ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾಜ್ಯದಲ್ಲಿ ಹೊಸದಾಗಿ 117 ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಇನ್ನೂರು ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಗೃಹ ಸಚಿವ ಜ್ಞಾನೇಂದ್ರ ವಿಧಾನಸಭೆಗೆ ತಿಳಿಸಿದ್ದಾರೆ
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಆರ್. ನರೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಅವರು,ಪೊಲೀಸ್ ಇಲಾಖೆಯ ಆಧುನೀಕರಣ ಸೇರಿದಂತೆ ವಿವಿಧ ವಲಯಗಳಲ್ಲಿ ಹೆಚ್ಚಿನ ಅನುದಾನ ನಿಗಧಿಪಡಿಸಲಾಗಿದೆ. ಆಧುನಿಕರಣಕ್ಕೆ ಒತ್ತು ನೀಡಿದ್ದು, ವಿವಿಧೆಡೆ ವಿಧಿ ವಿಜ್ಞಾನ ಪ್ರಯೋಗಾಲಯ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಸ್ವಾತಂತ್ರ್ಯ ನಂತರ ಪೊಲೀಸ್ ಇಲಾಖೆಗೆ ಇಷ್ಟೊಂದು ಅನುದಾನ, ಬಲ ತುಂಬಿರುವುದು ಇದೇ ಮೊದಲು. ಪೊಲೀಸ್ ಠಾಣೆಗಳ ನಿರ್ಮಾಣ, ಪೊಲೀಸರಿಗೆ ವಸತಿಗಳ ನಿರ್ಮಾಣ ಕಳೆದ 2 ವರ್ಷಗಳಲ್ಲಿ ಅತಿ ಹೆಚ್ಚಾಗಿ ಆಗುತ್ತಿದೆ. ಹಿಂದೆಂದೂ ಇಷ್ಟೊಂದು ಕಟ್ಟಡಗಳ ನಿರ್ಮಾಣ ಆಗಿರಲಿಲ್ಲ ಎಂದರು.
ಸಿಐಡಿಯಲ್ಲಿ ಸ್ಥಾಪಿಸಲಾಗಿರುವ ಸೈಬರ್ ವಿಭಾಗ ಇಡೀ ದೇಶದಲ್ಲೇ ಮಾದರಿ ಎನಿಸಿದೆ. ಬೇರೆ ರಾಜ್ಯದಿಂದ ಇಲ್ಲಿಗೆ ಬಂದು ತರಬೇತಿ ಪಡೆದು ಹೋಗುತ್ತಿದ್ದಾರೆ ಎಂದರು.
ಇದರ ಜತೆಗೆ ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ರಾಜ್ಯದ ಹಲವೆಡೆ ಆರಂಭಿಸಿದ್ದೇವೆ. ಪ್ರಕರಣಗಳ ತ್ವರಿತ ವಿಚಾರಣೆ ನಡೆಯಲು ಸಾಧ್ಯವಾಗಿದೆ. ಧಾರವಾಡದಲ್ಲಿ ಎಫ್‌ಎಸ್‌ಎಲ್ ವಿಶ್ವವಿದ್ಯಾಲಯಗಳನ್ನೆ ಆರಂಭಿಸಲಾಗಿದೆ. ಈ ಬಜೆಟ್‌ನಲ್ಲೂ ಶಿವಮೊಗ್ಗ, ತುಮಕೂರಿನಲ್ಲಿ ಎಫ್‌ಎಸ್‌ಎಲ್ ಪ್ರಯೋಗಾಲಯಗಳನ್ನು ಸ್ಥಾಪಿಸಲು ಮುಖ್ಯಮಂತ್ರಿಗಳು 10 ಕೋಟಿ ರೂ. ಒದಗಿಸಿದ್ದಾರೆ ಎಂದರು.
ಇತ್ತೀಚೆಗೆ ಹರಿಯಾಣದಲ್ಲಿ ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ರಾಜ್ಯಗಳ ಗೃಹ ಸಚಿವರ ಸಭೆಯಲ್ಲೂ ರಾಜ್ಯದ ಪೊಲೀಸ್ ವ್ಯವಸ್ಥೆ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪೊಲೀಸ್ ಠಾಣೆ ಜತೆಗೆ ಬಂಧಿಖಾನೆಗಳನ್ನು ವಿಸ್ತರಿಸುತ್ತಿದೆ. ಶಿವಮೊಗ್ಗದಲ್ಲಿ ವಿಶೇಷ ರೀತಿಯಲ್ಲಿ ಬಂಧಿಖಾನೆ ನಿರ್ಮಾಣ ನಡೆದಿದೆ. ಹಾಗೆಯೇ ಈಗಿರುವ ಕೆಲ ಜೈಲುಗಳಲ್ಲಿ ಬ್ಯಾರೆಕ್‌ಗಳ ವಿಸ್ತರಣೆ ಕಾರ್ಯವೂ ನಡೆದಿದೆ ಎಂದರು.




