ಪ್ರಜ್ವಲ್ ಮತ್ತು ಎಚ್ ಡಿ ಕುಮಾರಸ್ವಾಮಿಯ ಸಾಮ್ಯತೆಗಳು !

2 years ago

‘ಸಿದ್ದರಾಮಯ್ಯ ಅವರ ಮಗ ಸತ್ತಾಗ ಮೋದಿ ಅವರು ಮಾಡಿದ ಸಹಾಯವನ್ನು ಸಿದ್ದರಾಮಯ್ಯ ಮರೆತಿದ್ದಾರೆ. ಕನಿಷ್ಠ ಸೌಜನ್ಯ ಕೂಡ ಉಳಿಸಿಕೊಂಡಿಲ್ಲ’ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

‘ನನ್ನ ಮಗ ವಿದೇಶದಲ್ಲಿ ಸತ್ತ. ಮೃತದೇಹ ಇಲ್ಲಿಗೆ ತರಿಸಿ ಅಂತ್ಯಕ್ರಿಯೆ ಮಾಡಿದ್ದೇನೆ ಅಷ್ಟೆ. ಆ ಸಂದರ್ಭದಲ್ಲಿ ಸಹಾಯಕ್ಕಾಗಿ ಮೋದಿ ಅವರನ್ನಾಗಲಿ, ಬೇರೆ ಯಾರನ್ನೇ ಆಗಲಿ ಸಂಪರ್ಕಿಸುವ ಪ್ರಮೇಯವೇ ಬಂದಿಲ್ಲ. ಇವರೆಲ್ಲ ಸುಳ್ಳು ಹೇಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ ಡಿಕೆ ಮಾತಿಗೆ ಪ್ರತಿಕ್ರಿಯಿಸಿದ್ದಾರೆ.

ಚರ್ಚೆಗಾಗಿ (for the sake of argument) ಸಿದ್ದರಾಮಯ್ಯರ ಪುತ್ರನ ಶವ ದೇಶಕ್ಕೆ ತರಲು ಮೋದಿ ಮತ್ತು ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದಾರೆ ಎಂದಿಟ್ಟುಕೊಳ್ಳೋಣಾ. ಅದರಲ್ಲಿ ವಿಶೇಷ ಏನಿದೆ ? ಸಿದ್ದರಾಮಯ್ಯ ಮಾತ್ರವಲ್ಲ, ಈ ದೇಶದ ಯಾವ ಪ್ರಜೆಯೂ ವಿದೇಶದಲ್ಲಿ ಸಂಕಷ್ಟಕ್ಕೊಳಗಾಗಿದ್ದರೆ ನೆರವಿಗೆ ಧಾವಿಸುವುದು ಒಕ್ಕೂಟ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯದ ಕರ್ತವ್ಯ. ಅದರಲ್ಲೂ ಒಕ್ಕೂಟ ಸರ್ಕಾರವೊಂದರ ಮುಖ್ಯಮಂತ್ರಿಯ ಮಗ ವಿದೇಶದಲ್ಲಿ ನಿಧನ ಹೊಂದಿದಾಗ ಪ್ರಧಾನಿ ಮತ್ತು ವಿದೇಶಾಂಗ ಸಚಿವರು ಕಾರ್ಯನಿರ್ವಹಿಸದೇ ಇದ್ದರೆ ಅಂತಹ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ? ಇಷ್ಟಕ್ಕೂ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಈ ಕೆಲಸವನ್ನು ಮಾಡುತ್ತಾರೆಯೇ ವಿನಹ ನೇರವಾಗಿ ಮೋದಿಯಾಗಲೀ, ಸುಷ್ಮಾ ಸ್ವರಾಜ್ ಆಗಲಿ ಮಾಡುವುದಿಲ್ಲ. ಇಂತಹ ಸಹಜ ಕಾರ್ಯನಿರ್ವಹಣೆಗಾಗಿ ಜೀವನಪೂರ್ತಿ ಮೋದಿಯನ್ನು ರಾಜಕೀಯವಾಗಿ ಟೀಕಿಸದಿರಲಾಗುತ್ತದೆಯೇ ?

ಕುಮಾರಸ್ವಾಮಿಯ ಈ ಬುದ್ದಿಯೇ  ಪ್ರಜ್ವಲ್ ರೇವಣ್ಣನಲ್ಲೂ ಇದೆ. ಆ ಕಾರಣಕ್ಕಾಗಿಯೇ ತನ್ನಿಂದ ಸಹಾಯ ಪಡೆದವರು, ಸಹಾಯ ಪಡೆಯಲು ಬಂದವರು ತನ್ನ ಅಡಿಯಾಳಾಗಿ ಹೇಳಿದಂತೆ ಇರಬೇಕು ಎಂದು ಪ್ರಜ್ವಲ್ ಬಯಸಿದ್ದರು. ಇಂತಹ ಗುಣದಿಂದಾಗಿಯೇ ಸಹಾಯ ಕೇಳಿ ಬಂದವರು, ತನ್ನ ಮನೆಯಲ್ಲಿ ಕೆಲಸಕ್ಕೆ ಇದ್ದವರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.

ನಮ್ಮ ‘ಹಕ್ಕಿನ ನೆರವು’ ಪಡೆದುಕೊಂಡರೂ ಜೀತದಂತೆ ಇರಬೇಕು ಮತ್ತು ನೆರವು ಪಡೆದುಕೊಂಡವರೆಲ್ಲರೂ ನನ್ನ ಬಳಕೆಗಾಗಿಯೇ ಇರುವುದು – ಇದೆರಡೂ ಕೂಡಾ ಪಾಳೆಗಾರಿಕೆಯ ಗುಣಗಳು.

– ನವೀನ್ ಸೂರಿಂಜೆ, ಹಿರಿಯ ಪತ್ರಕರ್ತರು

Leave a Reply