ಬೆಂಗಳೂರು: ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿರುವ ಭ್ರೂಣ ಹತ್ಯೆ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರಿಗೆ ಆಘಾತಕಾರಿ ವಿದ್ಯಮಾನ ಪತ್ತೆಯಾಗಿದೆ. ಈ ಕುಕೃತ್ಯದಲ್ಲಿ ತೊಡಗಿದ್ದ ಆರೋಪದಲ್ಲಿ ಬಂಧಿತ ನರ್ಸ್, ಪ್ರತಿ ತಿಂಗಳಲ್ಲಿ ಸರಾಸರಿ 70 ಮಕ್ಕಳ ಗರ್ಭಪಾತ ಮಾಡಲಾಗುತ್ತಿತ್ತು. ಕನಿಷ್ಠ ತಿಂಗಳಲ್ಲಿ 2 ಪ್ರಕರಣದಲ್ಲಿ 6 ತಿಂಗಳ ಮಕ್ಕಳನ್ನು ಹೊರತೆಗೆದಿದ್ದೇನೆ ಎಂಬ ಭಯಾನಕ ಸಂಗತಿಯನ್ನು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.
ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಂಜುಳಾ ಬಂಧಿತ ಆರೋಪಿ. ವಿಚಾರಣೆ ವೇಳೆ ತಿಂಗಳಲ್ಲಿ ಕನಿಷ್ಠ 2 ಪ್ರಕರಣದಲ್ಲಿ 6 ತಿಂಗಳ ಮಕ್ಕಳನ್ನು ಹೊರತೆಗೆಯುತ್ತಿದ್ದು, ಆ ಮಕ್ಕಳಿಗೆ ಜೀವ ಇರುತ್ತಿತ್ತು ಎಂಬ ಅಮಾನವೀಯ ವಿಷಯವಯನ್ನು ಹೊರಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮಾತಾ ಆಸ್ಪತ್ರೆಯ ಹೆಡ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಂಜುಳಾ ಭ್ರೂಣ ಹತ್ಯೆ ಕುರಿತು ಸ್ಫೋಟಕ ಮಾಹಿತಿಯ ಪೂರ್ಣ ವಿಷಯವನ್ನು ಹೇಳಿದ್ದಾರೆ. 6 ತಿಂಗಳ ಮಗುವಿಗೆ ಧ್ವನಿ ಇರುವುದಿಲ್ಲ. ಮಗು ಹೊರಗೆ ತೆಗೆದ 5 ರಿಂದ 10 ನಿಮಿಷದಲ್ಲಿ ಸಾಯುತ್ತಿದ್ದವು. ಅದನ್ನು ಪೇಪರ್ನಲ್ಲಿ ಸುತ್ತಿ ನಿಸಾರ್ಗೆ ಕೊಡುತ್ತಿದ್ದೆ. ನಿಸಾರ್ ಆ ಮಗುವನ್ನು ತೆಗೆದುಕೊಂಡು ಹೋಗಿ ಕಾವೇರಿ ನದಿಗೆ ಬಿಸಾಕಿ ಬರುತ್ತಿದ್ದ ಎಂದಿದ್ದಾರೆ
12 ವಾರ ಕಳೆದ ಮಕ್ಕಳನ್ನು ಅಬಾರ್ಟ್ ಮಾಡಿ ಮೆಡಿಕಲ್ ವೇಸ್ಟ್ಗೆ ಹಾಕುತ್ತಿದ್ದೆವು. 4 ದಿನಕ್ಕೆ ಮೆಡಿಕಲ್ ವೇಸ್ಟ್ ಅಲ್ಲಿ ಮಗು ಕೊಳೆತು ಹೋಗುತ್ತಿತ್ತು ಎಂಬ ಭಯಾನಕ ವಿಚಾರ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಮಂಜುಳಾ, ಕಳೆದ ಒಂದು ವರ್ಷದಿಂದ ನಾನು ಚಂದನ್ ಬಲ್ಲಾಳ್ ಅವರ ಬಳಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ 70 ಮಕ್ಕಳನ್ನು ಗರ್ಭಪಾತ ಮಾಡಿದ್ದೇನೆ. ಈ ಮೊದಲು ನರ್ಸ್ ರೀಸ್ಮಾ ಗರ್ಭಪಾತ ಮಾಡಿಸುತ್ತಿದ್ದರು. ಅವಳಾದ ಬಳಿಕ ನಾನು ಮಗುವನ್ನು ಗರ್ಭಪಾತ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದೆ. 6 ತಿಂಗಳ ಮಗುವನ್ನು ನಾನು ಗರ್ಭಪಾತ ಮಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ನಿಸಾರ್ ಮಗುವನ್ನು ನದಿಗೆ ಎಸೆದು ಬರುತ್ತಿದ್ದು ಯಾವ ಜಾಗದಲ್ಲಿ ಆ ಮಗುವನ್ನು ಬಿಸಾಕುತ್ತಿದ್ದ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ನದಿಯನ್ನು ಬಿಟ್ಟು ಬೇರೆ ಜಾಗದಲ್ಲಿ ಬಿಸಾಕಿದರೆ ಅವಷೇಶಗಳು ಸಿಕ್ಕಿಬಿಡುತ್ತವೆ. ಅದಕ್ಕೆ ನಿಸಾರ್ ಮಗುವನ್ನು ನದಿಗೆ ಎಸೆಯುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.
