ಸಮಾಜ ಪರಿವರ್ತಕ ಪ್ರವಾದಿ

3 years ago

#Muhammad #Islam #Socialreformer #prophet #yogeshmaster

ಎಲ್ಲವೂ ಚೆನ್ನಾಗಿದ್ದರೆ, ಎಲ್ಲರೂ ನೆಮ್ಮದಿಯಿಂದ ಇದ್ದರೆ ಯಾವ ಪ್ರವಾದಿಗಳೂ, ಸಮಾಜ ಸುಧಾರಕರೂ, ಮಾರ್ಗಪ್ರವರ್ತಕರೂ ರೂಪುಗೊಳ್ಳುತ್ತಲೇ ಇರಲಿಲ್ಲ. ಯಾರೋ ಒಂದಿಬ್ಬರಿಗೆ ಯಾರೋ ಒಂದಿಬ್ಬರು ತೊಂದರೆಗೀಡು ಮಾಡುತ್ತಿದ್ದಾರೆ. ಆದರೆ ದೊಡ್ಡ ಸಮೂಹ ಮತ್ತು ಸಮಾಜ ಸುರಕ್ಷಿತವಾಗಿದೆ, ನೆಮ್ಮದಿಯ ಜೀವನ ನಡೆಸುತ್ತಿದೆ ಎಂದರೂ ಪ್ರವಾದಿಗಳ, ಮಾರ್ಗದರ್ಶಕರ ಪ್ರಮೇಯ ಒದಗುತ್ತಿರಲಿಲ್ಲ. ಅಂತಹ ರಕ್ಷಕನ, ಪ್ರವಾದಿಯ ಪರಿಕಲ್ಪನೆಯ ಪ್ರತಿಮಾ ರೂಪಕವಾಗಿ ಕೃಷ್ಣ ಭಗವತ್ಗೀತೆಯಲ್ಲಿ ಕುಗ್ಗಿರುವವರಿಗೆ ಭರವಸೆ ನೀಡುತ್ತಾನೆ ಮತ್ತು ಭಯಗೊಂಡವರಿಗೆ ಅಭಯ ನೀಡುತ್ತಾನೆ.

ಎಂದೆಂದಿಳಿತಕೆ ಸಲ್ವುದೋ ಧರ್ಮವು ಅಧರ್ಮಕಪ್ಪುದೊ ಏಳಿಗೆಯು
ಆಯಾ ಸಮಯದಿ ನನ್ನನು ನಾನೇ ಸೃಷ್ಟಿಸಿಕೊಂಬೆನು ಭಾರತನೆ.
ಸಾಧುಜನರ ಸಂರಕ್ಷಣೆ ಮಾಡಲು ನಾಶವ ಗೈಯಲು ದುಷ್ಟರನು
ಧರ್ಮವನಳ್ಳಾಡದವೊಲು ನಿಲ್ಲಿಸೆ ಯುಗಯುಗದಲ್ಲೂ ಹುಟ್ಟುವೆನು. (ಭಗವದ್ಗೀತೆ / ಪುತಿನ: 4:7-8)

ಯಾವಾಗ, ಎಲ್ಲಿ ದುರ್ಬಲರು, ಶಾಂತ ಸ್ವಭಾವದವರು, ಯಾರಿಗೂ ಕೇಡನ್ನು ಬಯಸದವರು ತಾವೇ ಬಲವುಳ್ಳವರ ದೌರ್ಜನ್ಯಕ್ಕೆ ಒಳಗಾದಾಗ, ನೆಮ್ಮದಿ ಕಳೆದುಕೊಂಡು ಅಶಾಂತಿಯಲ್ಲಿ ಇರುವಾಗ, ಒಳಿತನೇ ಮಾಡುವವರಿಗೆ ಕೇಡುಂಟು ಮಾಡುವ ಜನರು ಮೆರೆಯುವಾಗ ರಕ್ಷಕ, ಮಾರ್ಗಪ್ರವರ್ತಕ, ಸುಧಾರಕ ಬರುತ್ತಿರುತ್ತಾನೆ ಎಂಬುದು ಒಂದು ಸಾಂಪ್ರದಾಯಿಕ ಭರವಸೆ. ಬೇರೆ ಬೇರೆ ದೇಶಗಳಲ್ಲಿ, ಕಾಲಗಳಲ್ಲಿ, ಭಾಷೆಗಳಲ್ಲಿ ನಡೆದಿರುವಂತಹ ವಿದ್ಯಮಾನಗಳಿಗೆ ಈ ಭರವಸೆಯ ವಿಶೇಷಣೆಯನ್ನು ಹಚ್ಚಲಾಗಿದೆ.

