ಫ್ಯಾಸಿಸಂ ಅಪಾಯದಿಂದ ಜಗತ್ತನ್ನು ಕಾಪಾಡಿದ ಸ್ಟಾಲಿನ್: ಸುಕುಮಾರ್

5 years ago

ಮಂಗಳೂರು: ಎರಡನೆಯ ಮಹಾಯುದ್ಧದ ಕಾಲಾವಧಿಯಲ್ಲಿ ಫ್ಯಾಸಿಸಂನ ಅಪಾಯದಿಂದ ಕಂಗೆಟ್ಟ ಇಡೀ ಜಗತ್ತನ್ನು ಕಾಪಾಡಿದ ಮಹಾನ್ ನಾಯಕ ಸ್ಟಾಲಿನ್ ಅವರ ನಾಯಕತ್ವವನ್ನು ಇಡೀ ಜಗತ್ತೇ ಕೊಂಡಾಡಿದೆ ಎಂದು CPIM ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ಹೇಳಿದರು.

ಯುದ್ದ ಫ್ಯಾಸಿಸಂ ಅಪಾಯದ ಪ್ರಸ್ತುತ ಸಂದರ್ಭದಲ್ಲಿ ಸ್ಟಾಲಿನ್ ಒಂದು ನೆನಪು ಎಂಬ ವಿಷಯದ ಬಗ್ಗೆ ನಗರದ ವಿಕಾಸ ಕಚೇರಿಯಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು,   ಅತ್ಯಂತ ಕಡು ಬಡತನದಲ್ಲಿ ಶೋಷಿತ ಸಮುದಾಯದಿಂದ ಹುಟ್ಟಿ ಬೆಳೆದ ಸ್ಟಾಲಿನ್ ಎಳೆಯ ಪ್ರಾಯದಲ್ಲೇ ಪ್ರತಿಭಾನ್ವಿತರಾಗಿದ್ದರು ಎಂದರು.

ಕಾರ್ಮಿಕ ವರ್ಗದ ಬಗ್ಗೆ ಸದಾ ಚಿಂತಿತರಾಗಿದ್ದ ಸ್ಟಾಲಿನ್ ಅವರಿಗಾಗಿ ದುಡಿಯಲು ತೀರ್ಮಾನಿಸಿದ್ದರು. ಲೆನಿನ್ ಮರಣಾನಂತರ ರಷ್ಯಾದ ಸಮಾಜವಾದಿ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಲು ಪ್ರಯತ್ನಿಸಿದ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ಪ್ರಬಲವಾಗಿ ನಿಂತು ಸಮಾಜವಾದಿ ವ್ಯವಸ್ಥೆಯನ್ನು ಮುನ್ನಡೆಸಿ ಜಗತ್ತಿಗೆ ಮಾದರಿಯಾದ ಸ್ಟಾಲಿನ್ ನಾಯಕತ್ವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಪೂರಕ ಮಾತುಗಳನ್ನಾಡಿದ ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ, ಸೋವಿಯತ್ ರಷ್ಯಾದಲ್ಲಿ ಕೃಷಿ ಹಾಗೂ ಕೈಗಾರಿಕೆಯಲ್ಲಿ ಅದ್ಭುತ ಸಾಧನೆ ಮಾಡಿ ಸಾಮ್ಯಾಜ್ಯಶಾಹಿ ಅಮೆರಿಕಾಕ್ಕೆ ಸಡ್ಡು ಹೊಡೆದು ನಿಲ್ಲುವಲ್ಲಿ ಮಾಡಿದ ಕೀರ್ತಿ ಸ್ಟಾಲಿನ್ ಗೆ ಸಲ್ಲುತ್ತದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಕಾರ್ಪೋರೇಟರ್ ದಯಾನಂದ ಶೆಟ್ಟಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ರಷ್ಯಾ ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ದ ಸ್ವಪ್ರತಿಷ್ಠೆಗಾಗಿ ನಡೆಯುತ್ತಿದೆಯೇ ಹೊರತು ಜನಸಾಮಾನ್ಯರ ಉತ್ತಮ ಬದುಕಿಗಾಗಿ ಅಲ್ಲ ಎಂಬುದನ್ನು ಅರಿಯಬೇಕಾಗಿದೆ ಎಂದರು.

Leave a Reply