ಟಿಪ್ಪು ಸುಲ್ತಾನ್ ಚರಿತ್ರೆಯನ್ನು ತಿರುಚುತ್ತಿರುವ ವಿಷಜಂತುಗಳು

3 years ago

ಕಳೆದ ಮೂರು ವರ್ಷಗಳಿಂದ ಮೈಸೂರು ರಂಗಾಯಣಕ್ಕೆ ವಿಷಜಂತುವಿನಂತೆ ವಕ್ಕರಿಸಿಕೊಂಡಿರುವ ಅಡ್ಯಂಡ ಕಾರ್ಯಪ್ಪ ಎಂಬ ಕ್ರಿಮಿ ಈ ವರ್ಷದ ಡಿಸಂಬರ್ ಗೆ ಅಧಿಕಾರದಿಂದ ತೊಲಗಬೇಕು. ಅದಕ್ಕೆ ಮುನ್ನ’ ಟಿಪ್ಪುವಿನ ನಿಜ ಕನಸುಗಳು’ ಹೆಸರಿನಲ್ಲಿ ಚರಿತ್ರೆಯನ್ನು ತಿರುಚಿ ನಾಟಕ ರಚಿಸಿ ನಾಡಿನುದ್ದಕ್ಕೂ ನೂರು ಪ್ರದರ್ಶಗಳನ್ನು ಮಾಡಲು ಹೊರಟಿದ್ದಾನೆ. ಇದೇ ನವಂಬರ್ 13 ರಂದು ಎಸ್.ಎಲ್. ಬೈರಪ್ಪನಿಂದ ಬಿಡುಗಡೆ, ಪಠ್ಯ ಪುಸ್ತಕಗಳನ್ನು ಗಬ್ಬೇಳಿಸಿ ಗಠಾರ ಸೇರಿಕೊಂಡಿದ್ದ ವಕ್ರತೀರ್ಥನಿಂದ ಕೃತಿ ಕುರಿತು ಮಾತು. ಹೆಂಗ್ ಪುಂಗ್ಲಿ ಹೊರತು ಪಡಿಸಿ, ನಾಡಿನ ಎಲ್ಲಾ ಘನಘೋರ ವಿಷಜಂತುಗಳು ಒಂದೆಡೆ ಜಮೆಯಾಗಲಿವೆ.

ಪರ್ಷಿಯನ್ ಮೂಲದ ಟಿಪ್ಪುವಿನ ಇತಿಹಾಸವನ್ನು ನಾನು ಎಂ.ಚಿದಾನಂದಮೂರ್ತಿಯವರಿಂದ ಪಡೆದು ನಾಟಕ ರಚಿಸಿದ್ದೀನಿ ಎಂದು ಹೇಳುವ ಈ ಅವಿವೇಕಿ ಕಾರ್ಯಪ್ಪ, ತಿ.ತಾ. ಶರ್ಮಾ ಮತ್ತು ವೀರಕೇಸರಿ ಸೀತಾರಾಮಶಾಸ್ತ್ರಿಯವರ ಕೃತಿಗಳನ್ನು ಹಾಗೂ ದಿವಾನ್ ಪೂರ್ಣಯ್ಯನವರ ಸಮಗ್ರ ಇತಿಹಾಸವನ್ನು ಏಕೆ ನೋಡಲಿಲ್ಲ? ಅವರುಗಳು ಮುಸ್ಲಿಂ ಸಮುದಾಯದವರಲ್ಲ, ಎಲ್ಲರೂ ಬ್ರಾಹ್ಮಣ ಸಮುದಾಯದಿಂದ ಬಂದವರು. ಈತನ ದೃಷ್ಟಿಕೋನದಲ್ಲಿ ಅವರು ಚರಿತ್ರೆಯನ್ನು ತಿರುಚಿದವರು. ಈತನದು ಮಾತ್ರ ನೈಜ ಇತಿಹಾಸ.