ಭಾರತದಲ್ಲಿ ವೈದಿಕಾಚರಣೆಗಳು ಸಮಾಜವನ್ನು ಗಾಢವಾಗಿ ಪ್ರಭಾವಗೊಳಿಸಿದ್ದಾಗ, ವರ್ಣ, ಜಾತಿ ಮತ್ತು ಅಸ್ಪೃಶ್ಯತೆಯ ಪ್ರಭಾವಗಳು ತೀವ್ರವಾಗಿರುವಾಗ, ಮನುಷ್ಯರನ್ನು ಪರಸ್ಪರ ಘನತೆ ಮತ್ತು ಕರುಣೆಯಿಂದ ಕಾಣದೇ ವಿವಿಧ ಶ್ರೇಷ್ಠತೆಯ ಕಾರಣಗಳಿಂದ ಶೋಷಣೆಗಳಾಗುತ್ತಿದ್ದಾಗಲೇ ಬುದ್ಧನೆದ್ದದ್ದು. ಸಾಮಾಜಿಕವಾಗಿ ಉಂಟಾಗಿರುವ ಅಸಮಾನತೆಯ ಅಸಹನೆಯಿಂದ, ವ್ಯಕ್ತಿಗತವಾಗಿ ಹೊಂದಿರುವಂತಹ ಅತೃಪ್ತಿಯ ಅಸಮಾಧಾನ ಉಂಟು ಮಾಡಿರುವ ಅಶಾಂತಿಯನ್ನು ನೀಗಿಸಿಕೊಳ್ಳಲು ಹಾತೊರೆಯುತ್ತಿದ್ದಾಗ ಮಾರ್ಗ ಪ್ರವರ್ತಕನಾಗಿ ಬಂದ ಬುದ್ಧನ ಕಡೆಗೆ ಶಾಂತಿಗಾಗಿ ನೋಡಿದರು.

ಅಂತವೇ ಅಸಹನೆ, ಅಸಹಕಾರ ಮತ್ತು ಅಸಮಾನತೆಯ ಸಮಾಜವು ಮುಂದುವರಿದಾಗ ಹನ್ನೆರಡನೆಯ ಶತಮಾನದಲ್ಲಿ #ಕರ್ನಾಟಕ ದಲ್ಲಿ #ಬಸವಣ್ಣ #ಸಮಾಜೋಧಾರ್ಮಿಕ ಆಂದೋಲನವನ್ನು ಪ್ರಾರಂಭಿಸಿ, ಮಾದರಿ ಸಮಾಜದ ಪ್ರಯೋಗವೊಂದನ್ನು ಮುಂದಿಟ್ಟರು.

ಪಂಜಾಬ್ ಮತ್ತು ಹರಿಯಾಣಗಳ ಪ್ರಾಂತ್ಯಗಳಲ್ಲೂ ಇಂತದ್ದೇ ಕತೆ ಇತ್ತು. ತಳವರ್ಗದವರನ್ನು, ಹೆಂಗಸರನ್ನು ಮತ್ತು ದುರ್ಬಲರನ್ನು ಶೋಷಿಸುವಂತಹ ಮೇಲ್ವರ್ಗದ ಧಾರ್ಮಿಕರು, ಭೂಮಾಲಿಕರು, ಜೊತೆಗೆ ಆಳುವ ರಾಜರೇ ಕಟುಕರಾಗಿದ್ದರು. ಅಲ್ಲಿ #ಗುರುನಾನಕ್ #ಸಮಾನತೆ #ನ್ಯಾಯಪರತೆ #ಸೌಹಾರ್ದ #ಪ್ರೇಮ #ವ್ಯಕ್ತಿಗೌರವ ಗಳನ್ನು ಪ್ರತಿಪಾದಿಸಲು #ಸಮಾಜೋಧಾರ್ಮಿಕ ಆಂದೋಲನವನ್ನು ರೂಪಿಸಬೇಕಾಯಿತು.

