ಬೆಂಗಳೂರು: 9ನೇ ತರಗತಿಯಿಂದ PUCವರೆಗೆ ಉದ್ಯಮಶೀಲತೆ ಬೆಳವಣಿಗೆ ತಿಳಿಸುವ ಪಠ್ಯಕ್ರಮ, 8ನೇ ತರಗತಿಯಿಂದ ಪದವಿವರೆಗೆ ವೃತ್ತಿ ಮಾರ್ಗದರ್ಶನ ಕಡ್ಡಾಯಕ್ಕಾಗಿ ಕೌಶಲ್ಯ, ಉದ್ಯಮಶೀಲತೆ, ನವೋದ್ಯಮ ಕಾರ್ಯಪಡೆ ನೀಡಿದೆ. ಕೃಷಿ ವಲಯದಲ್ಲಿ ಗರಿಷ್ಠ ಉದ್ಯೋಗಾವಕಾಶದ ಸಾಧ್ಯತೆ ಇದೆ. ಇದನ್ನು ನನಸಾಗಿಸಲು ಪ್ರಮುಖ ಇಲಾಖೆಗಳ ಜತೆಗೂಡಿ ಕೆಲಸಮಾಡಲಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೇಳಿದರು.
ವಿದ್ಯಾರ್ಥಿಗಳಿಗೆ ಕಲಿಕಾ ಹಂತದಿಂದಲೇ ಕೌಶಲ್ಯ ಕಲಿಸುವ ಜತೆಗೆ ಉದ್ಯಮಶೀಲ ಮನೋಭಾವ ಬೆಳೆಸಲು ಜಿಲ್ಲಾ ಮಟ್ಟದಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಉದ್ಯಮಶೀಲತಾ ವಿಕಸನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ಆಧುನಿಕ ಕಾಲಕ್ಕೆ ತಕ್ಕಂತೆ ಎಲ್ಲಾ ಜಿಲ್ಲೆಗಳಲ್ಲೂ ವಿಕಸನ ಅಥವಾ ಪರಿಪೋಷಣಾ ಕೇಂದ್ರಗಳ ಜಾಲವನ್ನು ಅಸ್ತಿತ್ವಕ್ಕೆ ತರಬೇಕಿದೆ. ಇದನ್ನು ಬಲಪಡಿಸಲು ಇಸ್ರೇಲ್‌ನ ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳ ಮಾದರಿಯಲ್ಲಿ `ಕರ್ನಾಟಕ ಸಂಶೋಧನೆ ಮತ್ತು ನಾವೀನ್ಯತೆ ಪ್ರಾಧಿಕಾರ’ವನ್ನು ಸ್ಥಾಪಿಸಿ, ಅದನ್ನು ನೋಡಲ್ ಏಜೆನ್ಸಿಯಾಗಿ ಮಾಡಲಿದ್ದೇವೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳ ಡಿಜಿಟಲ್ ಕೌಶಲ್ಯ ಮಟ್ಟ ತಿಳಿಯಲು ಮಾದರಿ ಸಮೀಕ್ಷೆ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದಲ್ಲಿ `ಉದ್ಯಮ ಸೌಲಭ್ಯ ಕೇಂದ್ರ’ ಸ್ಥಾಪಿಸುವ ಸಹಿತ ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸೂಕ್ತ ಹಣಕಾಸು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಲಿದ್ದೇವೆ.ಪದವಿ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ್ಯ ಕೋರ್ಸುಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಯುವಜನರನ್ನು ಭವಿಷ್ಯದ ಕೌಶಲ್ಯಗಳಲ್ಲಿ ಸನ್ನದ್ಧಗೊಳಿಸಲು Infosys, Microsoft, IBM ಮುಂತಾದ ಕಂಪನಿಗಳಲ್ಲಿ ಇಂಟರ್ನ್-ಶಿಪ್ ಮಾಡಲು ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ KDEM ಈ ಕಂಪನಿಗಳೊಂದಿಗೆ ಸಹಯೋಗ ಹೊಂದಲಿದೆ ಎಂದರು.
ರಾಜ್ಯ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷರಾದ #PrashanthPrakash, ಕಾರ್ಯಪಡೆ ಸಂಚಾಲಕರಾದ Madan Padaki ಮತ್ತಿತರರು ಉಪಸ್ಥಿತರಿದ್ದರು.




