ಬೆಂಗಳೂರು: ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಬಿಜೆಪಿ ನಾಯಕರಿಗೆ ದಾನ ಮಾಡೋಣ ಎಂದು 90 ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ. ಬೇಕಿದ್ದರೆ ನಳಿನ್ ಕುಮಾರ್ ಕಟೀಲ್ ಅವರಿಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ. ಇನ್ನೂ 19 ಸಿಡಿ ಇದೆಯಂತೆ, ಎಲ್ಲವೂ ಹಿಡಿತದಲ್ಲಿರಲಿ.. ನಾಲಗೆ ಕೂಡಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ನಡೆದ ಚರ್ಚೆಯಲ್ಲಿ ಇತ್ತೀಚೆಗೆ ತಾವು 90 ಜೊತೆ ಬಟ್ಟೆ ಖರೀದಿಸಿದ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು. ಅದಕ್ಕೆ ಲಾಕ್ ಡೌನ್ ನಿಂದಾಗಿ ತೊಂದರೆಗೆ ಒಳಗಾದ ಅಂಗಡಿಯವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಬಟ್ಟೆ ಖರೀದಿಸಿದ್ದಾಗಿ ಹೇಳಿಕೊಂಡಿದ್ದರು.
ಆದರೆ, ಈ ವಿಚಾರವನ್ನು ಅರಿಯದೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಗೆ ರಾಜೀನಾಮೆ ನೀಡಲು ಸಿದ್ದರಾಮಯ್ಯ 90 ಜೊತೆ ಬಟ್ಟೆ ಖರೀದಿಸಿದ್ದಾರೆ ಎಂದಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ತಮ್ಮ ಸಾಮಾಜಿಕ ಜಾಲತಾಣಗಳ ಅಧಿಕೃತ ಖಾತೆಗಳಿಂದ ಪ್ರತಿಕ್ರಿಯೆ ನೀಡಿದ್ದು, ಇನ್ನೂ 19 ಸಿಡಿ ಇದೆಯಂತೆ, ಎಲ್ಲವೂ ಹಿಡಿತದಲ್ಲಿರಲಿ.. ನಾಲಗೆ ಕೂಡಾ ಎಂದು ಎಚ್ಚರಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.