ಕರ್ನಾಟಕದಲ್ಲಿ ಜನಿಸಿ, ಇಲ್ಲಿನ ಶಾಲೆಗಳಲ್ಲಿ ಓದಿದ ಪ್ರತಿಯೊಬ್ಬ ತಮಿಳು, ತೆಲುಗು , ಮರಾಠಿ ಅಥವಾ ಮಸ್ಲಿಂ ಸಮುದಾಯದ ವ್ಯಕ್ತಿ ಸಂವಿಧಾನ ಹಾಗೂ ಕಾನೂನಿನ ಅನ್ವಯ ಕನ್ನಡಿಗನಾಗಿದ್ದು ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಪಡೆಯುವ ಹಕ್ಕನು ಹೊಂದಿದ್ದಾರೆ. ಅದೇ ಅರೀತಿ ಉದ್ಯೋಗದಲ್ಲಿದ್ದಾರೆ. ಕನ್ನಡಿಗರು ಸಹ ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಉದ್ಯೋಗ ಪಡೆದಿದ್ದಾರೆ. ಟಿಪ್ಪುವಿನದು ಪರ್ಷಿಯನ್ ಮೂಲ ಎಂಬ ಮಾತ್ರಕ್ಕೆ ದೇವನಳ್ಳಿಯಲ್ಲಿ ಜನಿಸಿದ ಟಿಪ್ಪು ಮತ್ತು ದೊಡ್ಡಬಳ್ಳಾಪುರದಲ್ಲಿ ಜನಿಸಿದ ಹೈದರಾಲಿ ಇವರುಗಳು ಕನ್ನಡಿಗರಲ್ಲವೆ? ( ಕೋಲಾರದ ಬೂದಿಕೋಟೆಯಲ್ಲಿ ಹೈದರಾಲಿ ಜನಿಸಿದ ಎಂಬ ಮಾಹಿತಿ ಕೂಡ ಇದೆ) ಸದಾ ಟಿಪ್ಪುವಿನ ಕುರಿತಾಗಿ ವಿಷ ಕಕ್ಕುವ ಅಯೋಗ್ಯರು ಒಮ್ಮೆ ಟಿಪ್ಪುವಿನ ಮೂಲ ಇತಿಹಾಸವನ್ನು ಗಂಭೀರವಾಗಿ ಕುಳಿತು ಓದುವುದು ಒಳಿತು.

ಭಾರತದ ಉತ್ತರ ಭಾಗದಲ್ಲಿ ಮೊಗಲರು ಆಳ್ವಿಕೆಯಲ್ಲಿದ್ದ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಗೋಲ್ಕಂಡಾದಲ್ಲಿ ( ಈಗಿನ ಹೈದರಾಬಾದ್) ಕುತುಬ್ ಶಾಹಿ ಮನೆತನ, ಬೀದರ್ ಮತ್ತು ಗುಲ್ಬರ್ಗಾದಲ್ಲಿ ಬಹುಮನಿ ಮನೆತನ ಹಾಗೂ ಬಿಜಾಪುರದಲ್ಲಿ ಆದಿಲಾ ಶಾಹಿ ಮನೆತನಗಳು ಸಾಮ್ರಾಜ್ಯಗಳನ್ನು ನಿರ್ಮಿಸಿಕೊಂಡು ಆಳ್ವಿಕೆ ನಡೆಸುತ್ತಿದ್ದವು. ಹೈದರಾಲಿಯ ತಾತ ಅಥವಾ ಟಿಪ್ಪುವಿನ ಮುತ್ತಜ್ಜ ಶೇಖ್ ವಾಲಿ ಮಹಮ್ಮದ್ ಎಂಬಾತನು ಮಹಮ್ಮದ್ ಆಲಿ ಎಂಬ ತನ್ನ ಪುತ್ರನೊಡನೆ 1625 ರಲ್ಲಿ ದೆಹಲಿಯಿಂದ ಬಿಜಾಪುರದ ಆದಿಲ್ ಶಾಹಿ ದೊರೆಯ ಬಳಿಗೆ ವಲಸೆ ಬಂದು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಶೇಖ್ ಆಲಿಯು ತನ್ನ ಪುತ್ರ ಮಹಮ್ಮದ್ ಆಲಿಗೆ ಗುಲ್ಬರ್ಗಾ ಬಂಡೆ ನವಾಜ್ ದರ್ಗಾದಲ್ಲಿ ಸೇವೆ ಸಲ್ಲಿಸುತ್ತಿದ್ದ ಸೇವಕನೊಬ್ಬನ ಪುತ್ರಿಯನ್ನು ತಂದು ವಿವಾಹ ಮಾಡಿದನು. ಇದೇ ಸಮಯಕ್ಕೆ ಮೊಗಲರು ಬಿಜಾಪುರದ ಮೇಲೆ ದಾಳಿ ಮಾಡಿದಾಗ ಮಹಮ್ಮದಾಲಿಯು ಬಿಜಾಪುರವನ್ನು ತ್ಯೆಜಿಸಿ, ಈಗಿನ ತುಮಕೂರು ಜಿಲ್ಲೆಯ ಸಿರಾ ಪಟ್ಟಣಕ್ಕೆ ಬಂದು ಅಲ್ಲಿನ ನವಾಬನ ಬಳಿ ಇದ್ದುಕೊಂಡು, ದೊಡ್ಡ ಬಳ್ಳಾಪುರದ ಕೋಟೆಯ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದನು. ದೊಡ್ಡಬಳ್ಳಾಪುರದಲ್ಲಿ 1720 ರಲ್ಲಿ ಹೈದರಾಲಿ ಜನಿಸಿದನು. ಹೈದರಾಲಿಯು ಎರಡು ವರ್ಷದ ಮಗುವಾಗಿದ್ದಾಗ ಆತನ ತಂದೆ ಫತೆ ಮಹಮ್ಮದಾಲಿಯು ನಿಧನ ಹೊಂದಿದಾಗ, ಹೈದರಾಲಿಯು ತಾಯಿಯು ಮಗುವಿನ ಜೊತೆ ಶ್ರೀರಂಗಪಟ್ಟಣಕ್ಕೆ ಬಂದು ಮೈದುನನ ( ಹೈದರಾಲಿಯ ಚಿಕ್ಕಪ್ಪ} ಆಶ್ರಯ ಪಡೆದಳು. ಆತ ಒಡೆಯರ್ ಸಂಸ್ಥಾನದಲ್ಲಿ ಸೈನಿಕನಾಗಿದ್ದನು.

