ನಿಸರ್ಗದ ಮೂಲತತ್ವ ಅರಿತು ಸಂರಕ್ಷಣೆಗೆ ಒತ್ತು ನೀಡಬೇಕು: ಸುಧಾಕರ್

5 years ago

ಬೆಂಗಳೂರು: ನಿಸರ್ಗದ ಮೂಲತತ್ವವನ್ನು ಅರಿತುಕೊಂಡು ಪ್ರಕೃತಿ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಈಶ ಫೌಂಡೇಶನ್ ನ ಕಾವೇರಿ ಕಾಲಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸನಾತನ ಧರ್ಮದಲ್ಲಿ ಪ್ರಕೃತಿಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ. ಈಶ್ವರನ ಕುಟುಂಬದಲ್ಲಿ ನಂದಿ ಇದೆ. ಪಾರ್ವತಿ ದುರ್ಗೆಯಾಗಿ ಸಿಂಹವನ್ನು ವಾಹನವಾಗಿ ಹೊಂದಿದ್ದಾಳೆ. ಗಣೇಶನ ವಾಹನ ಇಲಿ, ಈಶ್ವರ ಕೊರಳಿಗೆ ನಾಗನನ್ನು ಆಭರಣವಾಗಿ ಹೊಂದಿದ್ದಾನೆ. ಸುಬ್ರಹ್ಮಣ್ಯನ ವಾಹನ ನವಿಲು. ಹೀಗೆ ಒಂದು ಕುಟುಂಬದಲ್ಲಿ ಬೇರೆ ಬೇರೆ ಜೀವಿಗಳಿದ್ದರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಸಹಯೋಗದ ಜೀವನ ಹಾಗೂ ಸಹಿಷ್ಣು ಪರಿಸರದ ನೀತಿ ಎಂದರು.

ಜೀವನದಿ ಕಾವೇರಿ ತಲಕಾವೇರಿಯಲ್ಲಿ ಹುಟ್ಟಿದರೂ ಮೂರು ರಾಜ್ಯಗಳ ಕಾವೇರಿಯನ್ನು ಉಳಿಸುವ, ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸದ್ಗುರುಗಳು ಈ ಆಂದೋಲನಕ್ಕೆ ಕರೆ ನೀಡಿ 1 ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿರುವುದು ಶ್ಲಾಘನೀಯವಾಗಿದೆ ಎಂದರು.

ಇಡೀ ಜಗತ್ತಿನಲ್ಲಿ ಇಂತಹ ಉತ್ತಮ ಆಂದೋಲನ ನಡೆದಿಲ್ಲ. ಪರಿಸರ ಸಂರಕ್ಷಣೆಗಾಗಿ 1 ಸಾವಿರಕ್ಕೂ ಹೆಚ್ಚು ಚದರ ಕಿ.ಮೀ. ವ್ಯಾಪ್ತಿಯಲ್ಲಿ ಅರಣ್ಯ ಬೆಳೆಸಲಾಗುತ್ತಿದೆ. ಅರಣ್ಯ, ಜಲ ಎಲ್ಲವನ್ನೂ ರಕ್ಷಿಸಬೇಕು ಎಂದರು.

ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ

ಕೊರೊನಾ ಪ್ರಕರಣ ಬೆಂಗಳೂರಿನಲ್ಲಿ ಒಂದು ಸಾವಿರ ದಾಟಿದೆ. ಜನಸಾಮಾನ್ಯರು ಕೋವಿಡ್ ಸುರಕ್ಷತಾ ಕ್ರಮ ಪಾಲಿಸದಿದ್ದರೆ, ಆಪಾಯವಾಗುತ್ತದೆ. ಮನೆಯಲ್ಲಿರುವ ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸಬೇಕು. ಯುವಜನರು ಅನಗತ್ಯವಾಗಿ ಹೊರಗೆ ಸುತ್ತಾಡಬಾರದು ಎಂದರು.

ತಾಂತ್ರಿಕ ಸಲಹಾ ಸಮಿತಿ ನೀಡಿದ ವರದಿಗೆ ಸರ್ಕಾರ ಹಾಗೂ ಸಾರ್ವಜನಿಕರು ಸ್ಪಂದಿಸಬೇಕು. ಯಾವುದೇ ಚಟುವಟಿಕೆಗೆ ಕೊರೊನಾ ರಿಯಾಯಿತಿ ತೋರುವುದಿಲ್ಲ. ಸರ್ಕಾರ ತನ್ನ ಇತಿಮಿತಿಯಲ್ಲಿ ನಿಯಂತ್ರಣ ಮಾಡುತ್ತಿದೆ. ಜನರಿಗೆ ಕಷ್ಟವಾಗಬಾರದೆಂದು ಹೆಚ್ಚಿನ ನಿರ್ಬಂಧ ಹೇರಿಲ್ಲ. ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸರ್ವಪಕ್ಷ ಸಭೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಕೋರಲಾಗುವುದು. ಚುನಾವಣೆ ಸಮಯದಲ್ಲಿ ಇದು ಅಗತ್ಯ ಎಂದರು.

ಗಡಿಭಾಗಗಳಲ್ಲಿ ಜನರ ಮೇಲೆ ನಿಗಾ ಇರಿಸಲಾಗಿದೆ. ಎಲ್ಲ ಜಿಲ್ಲೆಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.

Leave a Reply