ನೇಮಕ ಹಗರಣ ಆರೋಪ ಕುರಿತು ನ್ಯಾಯಾಂಗ ತನಿಖೆ ನಡೆಸಿ: ಸಿದ್ದರಾಮಯ್ಯ

4 years ago

ಬೆಂಗಳೂರು: ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿರುವ ನೇಮಕಾತಿಗಳು ಸೇರಿದಂತೆ ಈವರೆಗಿನ ಎಲ್ಲ ನೇಮಕಾತಿಗಳ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.

ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ಪಿಎಸ್‌ಐ ಹಗರಣದ ಹಿಂದೆ ಯಾವುದಾದರೂ ರಾಜಕಾರಣಿಗಳ ಕೈವಾಡ ಇದೆಯಾ? ಮಂತ್ರಿಗಳು ಹಾಗೂ ಅವರ ಸಂಬಂಧಿಕರು ಇದರಲ್ಲಿ ಶಾಮೀಲಾಗಿದ್ದಾರೆಯೇ? ಈ ಎಲ್ಲ ಸತ್ಯ ಸಂಗತಿ ಹೊರಬರಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನು ಕರೆದು ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ನೇಮಕಾತಿ ಹಗರಣದಲ್ಲಿ 22 ಜನ ಅಧಿಕಾರಿಗಳು ಸೇರಿದಂತೆ ಒಟ್ಟು 97 ಜನರ ಬಂಧನವಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಹಗರಣ ಆಗಬೇಕಾದರೆ ರಾಜಕಾರಣಿಗಳ ಕೈವಾಡ ಇಲ್ಲದೆ ಇರುತ್ತದೆಯೋ? ಇದರಲ್ಲಿ ನಾಲ್ಕು ಜನ ಮಂತ್ರಿಗಳು ಶಾಮೀಲಾಗಿದ್ದಾರೆ ಎಂಬ ವಕೀಲರ ಸಂಘದ ರಂಗನಾಥ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸಿಲ್ಲ? ಎಂದು ಪ್ರಶ್ನಿಸಿದರು.

ಬಂಧಿತ ಎಡಿಜಿಪಿ ಅಮೃತ್ ಪೌಲ್ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿ ಆಗಿ ಯಾರು ನೇಮಕ ಮಾಡಿದ್ದು? ಪ್ರಕರಣ ಬೆಳಕಿಗೆ ಬಂದು ಅವರ ಕಚೇರಿ ಮೇಲೆ ದಾಳಿ ನಡೆದ ನಂತರ ಅವರನ್ನು ವಿಚಾರಣೆಗೊಳಪಡಿಸದೆ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲು ಏನು ಕಾರಣ? ಎಂದು ಪ್ರಶ್ನಿಸಿದರು.

ಅಮೃತ್ ಪೌಲ್ ಅವರನ್ನು ಮಂಪರು ಪರೀಕ್ಷೆ ಏಕೆ ಮಾಡಬಾರದು? ಐಪಿಸಿ ಸೆಕ್ಷನ್ 164ರಡಿ ಅವರ ಹೇಳಿಕೆಯನ್ನು ಏಕೆ ರೆಕಾರ್ಡ್ ಮಾಡಿಲ್ಲ? ಖಾಲಿ ಉತ್ತರ ಪತ್ರಿಕೆ ತುಂಬಲು ಎಡಿಜಿಪಿ ಅವರು ಯಾರ ನಿರ್ದೇಶನದ ಮೇಲೆ ಕಾನ್ಸ್ ಟೆಬಲ್ ಗಳನ್ನು ಕಳಿಸಿದ್ದರು? ಇವುಗಳ ಬಗ್ಗೆಯೂ ತನಿಖೆಯಾಗಲಿ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 1672 ಸಬ್ ಇನ್ಸ್‌ಪೆಕ್ಟರ್, 30,100 ಕಾನ್ಸ್‌ಟೆಬಲ್ ಗಳು, 1102 ಜನ ಜೈಲ್ ವಾರ್ಡನ್ ಗಳು, 33 ಜನ ಫೊರೆನ್ಸಿಕ್ ಇಲಾಖೆಗೆ ಸೇರಿದ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಆ ಬಗ್ಗೆ ಯಾವ ದೂರುಗಳು ಕೇಳಿಬಂದಿರಲಿಲ್ಲ ಎಂದರು.

ನಮ್ಮ ಸರ್ಕಾರದ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಕೂಡಾ ಗಮನಿಸಿ ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಬೇರೆ ರಾಜ್ಯಗಳಿಗೆ ಸಲಹೆ ನೀಡಿದ್ದರು. ನೇಮಕಾತಿ ಉಸ್ತುವಾರಿ ಹೊತ್ತಿದ್ದ ಪೊಲೀಸ್ ಅಧಿಕಾರಿ ಔರಾದ್ ಕರ್ ಅವರು ಹಲವು ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ ಎಂದರು.

ನಮ್ಮ ಕಾಲದಲ್ಲಿ ಕೂಡಾ ಪೊಲೀಸ್ ನೇಮಕಾತಿಯಲ್ಲಿ ಹಗರಣಗಳಾಗಿವೆ ಎಂದು ಸುಳ್ಳು ಆರೋಪ ಮಾಡುವುದು ಸರಿ ಅಲ್ಲ. ನಾವು ಸಾವಿರಾರು ಪೊಲೀಸ್ ಸಿಬ್ಬಂದಿ ನೇಮಕ ಮಾಡಿದ್ದೇವೆ. ಅಕ್ರಮದ ಬಗ್ಗೆ ಪುರಾವೆಗಳಿದ್ದರೆ ಮೊದಲು ತನಿಖೆ ನಡೆಸಿ ಎಂದು ಒತ್ತಾಯಿಸಿದರು.