ಭ್ರೂಣ ಹತ್ಯೆ ಮಾಡಿದ ಬಳಿಕ ತೀರಾ ರಕ್ತಸ್ರಾವ ಆಗುತ್ತಿತ್ತು. ಆಗ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆರು ತಿಂಗಳ ಮಗುವನ್ನು ಗರ್ಭಪಾತ ಮಾಡುವುದಕ್ಕೆ ಬೇರೆಯೇ ಕಾರಣ ಇತ್ತು. ನಮ್ಮ ಬಳಿ ಅಡ್ವಾನ್ಸ್ ಸ್ಕ್ಯಾನಿಂಗ್ ಯಂತ್ರ ಇರಲಿಲ್ಲ. ಕೆಲವೊಮ್ಮೆ ಹೆಣ್ಣು ಭ್ರೂಣವೇ? ಗಂಡು ಭ್ರೂಣವೇ ಎಂದು ಗೊತ್ತಾಗುತ್ತಿರಲಿಲ್ಲ. ಲಿಂಗ ಪತ್ತೆಯಾಗದೇ ಇದ್ದಾಗ ತಿಂಗಳು ಬಿಟ್ಟು ಬರುವುದಕ್ಕೆ ಹೇಳುತ್ತಿದ್ದೆವು. ಹೀಗಾಗಿ ಮಗುವನ್ನು ಕಂಡು ಹಿಡಿಯಲು ತಡ ಆದಾಗ 6 ತಿಂಗಳ ಮಗುವನ್ನು ಗರ್ಭಪಾತ ಮಾಡಲಾಗುತ್ತಿತ್ತು ಎಂಬ ಸಂಗತಿಯನ್ನು ಹೇಳಿದ್ದಾರೆ.
ಇದಷ್ಟೇ ಅಲ್ಲದೆ, 6 ತಿಂಗಳ ಮಗು ಗರ್ಭಪಾತ ಮಾಡಲು ನಮ್ಮದೇ ಕಾರಣ ಇದೆ. 6 ತಿಂಗಳ ಮಗುವನ್ನು ಸಿಸೇರಿಯನ್ ಮೂಲಕ ಹೆರಿಗೆ ರೀತಿಯಲ್ಲಿ ಮಾಡುತ್ತಿದ್ದೆವು. ಸಿ ಸೆಕ್ಷನ್ ಮೂಲಕ ತೆಗೆದು ಟೇಬಲ್ ಮೇಲೆ ಇಡಲಾಗುತ್ತಿತ್ತು. 5 ರಿಂದ 10 ನಿಮಿಷಕ್ಕೆ ಆ ಮಗು ಸಾಯುತ್ತಿತ್ತು. ತಾಯಿಗೆ ಪ್ರಜ್ಞೆ ಇಲ್ಲದಂತೆ ಮಾಡಿ ಸಿ ಸೆಕ್ಷನ್ ಮಾಡಲಾಗುತ್ತಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.
ಇನ್ನೂ ವೈದ್ಯ ಚಂದನ್ ಬಲ್ಲಾಳ್ ಅವರ ಪುರಾಣವನ್ನು ಪೊಲೀಸರು ನೀಡಿದ್ದಾರೆ. ವಾಸ್ತವದಲ್ಲಿ ಚಂದನ್ ಬಲ್ಲಾಳ್ ಎಂಬಿಬಿಎಸ್ ಪೂರ್ಣಗೊಳಿಸಿರುವ ವೈದ್ಯನೇ ಅಲ್ಲ. ಅವರು ಸ್ಕ್ಯಾನಿಂಗ್ ಮಾಡುವ ಪಾಠವನ್ನೇ ಕಲಿತಿರಲಿಲ್ಲ. ಈತ ಕೇವಲ ಆಯುರ್ವೇದ ಚಿಕಿತ್ಸೆ ಮಾತ್ರ ಕೊಡಬೇಕಿತ್ತು. ನರ್ಸಿಂಗ್ ಹೋಂ ತೆಗೆಯಲು ಈತನಿಗೆ ಅರ್ಹ ವಿದ್ಯಾರ್ಹತೆ ಕೂಡ ಇರಲಿಲ್ಲ. ಆದರೂ ನರ್ಸಿಂಗ್ ಹೋಂ ತೆಗೆದಿದ್ದ ಎಂಬ ಸಂಗತಿ ಬಯಲಾಗಿದೆ.



