ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ: ಸಿದ್ದರಾಮಯ್ಯ

4 years ago

ಚಾಮರಾಜನಗರ: ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಚಾಮರಾಜನಗರದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮೇಕೆದಾಟು ಯೋಜನೆ ಜಾರಿ ಕುರಿತ ಜನಜಾಗೃತಿ ಸಭೆ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಈ ಹಿಂದೆ ಕೊರೊನಾ ರೋಗ ಹೆಚ್ಚಾದಾಗ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಆಗ ಮೃತರ ಕುಟುಂಬದವರನ್ನು ಸಂತೈಸಿ, ಅವರಿಗೆ ನ್ಯಾಯ ದೊರಕಿಸಿಕೊಡಲು ಚಾಮರಾಜನಗರಕ್ಕೆ ಕಡೆಯದಾಗಿ ಬಂದಿದ್ದೆ ಎಂದರು.

ರಾಜ್ಯ ಸರ್ಕಾರದ ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸತ್ತಿದ್ದು ಕೇವಲ ಮೂರೆ ಮಂದಿ ಎಂದು ಸುಳ್ಳು ಹೇಳಿದ್ದರು, ಜಗತ್ತಿಗೆ ಸತ್ಯವನ್ನು ತೆರೆದಿಡಲು ನಾನು ಚಾಮರಾಜನಗರಕ್ಕೆ ಬಂದು, ವೈದ್ಯರು, ಅಧಿಕಾರಿಗಳೊಂದಿಗೆ ಸಭೆ ಮಾಡಿ ಸತ್ತವರ ನಿಜವಾದ ಲೆಕ್ಕವನ್ನು ಮಾಧ್ಯಮಗಳೆದುರು ಹೇಳಿದ್ದೆ. ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಂಡ 36 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದರು.

ಚಾಮರಾಜನಗರ ಜಿಲ್ಲೆಗೆ ಬಂದರೆ ಮುಖ್ಯಮಂತ್ರಿ ಹುದ್ದೆ ಹೋಗುತ್ತದೆ ಎಂಬ ಮೂಢನಂಬಿಕೆ ಇತ್ತು, ಇದನ್ನು ತೊಲಗಿಸಬೇಕು ಎಂದೇ ನಾನು ಮುಖ್ಯಮಂತ್ರಿ ಆಗಿದ್ದಾಗ 10 ರಿಂದ 12 ಬಾರಿ ಇಲ್ಲಿಗೆ ಬಂದು ಹೋಗಿದ್ದೆ ಮತ್ತು ಐದು ವರ್ಷ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿ ಉಳಿದಿದ್ದೆ. ಜೆ.ಹೆಚ್.ಪಟೇಲ್ ಅವರ ಸರ್ಕಾರದ ಕಾಲದಲ್ಲಿ ರಾಚಯ್ಯ ಮತ್ತು ನಾನು ಇಲ್ಲಿಗೆ ಬಂದು ಚಾಮರಾಜನಗರವನ್ನು ಹೊಸ ಜಿಲ್ಲೆಯಾಗಿ ಘೋಷಣೆ ಮಾಡಿದ್ದೆವು. ಇಂದು ಅವರು ನಮ್ಮೊಂದಿಗಿಲ್ಲ ಅನ್ನೋದು ನೋವಿನ ವಿಚಾರ ಎಂದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಸುಮಾರು ಹತ್ತು ಸಾವಿರ ಕೋಟಿಗೂ ಅಧಿಕ ಹಣವನ್ನು ಚಾಮರಾಜನಗರದ ಅಭಿವೃದ್ಧಿಗೆ ಕೊಟ್ಟಿದ್ದೆ. ಕೃಷಿ, ಕಾನೂನು ಕಾಲೇಜು, ಸರ್ಕಾರಿ ಆಸ್ಪತ್ರೆ, ದ್ವಿಪಥ ರಸ್ತೆಗಳು ಇವೆಲ್ಲ ನಮ್ಮ ಸರ್ಕಾರದ ಕೊಡುಗೆಗಳು, ಇಂದು ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಕೂಡ ನಮ್ಮ ಸರ್ಕಾರದ ಕಾಲದಲ್ಲಿ ಅನುಮೋದನೆಗೊಂಡವೇ ಆಗಿವೆ ಎಂದರು.