ಇಸ್ರೇಲಿನಲ್ಲಿ ಸಾಮಾನ್ಯ ಜನರನ್ನು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಶೋಷಿಸುವ ರೋಮನ್ ಆಳುವ ವರ್ಗದ ಜೊತೆಗೆ #ಯೆಹೂದಿ ಪುರೋಹಿತ ವರ್ಗವು ಸೇರಿಕೊಂಡಿತು. ಅವರು ದೇವಾಲಯಗಳನ್ನೇ ತಮ್ಮ #ರಾಜಕೀಯ ಕೇಂದ್ರವಾಗಿಸಿಕೊಂಡಿದ್ದರು, ದೇವಾಲಯವೆಂಬುದು ವ್ಯವಹಾರದ, ವ್ಯಾಪಾರದ ಸ್ಥಳವಾಗಿ ಅದರ #ಆಧ್ಯಾತ್ಮಿಕ ಅರ್ಥವನ್ನೇ ಕಳೆದುಕೊಂಡಿತ್ತು. ಅಲ್ಲಿಯೂ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದ ಹಲವು ಸಮುದಾಯಗಳಿದ್ದವು. ಯಹೂದಿ ಪುರೋಹಿತರ ವರ್ಗವು ದೇವರ ಪರಿಕಲ್ಪನೆಯನ್ನು ಬೆದರಿಸುವ ಸಾಧನವಾಗಿಟ್ಟುಕೊಂಡಿದ್ದರು. ಅಂತಹ ಭೀತಿಯ ದೇವರ ಪರಿಕಲ್ಪನೆಯನ್ನು ಪ್ರೀತಿಯ ದೇವರನ್ನಾಗಿಸಿ, ಸರ್ವಾಧಿಕಾರಿಯ ಪರಿಕಲ್ಪನೆಯನ್ನು ಮಮತೆಯ ತಂದೆಗೆ ಬದಲಾಯಿಸಿದ್ದು #ಯೇಸುಕ್ರಿಸ್ತ . ಹೀಗೆ ಮನುಷ್ಯ ಮನುಷ್ಯರ ನಡುವೆ ಸೌಹಾರ್ದ, ಪ್ರೀತಿ, ಸಹಕಾರ, ಕಾರುಣ್ಯ, ಸಮಾನತೆಗಳು ಬರಗೆಟ್ಟಾಗೆಲ್ಲಾ ಬದುಕಿನ ದಿಕ್ಕನ್ನು ಬದಲಿಸಿ, ಉತ್ತಮ ಬಾಳ್ವೆಯ ತಳಹದಿಯನ್ನು ನೀಡಲು ಅನೇಕಾನೇಕ ಹೃದಯವಂತ ಮತ್ತು ವಿಚಾರವಂತ ವಿವೇಕಿ ಮನುಷ್ಯರು ತಾವೇ ಕಣಕ್ಕಿಳಿದರು.

ಅಂತಹ ಮಹಾಂತರಲ್ಲೊಬ್ಬರು #ಪ್ರವಾದಿ #ಮುಹಮ್ಮದ್. #ಅರಬ್ ಎಲ್ಲಾ ವಿಷಯಗಳಲ್ಲಿಯೂ ಅಜ್ಞಾನದಿಂದ ಬಸವಳಲಿದ್ದ ಕಾಲವದು. ಬಲವಂತನಿಗಷ್ಟೇ ಗೆಲುವು, ಹಣವಂತನಿಗಷ್ಟೇ ನಲಿವು ಎನ್ನುವ ಬುಡಕಟ್ಟಿನ ಗಣಗಳದ್ದೇ ಯಜಮಾನಿಕೆ. ಜೂಜು, ಕುಡಿತ, ದರ್ಪ, ದಬ್ಬಾಳಿಕೆ, ವ್ಯಭಿಚಾರ ಹೆಚ್ಚು ಮಾಡುವವನು ಹೆಚ್ಚು ಬಲಾಢ್ಯ.

ವಿಚಾರ ಸೊನ್ನೆ, ಪ್ರತಿಕಾರವೇ ಹೆಮ್ಮೆ. ಕೊಲೆ ಸುಲಿಗೆಗಳಂತೂ ಯಾರ ನಿಯಂತ್ರಣದಲ್ಲೂ ಇಲ್ಲ. ದಾಸ ದಾಸಿಯರಾಗಿರುವವರನ್ನು ಮನುಷ್ಯರನ್ನಾಗಿ ನೋಡಲೂ ಸಿದ್ಧವಿಲ್ಲದಂತಹ ಬಲ್ಲಿದರು. ಇನ್ನು ಮೌಢ್ಯಗಳ ವಿಷಯದಲ್ಲಂತೂ ಭ್ರಮಿಸಿದ್ದೇ ನಂಬಿಕೆ, ಮಾಡಿದ್ದೇ ಆಚರಣೆ. ನೂರಾರು ವಿಗ್ರಹಗಳು, ನೂರಾರು ಆಚರಣೆಗಳು. ಹುಟ್ಟುವ ಗಂಡು ಹೋರಾಡುವ ಕಾಲಾಳು, ಹೆಣ್ಣು ಹುಟ್ಟುವುದು ದಾಸಿಯಾಗಿರಲು ಎನ್ನುವಂತಹ ಆ ಕಾಲದ ಅವರ ವ್ಯವಸ್ಥೆಯಲ್ಲಿ ನಿರುಪಯೋಗಿ ಹೆಣ್ಣುಮಕ್ಕಳನ್ನು ಜೀವಂತವಾಗಿಯೇ ಹೂಳುವ ಪದ್ಧತಿ ಅಪರಿಚಿತವೂ ಅಲ್ಲ, ಅಮಾನುಷವೂ ಅಲ್ಲ.

ಇನ್ನು ಸಾಲ ಕೊಡುವವರಂತೂ ಸುಲಿಗೆಕೋರರು. ಬಡ್ಡಿಗಳಿಂದಲೇ ಬಡಜನರ ಬದುಕನ್ನು ಕೊನೆಗೊಳಿಸಿಬಿಡುತ್ತಿದ್ದರು. ಇನ್ನು ನ್ಯಾಯ ತೀರ್ಮಾನಗಳೆಂದರೆ ಬಲಶಾಲಿಯಾದ ಬುಡಕಟ್ಟಿನ ನಾಯಕ ಅಥವಾ ಸಮೂಹವೇ ತೀರ್ಪುಗಾರರು. ಅವರು ಹೇಳಿದ್ದೇ ತೀರ್ಪು ಅವರ ಕಾಡಿನ ನ್ಯಾಯದಲ್ಲಿ. ಇವೆಲ್ಲವೂ ಆ ಜನರಿಗೆ ಪರಂಪರಾನುಗತವಾಗಿಯೇ ಬಂದಿತ್ತು.