ಪಿಎಸ್ಐ ನೇಮಕಾತಿ ಹಗರಣದ ಸೂತ್ರಧಾರಿ ದಿವ್ಯಾ ಹಾಗರಗಿ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಿದ್ದು ಯಾರು? ಅವರ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಶಿಫಾರಸು ಮಾಡಿದವರು ಯಾರು? ಅವರ ಜೊತೆ ಹಗರಣದಲ್ಲಿ ಷಾಮೀಲಾಗಿದ್ದವರು ಯಾರು? ಎಂದು ಪ್ರಶ್ನಿಸಿದರು.

ಪಿಎಸ್ ಐ ನೇಮಕಾತಿ ಹಗರಣ ಬಯಲಾದಾಗ ಗೃಹ ಸಚಿವರು ಅದನ್ನು ನಿರಾಕರಿಸಿದ್ದರು. ಅದರ ನಂತರ ಸಚಿವ ಪ್ರಭು ಚೌಹ್ಹಾಣ್ ಅಕ್ರಮದ ಬಗ್ಗೆ ಪತ್ರ ಬರೆದಿದ್ದರು. ಪತ್ರಿಕೆಗಳಲ್ಲಿ ಸರಣಿ ವರದಿಗಳು ಪ್ರಕಟವಾಗಿವೆ. ಇವೆಲ್ಲವನ್ನೂ ಗಮನಿಸಿದರೆ ಹಗರಣವನ್ನು ಮುಚ್ಚಿಹಾಕಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಅನುಮಾನ ಮೂಡುತ್ತದೆ ಎಂದರು.

ಕನಕಗಿರಿಯ ಪರಸಪ್ಪ ಎಂಬಾತ ಮಗನ ಉದ್ಯೋಗಕ್ಕಾಗಿ ಶಾಸಕ ಬಸವರಾಜ ದಡೆಸೂಗೂರು ಅವರಿಗೆ ರೂ. 15 ಲಕ್ಷ ನೀಡಿದ್ದೇನೆ ಎಂದು ಹೇಳಿದ್ದ ಆಡಿಯೋ ಮತ್ತು ವಿಡಿಯೋ ಲೀಕ್ ಆಗಿದೆ, ತಾವು ಪಡೆದ ಹಣವನ್ನು ಸರ್ಕಾರಕ್ಕೆ ಕೊಟ್ಟಿದ್ದೇನೆ ಶಾಸಕರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಎಂದು ಒತ್ತಾಯಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿಗಳ ಮಗ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ, ಅವರನ್ನು ಕರೆದು ಯಾಕೆ ವಿಚಾರಣೆ ಮಾಡಿಲ್ಲ? ಎಂದು ಪ್ರಶ್ನಿಸಿದರು.

ಶಾಸಕ ಪ್ರಿಯಾಂಕ ಖರ್ಗೆಯವರನ್ನು ಮಾತ್ರ ಮತ್ತೆ ಮತ್ತೆ ವಿಚಾರಣೆಗೆ ಕರೆದು ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪಿಎಸ್ ಐ ನೇಮಕಾತಿ ಹಗರಣದ ಬಗ್ಗೆ ಪತ್ರಿಕಾಗೋಷ್ಠಿ ಮಾಡಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ವಿಚಾರಣೆಗೆ ಬರುವಂತೆ ಪೊಲೀಸರು ಮೂರು ಬಾರಿ ನೋಟಿಸ್ ನೀಡಿದ್ದಾರೆ. ಅಕ್ರಮದ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದ ಸಚಿವ ಪ್ರಭು ಚೌಹ್ಹಾಣ್ ಅವರನ್ನು ಯಾಕೆ ವಿಚಾರಣೆಗೊಳಪಡಿಸಿಲ್ಲ ಎಂದು ಪ್ರಶ್ನಿಸಿದರು.

ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಬರೆದವರು ಧರಣಿ ನಡೆಸುತ್ತಿದ್ದಾರೆ. ಅವರನ್ನು ನಾನು ಇಂದು ಭೇಟಿ ಮಾಡಿದಾಗ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕಿದರು. ಹೊಸದಾಗಿ ನೇಮಕಾತಿ ಪರೀಕ್ಷೆ ನಡೆಸಿದರೆ ನಮಗೆ ಅನ್ಯಾಯವಾಗುತ್ತದೆ ಎಂದು ಗೋಳು ತೋಡಿಕೊಂಡರು. ನೇಮಕಾತಿಯಲ್ಲಿನ ಅಕ್ರಮಕ್ಕಾಗಿ ಎಲ್ಲ 545 ಅಭ್ಯರ್ಥಿಗಳ ಆಯ್ಕೆಯನ್ನು ಅನೂರ್ಜಿತಗೊಳಿಸಿರುವುದು ಸರಿಯಲ್ಲ. ಇವರಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಮಕ್ಕಳನ್ನು ಪ್ರತ್ಯೇಕವಾಗಿ ವಿಂಗಡಿಸಲು ಸಾಧ್ಯ ಇದೆ ಎಂದು ಡಿಜಿಪಿ ಹೇಳಿದ್ದಾರೆ. ಈ ಸಲಹೆಯನ್ನು ಸರ್ಕಾರ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

Leave a Reply