ಶಿವಸೇನೆ ಎಂಬುದೊಂದು ಭಯೋತ್ಪಾದಕ ಸಂಘಟನೆ: ಟಿ.ಎ.ನಾರಾಯಣಗೌಡ

4 years ago

ಬೆಂಗಳೂರು/ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಮುಖಂಡರಿಗೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕನ್ನಡ ಕಾರ್ಯಕರ್ತರ ಮೇಲೆ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿರುವುದು ಅಕ್ಷಮ್ಯ. ಸರ್ಕಾರ ಕೂಡಲೇ ಮೊಕದ್ದಮೆ ಕೈಬಿಟ್ಟು ಎಲ್ಲ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ನಡೆಸಬೇಕಾದೀತು ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ಕೊಲೆಯತ್ನದಂಥ ಗಂಭೀರ ಪ್ರಕರಣ ದಾಖಲಿಸುವ ಮೂಲಕ ಸರ್ಕಾರ ಕನ್ನಡಿಗರ ಬೆನ್ನಿಗೆ ಚೂರಿ ಹಾಕಿದೆ. ಬಂಧಿತ ಕನ್ನಡ ಕಾರ್ಯಕರ್ತರ ಬಿಡುಗಡೆಗಾಗಿ ರಾಜ್ಯದಾದ್ಯಂತ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆ ಮೌನ ವಹಿಸಿದರೆ ಚಳವಳಿಯ ತೀವ್ರತೆ ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ ಎಂದಿದ್ದಾರೆ.

ಬಂಧಿತ ಕನ್ನಡ ಕಾರ್ಯಕರ್ತರ ಬಿಡುಗಡೆಗೆ ಸಂಬಂಧಿಸಿದಂತೆ ಕಾನೂನು ಸಹಾಯವನ್ನು ಕರ್ನಾಟಕ ರಕ್ಷಣಾ ವೇದಿಕೆ ನೀಡಲಿದೆ. ಬೆಳಗಾವಿಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಬಂಧಿತ ಕಾರ್ಯಕರ್ತರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಕುಟುಂಬದವರು ಬಯಸಿದರೆ ಎಲ್ಲ ರೀತಿ ಸಹಾಯ ನೀಡಲಾಗುವುದು ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಗಳನ್ನು ಸುಡುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಇದಕ್ಕೆ ಸರಿಯಾದ ಸಂದರ್ಭದಲ್ಲಿ ಸರಿಯಾದ ಉತ್ತರವನ್ನು ನೀಡುತ್ತೇವೆ. ಬಾವುಟ ಸುಟ್ಟ ಹೇಡಿಗಳು ಸಮಾಜಘಾತಕರು. ಶಿವಸೇನೆ ಎಂಬುದೊಂದು ಭಯೋತ್ಪಾದಕ ಸಂಘಟನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.

Leave a Reply