ಅರಬ್ಬರು ಎದುರಿಸುತ್ತಿದ್ದ ಆ ಬಿಕ್ಕಟ್ಟಿನ ಸಮಯದಲ್ಲಿ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ; ಹೀಗೆ ಯಾವುದರಲ್ಲೂ ಒಗ್ಗಟ್ಟಿರಲಿಲ್ಲ. ಹೀಗೆಲ್ಲಾ ಇದ್ದಂತಹ ಸಮಾಜದ ವ್ಯವಸ್ಥೆ ಹದಗೆಡುವಾಗ ಅದನ್ನು ಸುಸ್ಥಿತಿಗೆ ತರಲು ಸಾಮಾಜಿಕವಾಗಿ ಮತ್ತು ನೈತಿಕವಾಗಿ ಒಡಂಬಡಿಕೆಗಳನ್ನು ಮಾಡಿಕೊಂಡರೂ, ಅವಕ್ಕೆ ಅಲ್ಪಾಯಸ್ಸು.

ಅಂತಹ ಸಮಯದಲ್ಲಿ ಸಮಾಜದಲ್ಲಿ ಗೌರವವನ್ನೂ, ಸಾಮಾಜಿಕ ಸ್ಥಾನಮಾನವನ್ನೂ, ವ್ಯಾಪಾರ ವ್ಯವಹಾರಗಳಲ್ಲಿ ಸ್ಥಿರತೆಯನ್ನೂ ಹೊಂದಿದ್ದ ಕುಟುಂಬದಲ್ಲೇ ಮುಹಮ್ಮದ್ ಹುಟ್ಟಿದರು. ಹೊಟ್ಟೆಯಲ್ಲಿರುವಾಗಲೇ ತಂದೆಯನ್ನು, ಆರು ವರ್ಷದ ಬಾಲಕನಾಗಿರುವಾಗಲೇ ತಾಯಿಯನ್ನು ಕಳೆದುಕೊಂಡ ಅನಾಥ ಮುಹಮ್ಮದ್ ಅಲೆಮಾರಿ ಬುಡಕಟ್ಟಿನ ಮಹಿಳೆಯ ಮೊಲೆ ಹಾಲು ಕುಡಿದು ಬೆಳೆಯುತ್ತಾ, ಆ ದಂಪತಿಯರನ್ನೇ ಅಪ್ಪಾ, ಅಮ್ಮಾ ಎನ್ನುತ್ತಿತ್ತು ಮಗು. ತನ್ನ ಸುತ್ತಮುತ್ತಲ ಕ್ರೌರ್ಯ, ಉಡಾಳರ ಬದುಕು, ಮೌಲ್ಯರಹಿತ ಜೀವನ, ದಾಸ್ಯ, ಮಾನವ ಘನತೆಯನ್ನು ಧಿಕ್ಕರಿಸುವಂತಹ ಪ್ರಸಂಗಗಳನ್ನು ನೋಡುನೋಡುತ್ತಲೇ ಬೆಳೆದು ಯುವಕನಾಗುವಾಗಲೇ ಇಂತದ್ದೆಲ್ಲಾ ಹೇಗಾಯಿತು, ಇದಕ್ಕೆಲ್ಲಾ ಪರಿಹಾರವೇನು, ಇವರು ದಾರಿ ತಪ್ಪಿರುವುದಂತೂ ನಿಜ, ಆದರೆ ಸರಿ ದಾರಿ ಯಾವುದು ಎಂಬ ವಿಚಾರಗಳಲ್ಲೇ ಹಗಲಿರುಳುಗಳನ್ನು ಕಳೆದ ಮುಹಮ್ಮದ್ ಮೊದಲಿಗೆ ಕಂಡುಕೊಂಡಿದ್ದೇ ಮಾಡುವ ಎಲ್ಲಾ ಕೆಲಸಗಳಲ್ಲಿ ನೈತಿಕ ಬದ್ಧತೆ ಮತ್ತು ತನ್ನನ್ನು ತಾನು ಪರಿಶುದ್ಧವಾಗಿರಿಸಿಕೊಳ್ಳುವ ನೇಮ. ಯಾವ ರೀತಿಯಲ್ಲಿಯೂ ತನ್ನ ಮನಸ್ಸು, ದೇಹ ಮತ್ತು ಹೃದಯವು ಅಶುದ್ಧವಾಗದಿರುವಂತೆ ಅವರು ನೋಡಿಕೊಂಡ ಬಗೆಯೇ ಒಂದು ಅನನ್ಯ ಮಾದರಿ.