ಹೈದರಾಲಿಯೂ ಸಹ ಒಡೆಯರ್ ಸಂಸ್ಥಾನದಲ್ಲಿ ಓರ್ವ ಸಿಪಾಯಿಯಾಗಿ, ದಂಡನಾಯಕನಾಗಿ ಮೇಲೆ ಬಂದವನು. ಕ್ರಿ.ಶ. 1750 ರ ನವಂಬರ್ 20 ರಂದು ಟಿಪ್ಪುಸುಲ್ತಾನ್ ಬೆಂಗಳೂರಿನ ದೇವನಹಳ್ಳಿಯಲ್ಲಿ ಜನಿಸಿದನು. ಟಿಪ್ಪುವಿನ ತಾಯಿ ಫಾತಿಮಾ ಅಥವಾ ಫಕರ್ ಉನ್ನೀಸಾ ಆಂಧ್ರ ಪ್ರದೇಶದ ಕಡಪ್ಪಾ ಪಟ್ಟಣದ ಉಸ್ತುವಾರಿ ಹೊತ್ತಿದ್ದ ಸರದಾರನೊಬ್ಬನ ಪುತ್ರಿ. ಹೈದರಾಲಿಯು ಮರಾಠರಿಂದ ಮೈಸೂರು ಅನ್ನು ಬಿಡುಗೊಳಿಸಿದ ಕಾರಣಕ್ಕಾಗಿ ಆತನಿಗೆ ಖಾನ್ ಎಂಬ ಬಿರುದು ನೀಡಿ ಆತನನ್ನು ದಂಡನಾಯಕನ ಪದವಿಗೆ ಒಡೆಯರ್ ದೊರೆಗಳು ಬಡ್ತಿ ನೀಡಿದ್ದರು. ಟಿಪ್ಪುವಿನ ತಾಯಿ ಗರ್ಭಿಣಿಯಾಗಿದ್ದಾಗ, ಹೈದರಾಲಿಯು ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ಟಿಪ್ಪು ಮಸ್ತಾನ್ ಔಲಿಯ ಎಂಬ ಪ್ರಾರ್ಥನಾ ಮಂದಿರದಲ್ಲಿ ಪೂಜೆ ಸಲ್ಲಿಸಿ, ಗಂಡು ಮಗು ಜನಿಸಿದರೆ ಇದೇ ಹೆಸರನ್ನು ನಾಮಕರಣ ಮಾಡುತ್ತೇನೆ ಎಂದು ಹರಕೆ ಹೊತ್ತಿದ್ದನು. ಅದರಂತೆ ಗಂಡು ಮಗುವಿಗೆ ಟಿಪ್ಪು ಎಂದು ನಾಮಕರಣ ಮಾಡಿದನು.
