ಸ್ಮಗ್ಲಿಂಗ್, ಮಾದಕವಸ್ತು ವ್ಯಾಪಾರ ಆತಂಕವಾದದ ಹಿಂದಿವೆ: ಮೋದಿ

3 years ago

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಬೇಟೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು ಸುಭದ್ರ ಮತ್ತು ಸಮೃದ್ಧ ಕರ್ನಾಟಕಕ್ಕಾಗಿ ಬಿಜೆಪಿ ಬೆಂಬಲಿಸುವಂತೆ ಮತದಾರರಿಗೆ ಕರೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳಿವೆ. ತುಷ್ಟೀಕರಣದ ನೀತಿಯನ್ನು ಅದು ಅನಾವರಣಗೊಳಿಸಿದೆ. ಬಿಜೆಪಿಯ ಎಲ್ಲ ಉತ್ತಮ ಕಾರ್ಯಕ್ರಮಗಳನ್ನು ಹಿಂದಕ್ಕೆ ಪಡೆಯುವ ಭರವಸೆ ಅಲ್ಲಿದೆ. ಕರ್ನಾಟಕದ ಜನರಿಗೆ ಬೋಗಸ್ ಭರವಸೆಗಳನ್ನು ಅದು ನೀಡಿದೆ ಎಂದು ಆಕ್ಷೇಪಿಸಿದರು.

ನಾನು ಜೈ ಬಜರಂಗಬಲಿ ಹೇಳುವುದಕ್ಕೂ ಕಾಂಗ್ರೆಸ್ಸಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಎಲ್ಲಿಯವರೆಗೆ ಹೋಗುತ್ತಿದೆ ಎಂದು ರಾಜ್ಯದ ಜನತೆ ನೋಡುತ್ತಿದ್ದಾರೆ. ಕಾಂಗ್ರೆಸ್ ಆತಂಕವಾದದ ವಿರುದ್ಧ ಒಂದು ಮಾತನ್ನಾಡಲೂ ಹಿಂಜರಿಯುತ್ತಿದೆ. ಮತಬ್ಯಾಂಕ್ ರಾಜಕೀಯದ ಕಾರಣಕ್ಕೆ ಭಯೋತ್ಪಾದನೆಯನ್ನು ಪಾಲಿಸಿ, ಪೋಷಿಸುತ್ತ ಬಂದಿದೆ ಎಂದು ಆರೋಪಿಸಿದರು.

ಸ್ಮಗ್ಲಿಂಗ್, ಮಾದಕವಸ್ತು ವ್ಯಾಪಾರ- ಇವೆಲ್ಲವೂ ಆತಂಕವಾದದ ಹಿಂದಿವೆ. ಬಾಂಬ್, ಪಿಸ್ತೂಲ್ ಬಳಸುವ ಜೊತೆ ಆಂತರಿಕವಾಗಿ ಆತಂಕವಾದವನ್ನು ಹರಡಲಾಗುತ್ತಿದೆ. ಕೇರಳ ಫೈಲ್ಸ್ ಸಿನಿಮಾವು ಒಂದು ರಾಜ್ಯದಲ್ಲಿ ಸಿದ್ಧವಾಗಿದೆ. ಪ್ರತಿಭಾವಂತರಿರುವ ಸುಂದರ ರಾಜ್ಯವೊಂದರ ವಿಷಯ ಇದಾಗಿದೆ ಎಂದು ವಿವರಿಸಿದರು. ಆತಂಕವಾದದ ಹಿಂದೆ ಕಾಂಗ್ರೆಸ್ ಇದೆ. ಅಂಥ ಭಯೋತ್ಪಾದಕರ ಜೊತೆ ಕಾಂಗ್ರೆಸ್ ಹಿಂಬಾಗಿಲ ರಾಜಕೀಯ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ನಮ್ಮ ಸರಕಾರ ತಾಂಡಾ ಮತ್ತು ಬಸ್ತಿಗಳಿಗೆ ಹಕ್ಕುಪತ್ರ ನೀಡಿ, ಕಂದಾಯ ಗ್ರಾಮವಾಗಿ ಮಾಡಿದೆ. ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ. ಅದನ್ನು ಕಾಂಗ್ರೆಸ್ ಅದನ್ನು ವಿರೋಧಿಸಿತ್ತು. ಅಂಥ ಕಾಂಗ್ರೆಸ್ಸನ್ನು ಕ್ಷಮಿಸಬೇಕೇ ಎಂದು ಪ್ರಶ್ನಿಸಿದರು. ಅಂಥ ಕಾಂಗ್ರೆಸ್ಸಿಗೆ ಪಾಠ ಕಲಿಸಿ ಎಂದರು.

ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ. ತುಷ್ಟೀಕರಣ ನೀತಿ, ಭ್ರಷ್ಟಾಚಾರಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಎಂದು ಮನವಿ ಮಾಡಿದರು.

Leave a Reply