ತಮ್ಮ ಕುಟುಂಬದ ಕಸುಬಾದ ವ್ಯಾಪಾರವನ್ನೇ ಮಾಡುತ್ತಿದ್ದರೂ ವಸ್ತುಗಳ ಗುಣಮಟ್ಟದಲ್ಲಿ ಸುಳ್ಳನ್ನು ಹೇಳದಿರುವುದು, ತೂಕದಲ್ಲಾಗಲಿ, ಮಾರುವ ವಸ್ತುಗಳಲ್ಲಾಗಲಿ ಮೋಸ ಮಾಡದಿರುವುದು, ಕಟ್ಟುನಿಟ್ಟಿನ ಲೆಕ್ಕಾಚಾರದ ಬದಲು ಔದಾರ್ಯವೇ ಅವರ ವ್ಯಾಪಾರದ ಮೌಲ್ಯವಾಗಿತ್ತು. ವ್ಯಾಪಾರಂ ದ್ರೋಹ ಚಿಂತನಂ ಎನ್ನುವುದು, ಇವರಲ್ಲಿ ವ್ಯಾಪಾರಂ ಮೌಲ್ಯ ಚಿಂತನಂ ಆಗಿತ್ತು. ಇನ್ನು ಪ್ರೌಢ ಬಾಲಕನಾಗಿ ಮಾಡಿದ ಕುರುಬನ ಕೆಲಸದಲ್ಲಿಯೂ ಪ್ರಕೃತಿಯ ಸೃಷ್ಟಿಯನ್ನು ಬೆರಗಿನಿಂದ ನೋಡುತ್ತಾ ಮಾಡುತ್ತಿದ್ದದ್ದು ಸೃಷ್ಟಿಕರ್ತನ ಬಗ್ಗೆಯೇ ಚಿಂತನೆ.

ತನ್ನ ಗೆಳೆಯರು ಮೋಜು ಮಸ್ತಿ ಮಾಡುವಂತಹ ಕೂಟಗಳಿಗೆ ಬಲವಂತ ಮಾಡಿದರೆ, ತನ್ನ ಪ್ರಜ್ಞೆ ಎಚ್ಚರ ತಪ್ಪದೇ ಇರುವಂತೆ ನೋಡಿಕೊಳ್ಳುತ್ತಾ, ಜೂಜು, ಕುಡಿತ, ವ್ಯಭಿಚಾರ, ಅಹಂಕಾರದ ಪ್ರದರ್ಶನಗಳಿಗೆ ಎಡೆ ಕೊಡದಂತೆ ಅಂತರವನ್ನೇ ಉಳಿಸಿಕೊಳ್ಳುತ್ತಲಿದ್ದದ್ದು ಆಗಿನ ಅರಬ್ಬರ ವಿಷಯದಲ್ಲಿ ತೀರಾ ಅಪರಿಚಿತ ಮತ್ತು ಅಪರೂಪ.

ಪ್ರವಾದಿ ಮುಹಮ್ಮದರಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ ಯಾವ ಬದಲಾವಣೆಗಳನ್ನು ತಾನು ಬದುಕುತ್ತಿರುವ ಸಮಾಜದಲ್ಲಿ, ಜನರಲ್ಲಿ ತರಬೇಕೆಂದು ಬಯಸುತ್ತಿದ್ದರೋ ಅದನ್ನು ಮೊದಲು ತನ್ನ ಸ್ವಭಾವವನ್ನಾಗಿಸಿಕೊಂಡಿದ್ದು.

ಅಹಂಕಾರದ ಕಿಂಚಿತ್ತೂ ಸುಳಿವಿಲ್ಲದ ವಿನಯಶೀಲ ಮುಹಮ್ಮದರಿಗೆ ಸಣ್ಣಸಣ್ಣ ಮಕ್ಕಳೂ ಕೂಡಾ ಗೌರವಾದರಕ್ಕೆ ಪಾತ್ರರೇ. ಯಾರೊಂದಿಗೇ ನಡೆದುಕೊಂಡರೂ ಅವರ ವರ್ತನೆಯಲ್ಲಿ ಇದ್ದದ್ದು ಸಮಾನ ಗೌರವ, ಔದಾರ್ಯ ಮತ್ತು ಕರುಣೆ. ತಮ್ಮ ಪ್ರತಿ ನುಡಿಯಲ್ಲಿ, ನಡೆಯಲ್ಲಿ ಆಪ್ತತೆ ಮತ್ತು ಆದರವನ್ನೇ ಪ್ರತಿಫಲಿಸುತ್ತಲಿದ್ದದ್ದು.

