ಬೆಂಗಳೂರು: ರಾಜ್ಯ ಬಿಜೆಪಿಯನ್ನು ರಿಮೋಟ್ ಕಂಟ್ರೋಲ್ ರೀತಿಯಲ್ಲಿ ನಿರ್ವಹಿಸುತ್ತಿರುವ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವಂತೆ ಕಾಂಗ್ರೆಸ್ ಸವಾಲು ಹಾಕಿದೆ.
ಈ ಸಂಬಂಧಪಟ್ಟಂತೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಚುನಾವಣೆ ಎದುರಿಸಲು ಭಯವೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟು ಬಿಜೆಪಿಯಲ್ಲಿನ ಲಿಂಗಾಯತ ಮತ್ತು ಹಿಂದುಳಿದ ನಾಯಕತ್ವವನ್ನು ಮುಗಿಸಿದ ಬಿ.ಎಲ್.ಸಂತೋಷ್ ಅವರಿಗೆ ಚುನಾವಣೆ ಎದುರಿಸಲು ಭಯವೇಕೆ?, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ಧಿಸಲಾಗದ ವ್ಯಕ್ತಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ. ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಿ ಜನಬೆಂಬಲ ಪಡೆದು ಬರಲಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಹಿಂದುತ್ವದ ಮುಖಂಡರಾದ ಪ್ರಮೋದ್ ಮುತಾಲಿಕ್, ಸತ್ಯಜಿತ್ ಸೂರತ್ಕಲ್ ಅವರುಗಳ ಭದ್ರತೆಯನ್ನು ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ. ಹೆಣ ರಾಜಕೀಯಕ್ಕೆ ಹೆಸರುವಾಸಿಯಾದ ಕರ್ನಾಟಕ ಬಿಜೆಪಿ ಇನ್ಯಾರ ಶವಕ್ಕಾಗಿ ಕಾದು ಕುಳಿತಿದೆ?, ಭದ್ರತೆ ವಾಪಸ್ ಪಡೆದಿರುವುದರ ಹಿಂದೆ ಯಾವ ಷಡ್ಯಂತ್ರ ಅಡಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದ ಬಳಿಕ ಬಂಡಾಯವೆದ್ದ ಅನೇಕರು ಅನ್ಯಪಕ್ಷ ಸೇರಿದ್ದಾರೆ. ಟಿಕೆಟ್ ಸಿಗದೇ ಕಾಂಗ್ರೆಸ್ ಸೇರಿರುವ ಜಗದೀಶ ಶೆಟ್ಟರ್ ಅವರು ನನಗೆ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ್ ಅವರೇ ಕಾರಣ ಎಂದು ದೂರಿದ್ದರು.
ಸಂತೋಷ್ ಬಗ್ಗೆ ಟೀಕೆ ಸರಿಯಲ್ಲ ಎಂದು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಆಕ್ಷೇಪಿಸಿದ್ದರು. ನಾಯಕರ ಖಾಸಗಿ ಮಾತುಕತೆ ವೇಳೆ ಮಾತ್ರ ಪ್ರಸ್ತಾಪವಾಗುತ್ತಿದ್ದ ಸಂತೋಷ್ ಹೆಸರು ಮೊದಲ ಬಾರಿಗೆ ರಾಜಕೀಯ ಚರ್ಚೆಯ ಮುನ್ನೆಲೆಗೆ ಬಂದಿದೆ. ಏತನ್ಮಧ್ಯೆ, ಗಿಡ ಬಾಡುತ್ತಿರುವ ಬಗ್ಗೆ ತೇಜಸ್ವಿನಿ ಅನಂತಕುಮಾರ್ ಮಾಡಿರುವ ಟ್ವೀಟ್ ಕೂಡ ಚರ್ಚೆಗೆ ಗ್ರಾಸವಾಗಿತ್ತು.



