ಬೆಂಗಳೂರು: ದೇಶದ ಭವಿಷ್ಯದಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳ ಭವಿಷ್ಯವಿದೆ. ದೇಶದ ಅಮೂಲ್ಯವಾದ ಆಸ್ತಿಯನ್ನೇ ಮಾರಾಟ ಮಾಡಲು ಹೊರಟಿರುವ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಭವಿಷ್ಯವನ್ನೇ ನಾಶಮಾಡಲು ಹೊರಟಿದೆ. ಇದರ ವಿರುದ್ಧ ವಿದ್ಯಾರ್ಥಿ –ಯುವಜನರು ಹೋರಾಟಕ್ಕಿಳಿಯಲೇ ಬೇಕಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆನೀಡಿದರು.
ಬೆಂಗಳೂರಿನಲ್ಲಿ ನಡೆದ ಎನ್.ಎಸ್.ಯು.ಐ ಕರ್ನಾಟಕ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ಮತ್ತಿತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ ಮಾತಾಡಿದ ಅವರು, ಭಾರತ ಸದೃಡ, ಸಮೃದ್ಧ ದೇಶವಾಗಿ ನಿರ್ಮಾಣಗೊಂಡದ್ದು ನೆಹರೂ, ಲಾಲ್ ಬಹದ್ದೂರ ಶಾಸ್ತ್ರಿ, ಇಂದಿರಾಗಾಂಧಿ, ರಾಜೀವ್ ಗಾಂಧಿ, ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ. ಬಿಜೆಪಿಗೆ ಯಾವುದನ್ನೂ ಕಟ್ಟಿ ಗೊತ್ತಿಲ್ಲ, ಕೆಡವುದಷ್ಟೇ ಗೊತ್ತು ಎಂದು ವಾಗ್ದಾಳಿ ನಡೆಸಿದರು.
ಈ ದೇಶದ ಬಗ್ಗೆ ಯಾವುದೇ ಭಾವನಾತ್ಮಕ ಸಂಬಂಧವೂ ಬಿಜೆಪಿಗೆ ಇಲ್ಲ. ಈ ಕಾರಣದಿಂದಾಗಿ ನಮ್ಮ ಹಿರಿಯರು ಶ್ರಮಪಟ್ಟು ಮಾಡಿಟ್ಟ ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ. ಇದನ್ನು ದೇಶಪ್ರೇಮ ಎನ್ನುತ್ತಾರೆಯೇ? ಇದೇ ನಿಜವಾದ ದೇಶದ್ರೋಹ ಎಂದು ಕಿಡಿಕಾರಿದರು.
ಈ ದೇಶವನ್ನು ಉಳಿಸುವ ಬಹುದೊಡ್ಡ ಜವಾಬ್ದಾರಿ ಮುಂದಿನ ಜನಾಂಗವಾದ ಯುವಜನರ ಮೇಲಿದೆ. ದೇಶದ ಆಸ್ತಿ ಮಾರಾಟದ ಕಡೆಯಿಂದ ವಿದ್ಯಾರ್ಥಿ-ಯುವಜನರ ಗಮನ ಬೇರೆಕಡೆ ಸೆಳೆಯಲು ಕೋಮುವಾದ, ಪಾಕಿಸ್ತಾನ-ಚೀನಾ ಮೊದಲಾದ ವಿಚಾರಗಳನ್ನು ಪ್ರಚಾರ ಮಾಡಲಾಗುತ್ತಿದೆ. ನಿರಂತರವಾಗಿ ಸುಳ್ಳುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಯುವಜನರು ಈ ಹುನ್ನಾರಕ್ಕೆ ಬಲಿಯಾಗಬಾರದು ಎಂದು ಕರೆನೀಡಿದರು.
ಕಳೆದ 75 ವರ್ಷಗಳಲ್ಲಿ ದೇಶದಲ್ಲಿ ನಿರ್ಮಾಣ ಆಗಿರುವ ಆಸ್ತಿಗಳನ್ನು ಮಾರಾಟ ಮಾಡಲು ಅನುಕೂಲ ಆಗುವಂತೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವ ಬಿಜೆಪಿ ರಾಜ್ಯಗಳ ಹಕ್ಕನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿದೆ. ಇದಕ್ಕೆ ವಿಧಾನಮಂಡಲಗಳಲ್ಲಿ ಚರ್ಚೆಯನ್ನೇ ಮಾಡದೆ ಕೇಂದ್ರ ಸರ್ಕಾರ ರೂಪಿಸಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕರಾಳ ಕೃಷಿ ಕಾಯ್ದೆಗಳು ಮತ್ತು ಹೊಸ ಶಿಕ್ಷಣ ನೀತಿಯೇ ಸಾಕ್ಷಿ ಎಂದರು.