ಒಬ್ಬನೇ ದೇವರೆನ್ನುವ ಮತ್ತು ಅವನಿಗೆ ಸಂಪೂರ್ಣ ಶರಣಾಗಿ ಆತನ ಅಣತಿಯಂತೆಯೇ ಜೀವನವನ್ನು ರೂಪಿಸಿಕೊಳ್ಳಲು ತೋರಿದ ದಾರಿಯೇ ಇಸ್ಲಾಂ. ಅವರ ಪ್ರಾರ್ಥನೆಯಲ್ಲಿ ಮೊದಲ ಪ್ರಾಶಸ್ತ್ಯವೇ ಅಲ್ಲಾಹನಿಂದ ಅನುಗ್ರಹಿತ ಮಾರ್ಗದಲ್ಲಿ ನಡೆಯುವುದು ಮತ್ತು ಅದನ್ನು ತಪ್ಪದಿರುವುದು ಮಾತ್ರವೇ. ಅಲ್ಲಾಹನು ಪರಮ ದಯಾಮಯನೂ ಮತ್ತು ಕರುಣಾನಿಧಿಯೂ ಆಗಿರುವುದರಿಂದ ಅವನ ಹೆಸರಿನಲ್ಲಿ, ಅವನ ಪ್ರೀತ್ಯರ್ಥವಾಗಿಯೇ ನಮ್ಮ ಬದುಕು, ನಡೆ, ನುಡಿ, ವ್ಯವಹಾರ, ದಾರಿ, ಗುರಿ ಇರುವುದೇ ಅವರ ಧಾರ್ಮಿಕಾಚರಣೆ.

ವ್ಯಕ್ತಿಯ ಮನಸ್ಥಿತಿಯನ್ನು, ಕುಟುಂಬವನ್ನು, ಕುಟುಂಬಗಳ ಸಮೂಹವಾದ ಸಮಾಜವನ್ನು ಆಮೂಲಾಗ್ರವಾಗಿ ಬದಲಿಸದೇ ಹೋದಲ್ಲಿ ಈ ಜನರು ಒಳಗೂ ಹೊರಗೂ ಶಾಂತಿಯನ್ನು ಕಂಡುಕೊಳ್ಳಲಾರರು ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದ ಮುಹಮ್ಮದರು ಅದಕ್ಕೆ ಬದ್ಧವಾದರು ಮತ್ತು ತಮ್ಮ ಜೀವನದ ಕೊನೆಯ ಉಸಿರಿನವರೆಗೂ ಅದಕ್ಕೇ ದುಡಿದರು.

ರೂಢಿಗತ ಸಂಪ್ರದಾಯಗಳನ್ನು ಬಿಡಲೊಲ್ಲದ ಪೂರ್ವಾಗ್ರಹ ಪೀಡಿತರು ಅನುಮಾನಿಸಿದರು, ಅಪಮಾನಿಸಿದರು, ನಿಂದಿಸಿದರು, ಕಿರುಕುಳಗಳನ್ನು ನೀಡಿದರು, ಕಲ್ಲುಗಳನ್ನು ಹೊಡೆದು ಹಿಂಸೆ ಕೊಟ್ಟರು, ಕೊಲೆ ಮಾಡಲು ಸಂಚುಗಳನ್ನು ಹೂಡಿದ್ದರು, ಕೊನೆಗೆ ಯುದ್ಧವನ್ನೇ ಮಾಡಿದರು. ಆದರೆ ಮುಹಮ್ಮದರು ಅಲ್ಲಾಹನಲ್ಲಿ ಇರಿಸಿದ್ದ ತಮ್ಮ ವಿಶ್ವಾಸವನ್ನು ಮತ್ತು ತಮ್ಮ ಕೆಲಸದಲ್ಲಿ ಇದ್ದ ಬದ್ಧತೆಯನ್ನು ಕಿಂಚಿತ್ತೂ ಸಡಿಲಿಸಲಿಲ್ಲ. ಅದೆಲ್ಲವನ್ನೂ ಎದುರಿಸಿದ ಪರಿಣಾಮವೇ ಇಸ್ಲಾಮಿಗೆ ಒಂದು ಗಟ್ಟಿಯಾದ ನೈತಿಕ ಮತ್ತು ಧಾರ್ಮಿಕ ತಳಹದಿಯನ್ನು ನೀಡಲು ಸಾಧ್ಯವಾಯಿತು.

ಧಾರ್ಮಿಕತೆಯು ವ್ಯಕ್ತಿಯ ತನ್ನುದ್ಧಾರಕ್ಕಾದರೆ, ನೈತಿಕತೆಯು ತಾನು ಒಳಗೊಂಡಿರುವ ಸಮಾಜಕ್ಕಾಗಿ.