ಟಿಪ್ಪು ಮತ್ತು ಹೈದರಾಲಿ ಕುರಿತು ಸಮಗ್ರ ಇತಿಹಾಸ ಭಾರತದ ಇತಿಹಾಸದ ದಾಖಲೆಯ ಪುಟಗಳಲ್ಲಿ ಯಥೇಚ್ಚವಾಗಿ ಇರುವಾಗ ಇವರನ್ನು ಪರ್ಷಿಯನ್ನರು ಎಂದು ಕರೆಯಲು ಸಾಧ್ಯವೆ? ಹೈದರಾಲಿಯ ತಾತ ಶೇಖ್ ವಾಲಿ ಮಹಮ್ಮದ್ ಸಮುದ್ರ ಮಾರ್ಗವಾಗಿ ಭಾರತಕ್ಕೆ ಬಂದು ಇಲ್ಲಿನ ನವಾಯತ್ ಸಮುದಾಯದ ಹೆಣ್ಣು ಮಗಳನ್ನು ವಿವಾಹವಾಗಿದ್ದನು. ವಾಸ್ತವವಾಗಿ ಬಿಜಾಪುರದ ದೊರೆ ಆದಿಲ್ ಶಾಹಿ ಪರ್ಷಿಯಾದ ರಾಜಮನೆತನಕ್ಕೆ ಸೇರಿದವನು. ತಂದೆಯ ನಿಧನಾ ನಂತರ ಆತನ ಮಲತಾಯಿ ತನ್ನ ಪುತ್ರನಿಗೆ ಪಟ್ಟ ಕಟ್ಟುವ ಉದ್ದೇಶದಿಂದ ಆದಿಲ್ ಶಾಹಿಯನ್ನು ಕೊಲ್ಲಲು ಸಂಚು ರೂಪಿಸಿದಾಗ ತಪ್ಪಿಸಿಕೊಂಡು ಭಾರತಕ್ಕೆ ಬಂದ ಆದಿಲ್ ಶಾಹಿಯು ಓರ್ವ ಸೈನಿಕನಾಗಿ ಮುಸ್ಲಿಂ ದೊರೆಗಳ ಬಳಿ ಸೇವೆ ಸಲ್ಲಿಸಿ ಅಂತಿಮವಾಗಿ ಬಿಜಾಪುರದ ದೊರೆಯಾದನು.

ಟಿಪ್ಪು ಸುಲ್ತಾನ್ ಆಡಳಿತದಲ್ಲಿ ಪರ್ಷಿಯನ್ ಆಡಳಿತ ಭಾಷೆಯಾಗಿತ್ತು ಎನ್ನುವ ಈ ಮುಠಾಳರಿಗೆ ಆತನ ಸಂವಹನ ಭಾಷೆ ಪರ್ಷಿಯನ್ ಆಗಿತ್ತೇ ಹೊರತು, ಸ್ಥಳಿಯ ಆಡಳಿತದಲ್ಲಿ ಕನ್ನಡ ಪ್ರಧಾನ ಭಾಷೆಯಾಗಿತ್ತು ಎಂಬ ಕನಿಷ್ಠ ವಿವೇಕವೂ ಇಲ್ಲವಾಗಿದೆ. 1799 ರ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಮಡಿದ ನಂತರ ಬ್ರಿಟೀಷರು 1801 ರಲ್ಲಿ ಬುಕಾನನ್ ಮೂಲಕ ಟಿಪ್ಪು ಸಾಮ್ರಾಜ್ಯದ ಸ್ಥಿತಿ ಗತಿಗಳನ್ನು ದಾಖಲಿಸಿದ್ದಾರೆ. ಬುಕಾನನ್ ವರದಿಯನ್ನು ಬೆಂಗಳೂರಿನ ಉಪನ್ಯಾಸಕಿ ಶೈಲಜಾ ಅವರ ಕನ್ನಡ ಕ್ಕೆ ತಂದಿದ್ದಾರೆ. ( ಕುವೆಂಪು ಭಾಷಾ ಭಾರತಿ ಪ್ರಕಟಣೆ) ತುಮಕೂರು ಮತ್ತು ಸಿರಾ ಪ್ರದೇಶದ ವರದಿಗಳನ್ನು ಪ್ರೊ.ಎಂ.ಜಿ. ರಂಗಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ವರದಿಗಳನ್ನು ಓದುತ್ತಿದ್ದರೆ, ನಮಗೆ ಟಿಪ್ಪುವಿನ ಹೈದಯ ವೈಶಾಲ್ಯತೆಯ ಅರಿವಾಗುತ್ತದೆ.