ಬಿಜೆಪಿ ಸರ್ಕಾರ ಬಂದಮೇಲೆ ರಾಜ್ಯದಲ್ಲಿ ಒಂದೇ ಒಂದು ಹೊಸದಾಗಿ ಮನೆ ನಿರ್ಮಿಸಿಕೊಟ್ಟಿಲ್ಲ. ನಮ್ಮ ಕಾಲದಲ್ಲಿ ಕೊಟ್ಟ ಮನೆಗಳಿಗೂ ಹಣ ಬಿಡುಗಡೆ ಮಾಡ್ತಿಲ್ಲ. ವಸತಿ ಸಚಿವ ಸೋಮಣ್ಣನಿಗೆ ಬಡವರಿಗೆ ಮನೆ ಕೊಡೋಕಾಗಲ್ಲ ಅಂದ್ರೆ ಅಧಿಕಾರದಲ್ಲಿ ಯಾಕಿದೀರಪ್ಪ, ರಾಜೀನಾಮೆ ಕೊಡಿ ಎಂದರೆ ಸರ್ಕಾರ ದುಡ್ ಕೊಡ್ತಿಲ್ಲ ಸಾರ್ ಅಂತಾರೆ, ವಿಜೇಂದ್ರನಿಗೂ ಸೋಮಣ್ಣನಿಗೂ ವೈಯಕ್ತಿಕವಾಗಿ ಸರಿ ಇರಲಿಲ್ಲ ಹಾಗಾಗಿ ಇವರ ಇಲಾಖೆಗೆ ಬೇಕಂತಲೇ ದುಡ್ಡು ಬಿಡುಗಡೆ ಮಾಡುತ್ತಾ ಇರಲಿಲ್ಲ ಎಂದು ಆರೋಪಿಸಿದರು.

ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಸರ್ಕಾರವನ್ನು ಕಿತ್ತು ಬಿಸಾಕಿ ಮುಂದಿನ ಚುನಾವಣೆಯಲ್ಲಿ ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ಅದು ಇಂದಿನಿಂದಲೇ ಆರಂಭ ಆಗಬೇಕು ಎಂದು ಅವರು ಕರೆನೀಡಿದರು.

1968ರಲ್ಲೇ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಮಾಡಿತ್ತು, ಆದರೆ ಆಗ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಜಲ ವಿವಾದ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಅನುಷ್ಠಾನ ಸಾಧ್ಯವಾಗಲಿಲ್ಲ. ನಂತರ 2017ರಲ್ಲಿ ನಮ್ಮ ಸರ್ಕಾರ ಈ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿತ್ತು. ಆಗ ಯೋಜನಾ ವೆಚ್ಚ ರೂ. 5,912 ಕೋಟಿ. ನಂತರ ಸಮ್ಮಿಶ್ರ ಸರ್ಕಾರ ಬಂದಮೇಲೆ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಮತ್ತೆ ರೂ. 9000 ಕೋಟಿಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಆಗಲೂ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ ಎಂದು ಮಾಹಿತಿ ಹಂಚಿಕೊಂಡರು.

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯೋಜನೆ ಜಾರಿಗೆ ಪ್ರಯತ್ನ ಮಾಡದೆ ಈಗ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಗೋವಿಂದ ಕಾರಜೋಳ ಸುಳ್ಳು ಆರೋಪ ಮಾಡಿದ್ದಾರೆ. ಅವರ ಆರೋಪಕ್ಕೆ ಸೂಕ್ತ ಸಾಕ್ಷಿ ಇದ್ದರೆ ಕೂಡಲೇ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಇದೊಂದು ಕುಡಿಯುವ ನೀರಿನ ಯೋಜನೆ ಹಾಗಾಗಿ ಯಾರೂ ಕೂಡ ತಕರಾರು ಮಾಡುವಂತಿಲ್ಲ, ಕೇಂದ್ರದ ಅರಣ್ಯ ಇಲಾಖೆಯ ಅನುಮತಿ ಒಂದು ಸಿಕ್ಕರೆ ಅಣೆಕಟ್ಟು ನಿರ್ಮಾಣ ಮಾಡಲು ಬೇರಾವ ಅನುಮತಿಯೂ ಬೇಡ. ಎರಡೂ ಕಡೆ ಬಿಜೆಪಿಯವರ ಸರ್ಕಾರ ಇದೆ, ಆದರೂ ಯೋಜನೆ ಜಾರಿ ಮಾಡದೆ ಯಾಕೆ ಸುಮ್ಮನಿದ್ದಾರೆ? ಇದೇನಾ ಡಬ್ಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ? ಎಂದು ಪ್ರಶ್ನಿಸಿದರು.