ಇಸ್ಲಾಂ ಧರ್ಮವು ಪ್ರವಾದಿ ಮುಹಮ್ಮದರಿಂದ ಸ್ಥಾಪಿತಗೊಂಡಿರುವ ಧರ್ಮವಲ್ಲ. ಆದರೆ ಅದರ ಪರಿಶುದ್ಧತೆ ಮತ್ತು ಪ್ರಭಾವವು ಮಂಕಾಗಿದ್ದಂತ ಕಾಲದಲ್ಲಿ ಅವತೀರ್ಣವಾದ ಕುರಾನ್ ಗ್ರಂಥವನ್ನು ಆಧರಿಸಿಕೊಂಡು ತಮ್ಮ ನಡತೆಯನ್ನು ಸನ್ನಡತೆಯನ್ನಾಗಿಸಿಕೊಳ್ಳುವ, ದುರ್ಮಾರ್ಗವನ್ನು ಸನ್ಮಾರ್ಗವನ್ನಾಗಿಸಿಕೊಳ್ಳುವ, ಅಂಧಶ್ರದ್ಧೆಗಳಿಂದ ದಿಟವಾದ ಶ್ರದ್ಧೆಗೊಯ್ಯುವ, ಗೊಂದಲಕ್ಕೀಡು ಮಾಡುವಂತಹ ಬಹುದೇವತಾರಾಧನೆಗಳಿಂದ ಏಕದೇವೋಪಾಸನೆಯ ಪರಿವರ್ತನೆಗೆ ಅವರು ಶ್ರಮಿಸಿದ್ದು ಮತ್ತು ಸಾಧಿಸಿದ್ದು.

ಈ ಕ್ರಾಂತಿಕಾರಕ ಬದಲಾವಣೆಗಳಿಂದ ಅನಾಗರಿಕ ಸಮಾಜದಲ್ಲಿ ಬದುಕನ್ನು ಅಸ್ತವ್ಯಸ್ತಗೊಳಿಸಿಕೊಂಡಿದ್ದ ಅರಬರು ಘನತೆಯ ಬದುಕನ್ನು ಅಪ್ಪಿಕೊಂಡರು. ಯಾವ ನೆಲದಲ್ಲಿ ಹೆಣ್ಣನ್ನು ದಾಸಿ ಎಂದೇ ಪರಿಗಣಿಸಿ, ಜೀವಂತವಾಗಿ ಹೂಳುತ್ತಿದ್ದರೋ ಅಲ್ಲಿ ಹೆಣ್ಣು ಘನತೆ ಮತ್ತು ಗೌರವದಿಂದ ಉನ್ನತ ಮಟ್ಟವನ್ನು ಏರಿದಳು. ವರ್ಗ ತಾರತಮ್ಯಗಳಿಂದ ನಲಗುತ್ತಿದ್ದ ನೆಲ ವರ್ಣ ಮತ್ತು ವರ್ಗ ಸಮಾನತೆಯನ್ನು ಹೊಂದಿ ಎಲ್ಲಾ ಮನುಷ್ಯರೂ ಗೌರವದಿಂದ ಬದುಕುವಂತಾಯಿತು.

ಹೆಣ್ಣು ಶಿಕ್ಷಣದಲ್ಲಿ, ಕುಟುಂಬ ಮತ್ತು ಸಮಾಜದಲ್ಲಿ, ಆಸ್ತಿ ವಿನಿಮಯದಲ್ಲಿ ಸಮಾನವಾದ ಹಕ್ಕುದಾರಳಾದಳು. ಹುಟ್ಟುವ ಮಕ್ಕಳು ಹೆತ್ತವರ ಅಧಿಕಾರದ ಅಧೀನಕ್ಕೆ ಒಳಗಾಗುವ ವಸ್ತುವಾಗದೇ ಗೌರವಾದರದ ಕುಟುಂಬದ ಸದಸ್ಯರಾದರು.

ವಿಶ್ವದ ವಿವಿಧ ಧರ್ಮಗಳಲ್ಲಿ ಹೆತ್ತವರನ್ನು ಹೇಗೆ ಗೌರವಿಸಬೇಕೆಂದು, ನೋಡಿಕೊಳ್ಳಬೇಕೆಂದು ಹೇಳಿಕೊಟ್ಟರೆ, ಪ್ರವಾದಿ ಮುಹಮ್ಮದರು ಹೆತ್ತವರಿಗೆ ಮಕ್ಕಳನ್ನು ಹೇಗೆ ಗೌರವಿಸಬೇಕೆಂದು, ನೋಡಿಕೊಳ್ಳಬೇಕೆಂದು ಹೇಳಿಕೊಡುತ್ತಾರೆ. ಇನ್ನು ತಾವು ಸಮಾನ ಗೌರವವನ್ನು ಕಾಪಾಡುವ ಮೂಲಕ ಸಮಾನತೆಯನ್ನು ಜೀವನದುದ್ದಕ್ಕೂ ಆಚರಿಸಿಕೊಂಡು ಬಂದರು. ನೆರೆಯವನು ಹಸಿದಿರದಂತೆ ನೋಡಿಕೊಳ್ಳುವುದರಿಂದ ಹಿಡಿದು, ತಮಗಾಗಿ ಕೆಲಸ ಮಾಡಿದ ಕಾರ್ಮಿಕನ ಉಪಚರಿಸುವವರೆಗೂ ಸಾಮಾಜಿಕ ನೈತಿಕತೆಯನ್ನು ದೃಢಗೊಳಿಸಿರುವವರೇ.