ಭಾರತದ ಅಗ್ರಮಾನ್ಯ ವೈರಿ ಎಂದು ಪರಿಗಣಿಸಿದ್ದ ಬ್ರಿಟೀಷರು ಟಿಪ್ಪು ನಿಧನಾ ನಂತರ ಆತನ ಆಡಳಿತ ವೈಖರಿಯ ಬಗ್ಗೆ ಮನಸಾರೆ ಹೊಗಳಿರುವುದಲ್ಲದೆ, ಕೆಲವು ಅಂಶಗಳನ್ನು ತಾವು ಅಳವಡಿಸಿಕೊಂಡಿರುವ ಸಂಗತಿಯನ್ನು ದಾಖಲಿಸಿದ್ದಾರೆ. 1799 ರ ಮೇ 6ರಂದು ಟಿಪ್ಪುವಿನ ಶವಕ್ಕೆ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಇಂದಿನ ಶ್ರೀರಂಗಪಟ್ಟಣದ ಶ್ರೀ ರಂಗನಾಥ ದೇವಾಲಯದ ಮುಂಭಾಗದ ಅರಮನೆಯಿಂದ ಐದು ಕಿಲೊಮೀಟರ್ ದೂರವಿರುವ ಗಂಜಾಂ ನ ಹೈದರಾಲಿ ಸಮಾಧಿ ಇರುವ ಸ್ಥಳಕ್ಕೆ ಟಿಪ್ಪುವಿನ ಪಾರ್ಥಿವ ಶರೀರವನ್ನು ಕೊಂಡೊಯ್ಯುವಾಗ ರಸ್ತೆಯ ಎರಡು ಬದಿಯಲ್ಲಿ ಸಾಲಾಗಿ ನಿಂತ ಸಾವಿರಾರು ಬ್ರಿಟೀಷ್ ಸೈನಿಕರು ಅಂತಿಮ ಗೌರವ ಸಲ್ಲಿಸಿದ್ದಾರೆ. ಭಾರತದ ಯಾವೊಬ್ಬ ದೊರೆಗೆ ತೋರಿಸದ ಗೌರವವನ್ನು ಬ್ರಿಟೀಷರು ಟಿಪ್ಪು ಸುಲ್ತಾನ್ ಗೆ ತೋರಿಸಿದ್ದಾರೆ. ಆದರೆ, ನಮ್ಮ ಕರ್ನಾಟಕದ ಮೂಲಭೂತವಾದಿಗಳಿಗೆ ಟಿಪ್ಪು ಸುಲ್ತಾನ್ ಎಂದರೆ ಮೂಲವ್ಯಾಧಿ ರೋಗವಾಗಿದೆ. 1792 ರಿಂದ 1800 ರ ಸೆಪ್ಟಂಬರ್ ವರೆಗೆ ಇಂಗ್ಲೆಡ್ ಮತ್ತು ಅಮೇರಿಕಾದ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದು, ಎಲ್ಲವೂ ಇಂದಿಗೂ ಕೂಡ ಲಭ್ಯವಾಗಿವೆ.

ವಸ್ತುಸ್ಥಿತಿ ಹೀಗಿರುವಾಗ ಟಿಪ್ಪುವಿನ ಇತಿಹಾಸವನ್ನು ತಿರುಚಿ ಕೋಮುದ್ವೇಷ ಹರಡಲು ಮುಂದಾಗಿರುವ ಆಡ್ಯಂಡ ಕಾರ್ಯಪ್ಪನ ವಿರುದ್ಧ ಕೂಡಲೇ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಕ್ರಮಿನಲ್ ಮೊಕದ್ದಮೆ ಹೂಡಬೇಕಿದೆ. ಪ್ರಜಾವಾಣಿ ಪತ್ರಿಕೆಯ ವಾಚಕರ ವಾಣಿ ವಿಭಾಗದಲ್ಲಿ ಜಂಟಿ ಹೇಳಿಕೆಯ ಪತ್ರ ಬರೆದ ಮಾತ್ರಕ್ಕೆ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ, ಜೊತೆಗೆ ಬಗೆ ಹರಿದಿಲ್ಲ. ಟಿಪ್ಪು ಸುಲ್ತಾನ್ ಕುರಿತಾದ ದಾಖಲೆಗಳನ್ನು ನಾನು ಒದಗಿಸಲು ಸಿದ್ಧನಿದ್ದೇನೆ. ದಯಮಾಡಿ ರಾಜಕೀಯ ಪಕ್ಷಗಳಾಗಲಿ, ಜನಪರ ಸಂಘಟನೆಗಳಾಗಲಿ ಸುಪ್ರೀಂ ಕೋರ್ಟಿನ ಇತ್ತೀಚೆಗಿನ ಆದೇಶದ ಅನ್ವಯ ಕೋಮುವಾದಿಗಳಿಗೆ ನ್ಯಾಯಾಲಯದ ಮೂಲಕ ಪಾಠ ಕಲಿಸಬೇಕಿದೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply