ಜಾತ್ಯತೀತ ಸಿದ್ದಾಂತದ ಹರಿಹಾರ ನಾಡಪ್ರಭು ಕೆಂಪೇಗೌಡರ ಇತಿಹಾಸ ವಿಶ್ವಕ್ಕೆ ಮಾದರಿ: ಸಚಿವ ವಿ.ಸೋಮಣ್ಣ
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ನಾಡಪ್ರಭು ಕೆಂಪೇಗೌಡ 108 ಕಂಚಿನ ಭವ್ಯ ಪ್ರತಿಮೆ ಆನಾವರಣ ಪ್ರಯುಕ್ತ ಡಾ||ರಾಜ್ ಕುಮಾರ್ ವಾರ್ಡ್ ನಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ಮತ್ತು 1000 ಬೈಕ್ ಜಾಥಾ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಶಾಸಕ, ವಸತಿ ಸಚಿವ ವಿ.ಸೋಮಣ್ಣ ಕಳಸಪೂಜೆ ನೇರವೆರಿಸಿ, ಪವಿತ್ರ ಮೃತ್ತಿಕೆ ಸಂಗ್ರಹ ಮಾಡಿ, ಬೈಕ್ ಜಾಥಾಗೆ ಚಾಲನೆ ನೀಡಿದರು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 9 ವಾರ್ಡ್ ಗಳಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ನಾಡಪ್ರಭು ಕೆಂಪೇಗೌಡ ಭವ್ಯ ರಥ ಸಂಚರಿಸಿತು.
ಇದೇ ಸಂದರ್ಭದಲ್ಲಿ ಮಾತಾಡಿದ ವಿ.ಸೋಮಣ್ಣ, ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಚಿಂತಕ, ಅಭಿವೃದ್ಧಿಯ ಹರಿಕಾರ. 500 ವರ್ಷಗಳ ಹಿಂದೆ ಬೆಂಗಳೂರು ನಗರ ನಿರ್ಮಾಣ ಮಾಡಿದರು ಅದರ ಇತಿಹಾಸವನ್ನು ಎಲ್ಲರು ಅರಿಯಬೇಕು ಎಂದರು.
ಇತಿಹಾಸ ಪುರುಷ ನಾಡಪ್ರಭು ಕೆಂಪೇಗೌಡರ ಸಾಧನೆಗಳನ್ನು ರಾಷ್ಟ್ರ ಮತ್ತು ವಿಶ್ವಕ್ಕೆ ಪರಿಚಯಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ನೇತೃತ್ವದಲ್ಲಿ 108 ಅಡಿಯ ಕಂಚಿನ ಭವ್ಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರಮೋದಿ ಲೋಕರ್ಪಣೆ ಮಾಡಲಿದ್ದಾರೆ ಎಂದರು.
ನಾಡಪ್ರಭು ಕೆಂಪೇಗೌಡರು ಜಾತ್ಯತೀತ ಸಿದ್ಧಾಂತದ ಹರಿಕಾರ, ಉದ್ಯೋಗಕ್ಕೆ ತಕ್ಕಂತೆ ಪೇಟೆಗಳನ್ನು ನಿರ್ಮಿಸಿದರು. ಬಳೇಪೇಟೆ, ಅಕ್ಕಿಪೇಟೆ, ಗಾಣಿಗರ ಪೇಟೆ, ಚಿಕ್ಕಪೇಟೆ ಹಲವಾರು ಪೇಟೆಗಳನ್ನು ನಿರ್ಮಿಸಿದರು. ಅವರು ಅಪಾರ ದೈವ ಭಕ್ತರು ಹಾಗೂ ನಗರ ಪರಿಸರ ಮತ್ತು ಮಳೆ ನೀರು ಪೋಲಾಗದಂತೆ ತಡೆಯಲು 200ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದರು ಎಂದರು.
ಅದಿಚುಂಚನಗಿರಿಮಠ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧನಾಥ ಮಹಾ ಸ್ವಾಮೀಜಿ ಮತ್ತು ಇಂದಿನ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿರವರ ಆಶೀರ್ವಾದದಿಂದ ನಾಡಪ್ರಭು ಕೆಂಪೇಗೌಡ ಮೃತ್ತಿಕ ಸಂಗ್ರಹ ರಥಯಾತ್ರೆ ಸಾಗುತ್ತಿದೆ. ನಾಡಿನ ಎಲ್ಲ ಜಿಲ್ಲೆಗಳು, ಬೆಂಗಳೂರುನಗರ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಪವಿತ್ರ ಮೃತ್ತಿಕೆ ಸಂಗ್ರಹ ಮಾಡಲಾಗುತ್ತಿದೆ. ನಾಡಪ್ರಭು ಕೆಂಪೇಗೌಡರ ರಥಯಾತ್ರೆ ಮತ್ತು ಪ್ರತಿಮೆ ಉದ್ಘಾಟನೆ ನಾಡಿನ ಆರೂವರೆ ಕೋಟಿ ಜನರು ಪಾಲ್ಗೊಳ್ಳಬೇಕು ಎಂದರು.
ಜಂಟಿ ಆಯುಕ್ತ ಯೋಗೇಶ್, ಗೋವಿಂದರಾಜನಗರದ ಮುಖಂಡ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಗಂಗಭೈರಯ್ಯ, ಕೆ.ಉಮೇಶ್ ಶೆಟ್ಟಿ, ವಾಗೇಶ್, ದಾಸೇಗೌಡ, ರಾಮಪ್ಪ, ಜಯರತ್ನ, ರಾಜಪ್ಪ, ಶ್ರೀಧರ್ ಮೊದಲಾದವರು ಪಾಲ್ಗೊಂಡಿದ್ದರು.