ಹೊಸ ಶಿಕ್ಷಣ ನೀತಿ ಮೂಲಕ ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರಿಗೆ ಮಾರಾಟಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯಿಂದ ದೇಶದ ಬಡಕುಟುಂಬದ ವಿದ್ಯಾರ್ಥಿಗಳ ಪಾಲಿಗೆ ಉನ್ನತ ಶಿಕ್ಷಣ ಗಗನಕುಸುಮವಾಗಲಿದೆ. ನಿರುದ್ಯೋಗದ ಸಮಸ್ಯೆ ಇನ್ನಷ್ಟು ಭೀಕರವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿ ಕಾಂಗ್ರೆಸ್ ಗೆ 1971ರಲ್ಲಿ ಅಡಿಪಾಯ ಹಾಕಿದ್ದು ಇಂದಿರಾಗಾಂಧಿ, ಹದಿನೆಂಟನೆ ವರ್ಷಕ್ಕೆ ಮತದಾನ ನೀಡಿ ಯುವಜನರಿಗೆ ದೇಶ ನಿರ್ಮಾಣದಲ್ಲಿ ಭಾಗವಹಿಸುವ ಅವಕಾಶ ನೀಡಿದ್ದು ರಾಜೀವ್ ಗಾಂಧಿ. ಇದೇ ವಿದ್ಯಾರ್ಥಿ ಕಾಂಗ್ರೆಸ್ ಗೆ ಕಾನೂನು ಬದ್ಧ ಚೌಕಟ್ಟನ್ನು ನೀಡಿ ಶಿಸ್ತಿನ ಸಂಘಟನೆ ಮಾಡಿದ್ದು ರಾಹುಲ್ ಗಾಂಧಿ ಎಂದರು.
ಇತಿಹಾಸ ಗೊತ್ತಿಲ್ಲದವನು ಇತಿಹಾಸ ನಿರ್ಮಿಸಲಾರ ಎಂದು ಬಾಬಾಸಾಹೇಬ ಅಂಬೇಡ್ಕರ್ ಹೇಳಿದ್ದರು. ವಿದ್ಯಾರ್ಥಿಗಳು ದೇಶದ ಇತಿಹಾಸವನ್ನು ಮೊದಲು ಅಧ್ಯಯನ ಮಾಡಬೇಕು. ಸಂವಿಧಾನದ ಮಹತ್ವವನ್ನು ಅರಿತುಕೊಂಡು ಶಿಕ್ಷಣ-ಸಂಘಟನೆ-ಹೋರಾಟದ ಮಾರ್ಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಶತಮಾನಗಳ ಕಾಲದಿಂದ ಈ ದೇಶದ ದಲಿತ-ಶೂದ್ರ ಸಮುದಾಯ ಶಿಕ್ಷಣದಿಂದ ವಂಚಿತವಾಗಿತ್ತು. ಇದಕ್ಕೆ ಯಾರು ಹೊಣೆ ಎನ್ನುವುದು ಇತಿಹಾಸದ ಪುಟಗಳಲ್ಲಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನವನ್ನು ನೀಡುವ ಮೂಲಕ ಎಲ್ಲರಿಗೂ ಶಿಕ್ಷಣದ ಹಕ್ಕನ್ನು ನೀಡಿದರು. ಈ ದೇಶದ ಮಹಿಳೆಯರು ಕೂಡಾ ಶಿಕ್ಷಣದಿಂದ ವಂಚಿತರಾಗಿದ್ದರು. ಸಂವಿಧಾನ ಎಲ್ಲರಿಗೂ ಶಿಕ್ಷಣದ ಹಕ್ಕನ್ನು ನೀಡಿ ಶಿಕ್ಷಣ ಕ್ಷೇತ್ರದಲ್ಲಿದ್ದ ಲಿಂಗತಾರತಮ್ಯವನ್ನು ತೊಡೆದು ಹಾಕಿತು. ಇದರಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಕೇವಲ ಶೇ 18 ರಷ್ಟಿದ್ದ ಶಿಕ್ಷಿತ ಮಹಿಳೆಯರ ಪ್ರಮಾಣ ಈಗ ಶೇ 78 ಕ್ಕೆ ಏರಿಕೆಯಾಗಿದೆ ಎಂದರು.
ಶಿಕ್ಷಿತರ ಸಂಖ್ಯೆ ಹೆಚ್ಚಾದಷ್ಟೂ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಬೇಕಿತ್ತು. ಆದರೆ ಶಿಕ್ಷಿತ ಯುವಜನರೇ ಇಂದು ಜಾತಿವಾದ ಮತ್ತು ಕೋಮುವಾದದ ಪೋಷಕರಾಗಿ ದೇಶವನ್ನು ಅಪಾಯಕ್ಕೆ ದೂಡುತ್ತಿರುವುದು ಆತಂಕಕಾರಿಯಾಗಿದೆ. ವಿದ್ಯಾರ್ಥಿ-ಯುವಜನರನ್ನು ಜಾಗೃತಗೊಳಿಸುವ ಹೊಣೆಗಾರಿಕೆ ವಿದ್ಯಾರ್ಥಿ ಕಾಂಗ್ರೆಸ್ ಮೇಲಿದೆ.
ಅಂಬೇಡ್ಕರ್ ಅವರ ಸಂವಿಧಾನವನ್ನು ನೆಹರೂ, ಇಂದಿರಾಗಾಂಧಿ ಸೇರಿ ಎಲ್ಲಾ ಕಾಂಗ್ರೆಸ್ ನಾಯಕರು ಒಪ್ಪಿಕೊಂಡರು. ಸಮಸಮಾಜದ ವಿರೋಧಿಗಳಾದ, ಜಾತ್ಯತೀತತೆಯ ಶತ್ರುಗಳಾದ ಬಿಜೆಪಿಯವರು ಸಂವಿಧಾವನ್ನು ವಿರೋಧಿಸುತ್ತಿದ್ದಾರೆ. ಈ ಹುನ್ನಾರಗಳು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದ್ದು ಇದನ್ನೆಲ್ಲಾ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಧ್ರುವನಾರಾಯಣ್, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.