ಒಂದು ಸಾಮಾನ್ಯ ವರ್ಷದಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 177.25 ಟಿ.ಎಂ.ಸಿ ಕಾವೇರಿ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಇದನ್ನು ಬಿಟ್ಟರೆ ತಮಿಳುನಾಡಿಗೆ ಕಾವೇರಿ ನೀರಿನ ವಿಚಾರದಲ್ಲಿ ತಕರಾರು ಮಾಡಲು ಬೇರೆ ಯಾವುದೇ ರೀತಿಯ ಕಾನೂನು ಹಕ್ಕಿಲ್ಲ. ಪ್ರತೀ ವರ್ಷ ಸುಮಾರು 200 ಟಿ.ಎಂ.ಸಿ ನೀರು ಸಮುದ್ರ ಪಾಲಾಗುವ ಮೂಲಕ ವ್ಯರ್ಥವಾಗುತ್ತಿದೆ. ಹೀಗೆ ವ್ಯರ್ಥವಾಗುವ ನೀರನ್ನು ಕುಡಿಯುವ ಮತ್ತು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮೇಕೆದಾಟು ಯೋಜನೆ ರೂಪಿಸಲಾಗಿದೆ. ವಿದ್ಯುತ್ ಉತ್ಪಾದನೆ ಆದ ಮೇಲೆ ಆ ನೀರು ಕೂಡ ತಮಿಳುನಾಡಿಗೆ ಹೋಗುತ್ತದೆ, ಅದೂ ಅವರಿಗೆ ಇನ್ನೊಂದು ಲಾಭದಾಯಕ ಅಂಶ ಎಂದು ಅವರು ಮೇಕೆದಾಟು ಯೋಜನೆ ಕುರಿತು ವಿವರ ನೀಡಿದರು.

ಮೇಕೆದಾಟು ಯೋಜನೆ ಜಾರಿ ಮಾಡದಂತೆ ತಮಿಳುನಾಡಿನ ಸರ್ಕಾರ ಸುಪ್ರೀಂ ಕೋರ್ಟ್ ಮೋರೆ ಹೋಗಿದ್ದರು ಕೂಡ ನ್ಯಾಯಾಲಯ ಅವರ ಮನವಿಯನ್ನು ಪುರಸ್ಕರಿಸಿಲ್ಲ. ತಮಿಳುನಾಡು ಸರ್ಕಾರ ಕೇವಲ ರಾಜಕೀಯ ಉದ್ದೇಶಕ್ಕಾಗಿ ಯೋಜನೆಗೆ ತಕರಾರು ಮಾಡುತ್ತಿದೆ. ತಮಿಳುನಾಡಿನ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಡ್ಯಾಂ ನಿರ್ಮಾಣಕ್ಕೆ ಅನುಮತಿ ಕೊಡುತ್ತಿಲ್ಲ ಎಂದರು.

ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಜಾರಿ ಮಾಡಬಾರದು ಎಂದು ಧರಣಿ ಕೂತಿದ್ದಾರೆ. ತಮಿಳುನಾಡಿನ ಬಿಜೆಪಿ ಉಸ್ತುವಾರಿ ಸಿ.ಟಿ.ರವಿ  ಅವರು ಕೂಡ ಮೇಕೆದಾಟು ವಿರುದ್ಧವಾಗಿದ್ದಾರೆ. ಹೀಗಾಗಿಯೇ ಯೋಜನೆ ಜಾರಿಯಾಗದೆ ಅನಗತ್ಯ ವಿಳಂಬವಾಗುತ್ತಿದೆ. ಈ ವಿಳಂಬವನ್ನು ವಿರೋಧಿಸಿಯೇ ಕಾಂಗ್ರೆಸ್ ಪಕ್ಷ ಈ ತಿಂಗಳ 9ನೇ ತಾರೀಖಿನಿಂದ ಮೇಕೆದಾಟು ಇಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ ಎಂದರು.

ಹೇಮಾವತಿ, ಕಬಿನಿ, ಕೆಆರ್‌ಎಸ್ ನಲ್ಲಿ ನೀರಿದ್ದರೆ ಮಾತ್ರ ಚಾಮರಾಜನಗರ, ಮೈಸೂರು, ತುಮಕೂರು, ಮಂಡ್ಯ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ನೀರು ಸಿಗೋದು. ಹೀಗಾಗಿ ಮನೆಗೊಂದು ಆಳಿನಂತೆ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.

Leave a Reply