ-ತಂಗಿಯರು ಇಲ್ಲವೇ ಸಂಬಂಧಿಕರೇ ಸ್ಪರ್ಧೆ ಮಾಡಿದರೂ ಅವರಿಗೆ ಒಂದೇ ಒಂದು ಮತ ಹಾಕಬೇಡಿ. ನೀವು ಕಾಂಗ್ರೆಸ್‌ಗೆ ಮತ ಹಾಕುವುದರಿಂದ ಮತ್ತಷ್ಟು ದರದ ಬಿಸಿಯನ್ನು ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.
ಮುಂಬರುವ ಸ್ಥಳೀಯ ಸಂಸ್ಥೆಗಳು ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಚೊಂಬು ಕೊಡುವುದು ಗ್ಯಾರಂಟಿ. ಜನವಿರೋಧಿ ಸರ್ಕಾರ ಇದು ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಎಲ್ಲರೂ ಹಿಡಿಶಾಪ ಹಾಕುತ್ತಿದ್ದಾರೆ. ಅವರ ಕಣ್ಣೀರಿನ ಶಾಪ ಈ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದರಿಂದ ಕರ್ನಾಟಕದ ಜನರು ಸಂತೃಪ್ತರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೊಗಳೆ ಬಿಡುತ್ತಿದ್ದಾರೆ. ದೇಶದಲ್ಲಿ ಕರ್ನಾಟಕ ಮಾದರಿ ಚರ್ಚೆಯಾಗುತ್ತಿದೆ ಎಂದು ಮತ್ತೊಂದು ಹಸಿಸುಳ್ಳು ಹೇಳಿದ್ದಾರೆ. ನಿಜವಾಗಿಯೂ ಚರ್ಚೆಯಾಗುತ್ತಿರುವುದು ಏಕಾಏಕಿ ಇಷ್ಟು ದೊಡ್ಡಮಟ್ಟದಲ್ಲಿ ಡೀಸೆಲ್, ಪೆಟ್ರೋಲ್ ದರವನ್ನು ಏರಿಸಿದ್ದು ಏಕೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ನಮಗೆ ಮತ ಹಾಕಿಲ್ಲ ಎಂಬ ಒಂದೇ ಕಾರಣಕ್ಕಾಗಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ. ನಿಮಗೆ ಸೇಡಿದ್ದರೆ ಬಿಜೆಪಿ ಮೇಲೆ ತೀರಿಸಿಕೊಳ್ಳಿ. ಅದನ್ನು ಬಿಟ್ಟು ಶ್ರೀಸಾಮಾನ್ಯರ ಹೊಟ್ಟೆಪಾಡಿಗೆ ಕಲ್ಲು ಹಾಕುವ ಕೆಲಸ ಮಾಡಬೇಡಿ. ಬಡವರು ರೊಚ್ಚಿಗೆದ್ದರೆ ಕಾಂಗ್ರೆಸ್‌ರಾಜ್ಯದಲ್ಲಿ ಸರ್ವನಾಶವಾಗುತ್ತದೆ ಎಂದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತತ್‌ಕ್ಷಣವೇ ಶ್ವೇತಪತ್ರ ಹೊರಡಿಸಲಿ. ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದು ನನಗೂ ಗೊತ್ತಿದೆ. ಹಣಕಾಸು ಇಲಾಖೆಯಲ್ಲಿ ನನಗೂ ಬೇಕಾದ ಅಧಿಕಾರಿಗಳಿದ್ದಾರೆ ಎಂದರು.
ಮಾತೆತ್ತಿದರೆ ನಾನು 14 ಬಜೆಟ್ ಮಂಡಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇರಲಿಲ್ಲವೇ? ರಾಜ್ಯದ ಜನತೆ ಈ ದರಿದ್ರ ಸರ್ಕಾರ ಅಧಿಕಾರದಿಂದ ಹೋದರೆ ಸಾಕು ಎಂದು ಎದುರು ನೋಡುತ್ತಿದ್ದಾರೆ. ಯಾವ ನೈತಿಕತೆ ಇಟ್ಟುಕೊಂಡು ಅಧಿಕಾರದಲ್ಲಿ ಸಿದ್ದರಾಮಯ್ಯ ಮುಂದುವರೆಯುತ್ತಿದ್ದಾರೆ? ಎಂದರು.
ಸರ್ಕಾರಿ ಅಧಿಕಾರಿಗಳಿಗೆ ಪ್ರತಿಯೊಬ್ಬರೂ ಕಿರುಕುಳ ನೀಡುತ್ತಿದ್ದಾರೆ. ಇಲಾಖೆಗೆ ಬರಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.ಇಲಾಖೆಯಲ್ಲಿ ನಯಾಪೈಸೆ ಹಣ ಇಲ್ಲದಿದ್ದರೂ ಕೆಲವರು ಬಿಲ್‌ಗಳನ್ನು ಬಿಡುಗಡೆ ಮಾಡಲು ಒತ್ತಡ ಹೇರುತ್ತಿದ್ದಾರೆ. ವೇತನ ಆಯೋಗದ ವರದಿಯನ್ನು ಕಸದ ಡಬ್ಬಿಗೆ ಎಸೆಯಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯನವರು ಔಟ್ ಗೋಯಿಂಗ್ ಮುಖ್ಯಮಂತ್ರಿಯಾಗಿದ್ದಾರೆ. ಕಳೆದ ಬಜೆಟ್ ಒಂದು ಬೋಗಸ್ ಎಂದು ನಾನು ಸದನದಲ್ಲಿ ಹೇಳಿದ್ದೆ. ಆದರೆ ನನ್ನ ಮಾತು ಒಪ್ಪಿರಲಿಲ್ಲ. ಗ್ಯಾರಂಟಿಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳಿದ್ದರು. ಈಗ ಅವರ ಹಣೆಬರಹ ಏನೆಂಬುದು ಎಲ್ಲರಿಗೂ ಗೊತ್ತಾಗಿದೆ. ಬಜೆಟ್‌ನಲ್ಲಿ ದರ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದರೆ ಜನ ತಿರುಗಿಬೀಳಬಹುದು ಎಂಬ ಕಾರಣಕ್ಕಾಗಿ ಕದ್ದುಮುಚ್ಚಿ ರಾತ್ರೋರಾತ್ರಿ ಏರಿಕೆ ಮಾಡುತ್ತಾರೆ. ಇದರಿಂದ ಪ್ರತಿ ಮನೆಗೆ 1800 ರೂ. ಹೊರೆಯಾಗುತ್ತದೆ. ಇದು ಮನೆಮುರಿಯುವ ಕೆಲಸವಲ್ಲವೇ? ಎಂದರು.