ಶರಣರ ಕಾಯಕ ನಿಷ್ಟೆ ಮತ್ತು ಗೌರವವನ್ನು ಅಧ್ಯಯನ ಮಾಡಿದವರಿಗೆ ಮುಹಮ್ಮದರು ಕಾರ್ಮಿಕರಿಗೆ ನೀಡುವ ಗೌರವವು ಸುಲಭವಾಗಿ ಅರಿವಿಗೆಟಕುವವು. ಕ್ಷಮೆ, ಕರುಣೆಗೆ ತಾವೇ ಮಾದರಿಯಾಗಿ ಒದಗಿದ ಮುಹಮ್ಮದರ ಬಳಿಗೊಬ್ಬ ಬಂದು, “ನಾನು ಎಷ್ಟು ಬಾರಿ ನನ್ನ ಸೇವಕನನ್ನು ಕ್ಷಮಿಸಲಿ?” ಎಂದು ಕೇಳುತ್ತಾನೆ. ಪ್ರವಾದಿ ಉತ್ತರಿಸುವುದಿಲ್ಲ. ಆತ ಮತ್ತೊಮ್ಮೆ, ಮಗದೊಮ್ಮೆ ಕೇಳುತ್ತಾನೆ. ಮೂರನೇ ಬಾರಿ ಉತ್ತರಿಸುವ ಪ್ರವಾದಿ “ಪ್ರತಿ ದಿನವೂ ಎಪ್ಪತ್ತು ಬಾರಿ ಕ್ಷಮಿಸು” ಎನ್ನುತ್ತಾರೆ.

ಭಾರತದ ರಾಷ್ಟ್ರಪತಿಯಾಗಿದ್ದ ಕೆ.ಎಸ್.ರಾಧಾಕೃಷ್ಣನ್ ಪ್ರವಾದಿ ಮುಹಮ್ಮದರ ಬಗ್ಗೆ ತಮ್ಮ ಸ್ಟೋರಿ ಆಫ್ ಸಿವಿಲೈಸೇಶನ್ ಎಂಬ ಕೃತಿಯಲ್ಲಿ ಹೇಳುವುದು ಹೀಗೆ, “ವಿಶ್ವದ ಇತಿಹಾಸದಲ್ಲಿ ತಮ್ಮ ಪ್ರಭಾವದಿಂದ ಮಹತ್ತರವಾದುದನ್ನು ಸಾಧಿಸಿರುವ ದೈತ್ಯರಲ್ಲಿ ಮುಹಮ್ಮದರೊಬ್ಬರು. ಇವರು ಬರ್ಬರ ಆಘಾತಗಳಿಗೆ ಒಳಗಾಗಿ ಜರ್ಜರಿತವಾಗಿ ಬೆಂದು ಎಂಜಲಿನಂತಾಗಿ ಹೋಗಿದ್ದ ಜನರನ್ನು ನೈತಿಕ ಮತ್ತು ಆಧ್ಯಾತ್ಮಿಕತೆಯ ಎತ್ತರಗಳಿಗೆ ಮುಟ್ಟಿಸಿದರು. ಬೇರೆಲ್ಲಾ ಮಾರ್ಗ ಪ್ರವರ್ತಕರಿಗಿಂತ ಹೆಚ್ಚೂ ಕಡಿಮೆ ತಮ್ಮ ಸುಧಾರಕ ದೃಷ್ಟಿಯನ್ನು ಸಂಪೂರ್ಣವಾಗಿ ನನಸಾಗಿಸಿಕೊಂಡರು. ಅನಾಗರಿಕ ಬುಡಕಟ್ಟುಗಳಿಂದ ಕೂಡಿದ್ದು, ಬೆಂಗಾಡಾಗಿದ್ದ ಮರುಭೂಮಿಯು ಪ್ರವಾದಿ ಮುಹಮ್ಮದರು ಮರಣಿಸುವ ಹೊತ್ತಿಗೆ ನೈತಿಕತೆಯ ಶಿಸ್ತಿನ ರಾಷ್ಟ್ರವನ್ನಾಗಿಸಿದ್ದರು.”

ಮುಹಮ್ಮದ್ ಎಂಬ ಜನಾನುರಾಗ, ದೈವಭಕ್ತಿ ಮತ್ತು ನೈತಿಕ ಬದ್ಧತೆ ಉಳ್ಳ ಒಬ್ಬ ಮನುಷ್ಯರಾಗಿ ಇಷ್ಟು ತನ್ನ ಜೀವಿತಾವಧಿಯಲ್ಲಿ ನೋಡಿ ಸರಳವಾಗಿ ಬದುಕಿ, ಮಹತ್ತರವಾಗಿ ಸಾಧಿಸಿ, ಸರಳವಾಗಿ ಲೋಕಕ್ಕೆ ವಿದಾಯ ಹೇಳಲೂ ಸಾಧ್ಯವಾಯಿತು.

  • ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply